ಮೈಸೂರು: ಮೈದಾನದಲ್ಲಿ ಆಟವಾಡಿಕೊಂಡು ಕಾಲ ಕಳೆಯುವ ವಯಸ್ಸಿನಲ್ಲಿ ಪಕ್ಷಿಪ್ರಪಂಚದ ಕೌತುಕದ ಬೆನ್ನತ್ತಿದ್ದಾಳೆ ಈ ಬಾಲಕಿ. ಪಕ್ಷಿಗಳ ಕುರಿತು ಅಧ್ಯಯನವಷ್ಟೇ ಅಲ್ಲ ಅವುಗಳಿಗೆ ನೀರು, ಆಹಾರ ನೀಡುವುದು, ಛಾಯಾಚಿತ್ರ ತೆಗೆಯುವುದು, ಮಕ್ಕಳಿಗೆ ಪಕ್ಷಿಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾಳೆ.
ಜೆ.ಪಿ.ನಗರದ ಷಡಕ್ಷರಸ್ವಾಮಿ ಹಾಗೂ ಲಾವಣ್ಯ ದಂಪತಿಯ ಪುತ್ರಿ ಎಸ್.ವರ್ಷಿಣಿ, ನಶಿಸುತ್ತಿರುವ ಪಕ್ಷಿ ಸಂಕುಲ ಸಂರಕ್ಷಣೆಗೆ ಮುಂದಾಗುವ ಮೂಲಕ ದೊಡ್ಡವರಿಗೂ ಮಾದರಿಯಾಗಿದ್ದಾಳೆ. ಸದ್ಯ ಪುತ್ರಿ ಏಳನೇ ತರಗತಿ ಅಭ್ಯಾಸ ಮಾಡುತ್ತಿದ್ದಾಳೆ.
ಯಾವುದೇ ಪಕ್ಷಿಗಳ ಬಗ್ಗೆ ಕೇಳಿದರೂ ನಿರರ್ಗಳವಾಗಿ ಮಾತನಾಡುವ ಈ ಬಾಲಕಿಯ ಸ್ವಭಾವ ಅಪರೂಪವಾಗಿದೆ. 2ನೇ ತರಗತಿಯಲ್ಲಿಯೇ ಬೈನಾಕ್ಯೂಲರ್ ಮೂಲಕ ಪಕ್ಷಿಗಳ ಚಲನವಲನ ವೀಕ್ಷಿಸುವ ಹವ್ಯಾಸ ಬೆಳೆಸಿಕೊಂಡಿದ್ದ ಈಕೆ, ನಂತರದಲ್ಲಿ ಪಕ್ಷಿಗಳ ಕುರಿತು ಸಮಗ್ರ ಅಧ್ಯಯನದಲ್ಲಿ ತೊಡಗಿದಳು.
ಪ್ರಾರಂಭದಲ್ಲಿ ಪಕ್ಷಿಗಳು ಗೂಡು ಕಟ್ಟುವ ವಿಧಾನ, ಆಹಾರ ಕ್ರಮವನ್ನು ವೀಕ್ಷಣೆ ಮಾಡುತ್ತಿದ್ದಳು. ಬಳಿಕ ಅವುಗಳ ಛಾಯಾಚಿತ್ರಗಳನ್ನು ಸಂಗ್ರಹಿಸತೊಡಗಿದಳು. ಹೀಗೆ ಪಕ್ಷಿಗಳ ಒಂದೊಂದೆ ನಡವಳಿಕೆಗಳನ್ನು ವೀಕ್ಷಿಸುತ್ತಿದ್ದ ವರ್ಷಿಣಿ, ಇಂದು ಸುಮಾರು 180ಕ್ಕೂ ಹೆಚ್ಚು ಪಕ್ಷಿಗಳನ್ನು ಗುರುತಿಸಿ ಅವುಗಳ ವೈಜ್ಞಾನಿಕ ಹೆಸರನ್ನು ಹೇಳುತ್ತಾರೆ. ಅಲ್ಲದೇ ಅವುಗಳ ಆಹಾರ ಪದ್ಧತಿ, ಜಾತಿ, ವಾಸಿಸುವ ಸ್ಥಳ, ಆಶ್ರಯಕ್ಕೆ ಆಯ್ಕೆಮಾಡಿಕೊಳ್ಳುವ ಮರ, ಸಂತಾನೋತ್ಪತ್ತಿ ಕ್ರಿಯೆ ಎಲ್ಲವನ್ನು ತಿಳಿದುಕೊಂಡಿದ್ದಾಳೆ.
ಚಾಮುಂಡಿ ಬೆಟ್ಟಕ್ಕೆ ಬರುವ ಪ್ರವಾಸಿಗರು ನೀರು ಕುಡಿದು ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಸ್ವಚ್ಛತೆಯ ಪಾಠ ಹೇಳುವ ಜೊತೆಗೆ ಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡುವ ಲೋಟಗಳನ್ನು ತಯಾರಿಸುತ್ತಾಳೆ. ಪ್ರತಿ ಭಾನುವಾರ ಹಾಗೂ ರಜಾ ದಿನಗಳಲ್ಲಿ ಮೈಸೂರಿನಲ್ಲಿರುವ ಅನೇಕ ಉದ್ಯಾನಗಳಲ್ಲಿ ಹಾಗೂ ರಸ್ತೆ ಬದಿಯ ಮರಗಳಿಗೆ ಬಾಟಲಿಯಿಂದ ಮಾಡಿದ ಲೋಟ ಕಟ್ಟಿ ಅವುಗಳಿಗೆ ನೀರು ಮತ್ತು ಆಹಾರ ಹಾಕುವ ಮೂಲಕ ಪಕ್ಷಿ ರಕ್ಷಣೆಗೆ ಮುಂದಾಗಿದ್ದಾಳೆ.
ಮೊಬೈಲ್ ತರಂಗಗಳಿಂದ ಗುಬ್ಬಿ ಸೇರಿದಂತೆ ಅಳಿವಿನ ಅಂಚಿಗೆ ತಲುಪಿರುವ ಪಕ್ಷಿಗಳ ಬಗ್ಗೆ ಲೇಖನ ಬರೆದು, ಶಾಲೆ, ಕಾಲೇಜುಗಳಲ್ಲಿ ಉಪನ್ಯಾಸ ನೀಡುತ್ತಾಳೆ. ಆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾಳೆ.
ಪಕ್ಷಿಗಳ ಕುರಿತು ಉಪನ್ಯಾಸ: ಬಾಲವನ್ನು ಕೆದರಿದಾಗ ಬೀಸಣಿಗೆಯಂತೆ ಆಕರ್ಷಕವಾಗಿ ಕಾಣುವುದರಿಂದ ಬೀಸಣಿಗೆ ಪಕ್ಷಿಯನ್ನು ಇಂಗ್ಲಿಷ್‌ನಲ್ಲಿ ವೈಟ್ ಸ್ಪಾಟೆಡ್ ಫಾಂಟಲ್ ಎನ್ನುತ್ತಾರೆ. ಇದು ಸುಮಾರು 18 ಸೆ.ಮೀ. ನಿಂದ 20 ಸೆ.ಮೀ. ಉದ್ದ ಇದ್ದು ಗಾತ್ರದಲ್ಲಿ ಗುಬ್ಬಚ್ಚಿಗಿಂತಲೂ ಸ್ವಲ್ಪ ದೊಡ್ಡದಾಗಿರುತ್ತದೆ. ಕಂದು ಬಣ್ಣದ ಪಕ್ಷಿಯ ಕಣ್ಣು ಮತ್ತು ಕತ್ತಿನ ಬಳಿಯಲ್ಲಿ ಬಿಳಿ ಗೆರೆ ಇರುತ್ತದೆ.
ಮೈಸೂರು ನಗರದಿಂದ 18 ಕಿ.ಮೀ ದೂರದಲ್ಲಿರುವ ಹದಿನಾರು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಸುಮಾರು 350 ಎಕರೆಗಳ ವಿಶಾಲವಾದ ಕೆರೆ ಹಲವಾರು ಪಕ್ಷಿಗಳ ಆಶ್ರಯ ತಾಣವಾಗಿದೆ. ಇಲ್ಲಿ ಬಿಳಿ ನಾಮದ ಕೋಳಿ, ಚುಕ್ಕಿಕೊಕ್ಕಿನ ಬಾತುಕೋಳಿ, ಬಿಳಿಬಾತು, ಬಗೆ-ಬಗೆಯ ಬೆಳಕ್ಕಿಗಳು, ಮೈನಾ, ಕೆಸರು ಗುಪ್ಪೆ , ಬೂದು ಕೊಕ್ಕರೆ , ಕೆನ್ನೀಲಿ ನೀರು ಕೋಳಿ, ನೀಲಿ ನಾಮಕೋಳಿ, ನೀರು ಕಾಗೆ, ಹಾವು-ಹಕ್ಕಿ, ಕಿರು ಮಿಂಚುಳ್ಳಿ, ಮರಳು ಪಿ.ಪಿ, ಗುಳುಮುಳುಕಿ, ಮೀಸೆರೇವಿ ಸೇರಿದಂತೆ 150ಕ್ಕೂ ಪಕ್ಷಿಗಳ ಹೆಸರು ಹೇಳುತ್ತಾ ಸರಾಗವಾಗಿ ಅವುಗಳ ಬಗ್ಗೆ ಉಪನ್ಯಾಸ ನೀಡುತ್ತಾಳೆ ವರ್ಷಿಣಿ.
ಪುಸ್ತಕ ಪ್ರಿಯೆ: ಏಳನೇ ತರಗತಿ ಓದುತ್ತಿರುವ ಈಕೆ ಪಕ್ಷಿಗಳ ಸಂರಕ್ಷಣೆಗಾಗಿಯೇ ಕೆ.ಶಿವರಾಮಕಾರಂತ ಅವರ ಪಕ್ಷಿಗಳ ಅದ್ಭುತ ಲೋಕ, ಹಿರಿಯ ಕಿರಿಯ ಪಕ್ಷಿಗಳು, ಪೂರ್ಣಚಂದ್ರ ತೇಜಸ್ವಿ ಅವರ ಹಕ್ಕಿ–ಪುಕ್ಕ, ಸಲೀಂ
ಅಲಿ ಅವರ ಸಾಮಾನ್ಯ ಹಕ್ಕಿಗಳು, ಸೌತ್ ಇಂಡಿಯನ್ ಬರ್ಡ್ಸ್, ಕಿರಣ್ ಸ್ಟಾಂಡರ್ಡ್ ಅವರ ಬರ್ಡ್ಸ್ ಆಫ್ ಅವರ್ ನೈಬರ್‌ಹುಡ್, ಆರ್.ಕೆ.ಮಧು ಅವರ ಬಣ್ಣದ ಬಾನಾಡಿ ಸೇರಿದಂತೆ ವನ್ಯಜೀವಿಗಳ ಅನೇಕ ಪುಸ್ತಕಗಳನ್ನು ಅಧ್ಯಯನ
ಮಾಡಿದ್ದಾಳೆ.
ಕಾವಾಡಿಗರ ಮಕ್ಕಳಿಗೆ ಪಾಠ: ನಾಡಹಬ್ಬವಾದ ಮೈಸೂರು ದಸರಾಕ್ಕೆ ಬರುವ ಮಾವುತರು ಮತ್ತು ಕಾವಾಡಿಗರ ಮಕ್ಕಳಿಗೆ ವನ್ಯಜೀವಿಗಳ ವೈಶಿಷ್ಟ್ಯವನ್ನು ತಿಳಿಸಿಕೊಡುವ ಜೊತೆಗೆ ಪಕ್ಷಿಗಳ ಕುರಿತು ಉಪನ್ಯಾಸವನ್ನು ಸಹ
ನೀಡುತ್ತಾಳೆ.
ಕರ್ನಾಟಕ ಅರಣ್ಯ ಇಲಾಖೆ ವರ್ಷಿಣಿಯ ಸಾಧನೆ ಗುರುತಿಸಿ ಸ್ವಯಂ ಸೇವಕಿ ಪತ್ರವನ್ನು ನೀಡಿದೆ. ವನ್ಯಜೀವಿ ಸಂರಕ್ಷಣೆ ಮಾಡುವ ‘ಇಂಡಿಯನ್ ವೈಲ್ಡ್ ಲೈಫ್ ಎಕ್ಸ್‌ಪ್ಲೋರರ್ಸ್’ ಸಂಸ್ಥೆಯಿಂದ ಸಾಧನಾ ಪ್ರಮಾಣ ಪತ್ರ ಪಡೆದಿದ್ದು, 2018ರಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಯೂತ್‌ಕ್ಲಬ್ ಸದಸ್ಯೆಯಾಗಿ, ‘ಸೇವ್ ಎಲಿಫ್ಯಾಂಟ್’ ಎನ್‌ಜಿಒನಲ್ಲಿ ಸದಸ್ಯತ್ವನ್ನು
ಪಡೆದುಕೊಂಡಿದ್ದಾಳೆ.
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜಿಲ್ಲಾಮಟ್ಟದ ಸಾಧಕರ ಪ್ರಶಸ್ತಿ (2017–18) ಹಾಗೂ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ 2017ರ ‘ಪರಿಸರ ಪ್ರೇಮಿ’ ಪ್ರಶಸ್ತಿಯನ್ನು
ನೀಡಿ ಗೌರವಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.