ಮೈಸೂರು: ‘ಬಿಜೆಪಿ–ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ನಡೆಯುವುದಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಕಾಂಗ್ರೆಸ್–ಜೆಡಿಎಸ್ ಮೈತ್ರಿಯನ್ನು ವಿರೋಧಿಸಿಯೇ ತಾನೆ ನಾವು ಹೊರಬಂದದ್ದು? ನಂತರದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಕಥೆ ಏನಾಯಿತು, ಅಧಿಕಾರಕ್ಕೆ ಬಂದವರು ಯಾರು? ಅದೇ ಪರಿಸ್ಥಿತಿ ಈಗ ಮೈತ್ರಿ ಪಕ್ಷಗಳಿಗೂ ಬರಲಿದೆ’ ಎಂದರು.
‘ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ– ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ರಾಜ್ಯದಲ್ಲಿ ನಡೆದ ಮೊದಲ ಚುನಾವಣೆ ಇದಾಗಿತ್ತು. ಇದು, ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ’ ಎಂದು ಪ್ರತಿಕ್ರಿಯಿಸಿದರು.
‘ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಆಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ನೈತಿಕತೆ ಇದ್ದರೆ, ನಾವು ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ವಿರೋಧಿಗಳು ಎಂದು ಘೋಷಿಸಲಿ. ನಮ್ಮ ಪಕ್ಷಗಳ ಕಾರ್ಯಕರ್ತರು ಗ್ಯಾರಂಟಿಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಡಿ ಎಂದು ಕರೆ ನೀಡಲಿ’ ಎಂದು ಸವಾಲು ಹಾಕಿದರು.
‘ವಿರೋಧ ಪಕ್ಷದವರು ಗ್ಯಾರಂಟಿ ಲಾಭವನ್ನು ಒಳಗೊಳಗೇ ತೆಗೆದುಕೊಳ್ಳುವುದು, ಹೊರಗಡೆ ಬಂದು ವಿರೋಧಿಸುವುದು ಎಷ್ಟು ಸರಿ?’ ಎಂದು ಕೇಳಿದರು.
‘ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಕಾಲಕಾಲಕ್ಕೆ ಅನುದಾನ ಬರುತ್ತಿದೆ. ವಿಧಾನಸೌಧದ ಎದುರು ಹುಂಡಿ ಇಡಿ ಎಂದು ಹೇಳುವ ವಿಜಯೇಂದ್ರ ಎಷ್ಟು ಸತ್ಯವಂತ ಎನ್ನುವುದು ಜನರಿಗೆ ಗೊತ್ತಿದೆ. ಅಪ್ಪನನ್ನು ಜೈಲಿಗೆ ಕಳುಹಿಸಿದವರು ಯಾರು ಎಂಬುದೂ ತಿಳಿದಿದೆ. ಬಿಜೆಪಿ ಸರ್ಕಾರದಲ್ಲಿ ಖಜಾನೆ ತುಂಬಿ ತುಳುಕುತ್ತಿತ್ತಾ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.