ಮೈಸೂರು: ‘ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ’ ಎಂದು ಕಾಂಗ್ರೆಸ್‌ಗೆ ಪಂಥಾಹ್ವಾನ ನೀಡಿದ ‘ಮೈಸೂರು ಚಲೋ’ ಪಾದಯಾತ್ರೆಯು, ‘ಸದ್ಯದಲ್ಲೇ ಕರ್ನಾಟಕದಲ್ಲಿ ಬಿಜೆಪಿ–ಜೆಡಿಎಸ್ ನೇತೃತ್ವದ ಸರ್ಕಾರ ತರುವ ಸಂಕಲ್ಪ’ದೊಂದಿಗೆ ಶನಿವಾರ ಇಲ್ಲಿ ಸಮಾರೋಪಗೊಂಡಿತು.
ಬೆಂಗಳೂರಿನಿಂದ ಎಂಟು ದಿನಗಳ ಕಾಲ ನಡೆದ ಪಾದಯಾತ್ರೆಯ ಸಮಾರೋಪದ ಅಂಗವಾಗಿ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಜೊತೆಗೂಡಿದ ಬಿಜೆಪಿ–ಜೆಡಿಎಸ್ ನಾಯಕರು, ಮುಖ್ಯಮಂತ್ರಿ ರಾಜೀನಾಮೆ ಕೊಡುವವರೆಗೂ ಹೋರಾಟ ಮುಂದುವರಿಸುವ ನಿರ್ಣಯ ಪ್ರಕಟಿಸಿದರು. ‘ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಕಿತ್ತೊಗೆದು ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಸರ್ಕಾರ ತರಲು ಸಿದ್ಧತೆ ಆರಂಭಿಸಲಾಗುವುದು’ ಎಂಬ ಸೂಚನೆಯನ್ನೂ ನೀಡಿದರು.
ಚುನಾವಣೆಗೆ ಸಜ್ಜಾಗಿರುವ ಉತ್ಸಾಹದಲ್ಲೇ ಮಾತನಾಡಿದ ಉಭಯ ಪಕ್ಷಗಳ ನಾಯಕರು, ಕಾರ್ಯಕ್ರಮದುದ್ದಕ್ಕೂ ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್ ಜೋಡಿ ವಿರುದ್ಧ ಹರಿಹಾಯ್ದರು.
ಶುಕ್ರವಾರ ನಡೆದಿದ್ದ ಕಾಂಗ್ರೆಸ್‌ನ ‘ಜನಾದೇಶ’ ಸಮಾವೇಶದಲ್ಲಿನ ಟೀಕೆಗಳಿಗೆ ಪ್ರತ್ಯಾಸ್ತ್ರ ಪ್ರಯೋಗಿಸುತ್ತ, ‘ನಮ್ಮ ವಿರುದ್ಧದ ಯಾವುದೇ ಪ್ರಕರಣಗಳ ತನಿಖೆಗೂ ಸಿದ್ಧ. ತಾಕತ್ತಿದ್ದರೆ ತನಿಖೆ ಮಾಡಿ’ ಎಂದು ಸವಾಲೆಸೆದರು.
‘ನಮ್ಮ ಹೋರಾಟವು ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವವರೆಗೆ ಮುಂದುವರಿಯಲಿದೆ. ಜನಾಕ್ರೋಶಕ್ಕೆ ಧ್ವನಿಯಾಗಲಿದ್ದೇವೆ. ಪ್ರಾಮಾಣಿಕ ಸರ್ಕಾರ ಬರುವವರೆಗೂ ವಿರಮಿಸುವುದಿಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನದಾಸ್ ಅಗರವಾಲ್ ಹೇಳಿದರು. ‘ಸರ್ಕಾರ ಬದಲಿಸುವ ಹೋರಾಟದಲ್ಲಿ ಕೈ ಜೋಡಿಸಿ’ ಎಂದು ಜನರಲ್ಲಿ ಮನವಿ ಮಾಡಿದರು.
‘ಡಿ.ಕೆ. ಶಿವಕುಮಾರ್ ಅವರ ಆಸ್ತಿ 2008ರಲ್ಲಿ ₹75 ಕೋಟಿ ಇದ್ದದ್ದು, 2023ರಲ್ಲಿ ₹1,414 ಕೋಟಿಯಾಗಿದೆ. ಪ್ರಾಮಾಣಿಕವಾಗಿ ಇಷ್ಟು ಸಂಪಾದಿಸಲು ಆಗದು. ಇದೆಲ್ಲವೂ ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಗಳಿಸಿದ ಹಣ’ ಎಂದು ಆರೋಪಿಸಿದರು.
ಅವರಿಗೆ ಧ್ವನಿಗೂಡಿಸಿದ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ‘ನನ್ನ ಬದುಕಿನ ಕೊನೆಯ ಉಸಿರಿರುವವರೆಗೂ ರಾಜಕೀಯದಲ್ಲಿದ್ದು ನಿಮ್ಮನ್ನು ಮನೆಗೆ ಕಳಿಸುವೆ’ ಎಂದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ವಿರುದ್ಧ ಗುಡುಗಿದರು.
‘ನಿಮ್ಮ ಪಾಪದ ಕೊಡ ತುಂಬಿ ತುಳುಕುತ್ತಿದೆ. ಯಾವಾಗ ಏನು ಆಗುತ್ತದೋ ಗೊತ್ತಿಲ್ಲ. ಇಂತಹ ಭ್ರಷ್ಟ ಮುಖ್ಯಮಂತ್ರಿ– ಉಪ ಮುಖ್ಯಮಂತ್ರಿ ಇರುವವರೆಗೂ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ರಾಜ್ಯದ ಜನ ಬೇಗ ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ. ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ. ಈಗ ಚುನಾವಣೆ ನಡೆದರೂ ಬಿಜೆಪಿ 130- 140 ಸ್ಥಾನ ಗೆಲ್ಲಲಿದೆ’ ಎಂದರು.
‘ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ- ಜೆಡಿಎಸ್ ಸರ್ಕಾರ ತರಲು ಜನ ಕಾರಣಕರ್ತರಾಗಬೇಕು’ ಎಂದು ಕೋರಿದರು.
ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಅವರ ಕುಟುಂಬದ ನಿವೇಶನ ಪ್ರಕರಣ ಕುರಿತ ‘5,000 ನಿವೇಶನಗಳನ್ನು ನುಂಗಿದ ಆ 14 ನಿವೇಶನಗಳು’ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಇದಕ್ಕೂ ಮುನ್ನ ಅರಮನೆ ಆವರಣದಿಂದ ಮಹಾರಾಜ ಕಾಲೇಜು ಮೈದಾನದವರೆಗೆ ಪಾದಯಾತ್ರೆ ನಡೆಯಿತು.
ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ವೇದಿಕೆಯಲ್ಲಿದ್ದರೂ ಮಾತನಾಡುವ ಅವಕಾಶ ಸಿಗಲಿಲ್ಲ.
ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ವಂಚನೆ ಮಾಡಿದೆ. ಅದನ್ನು ಬುಡಸಮೇತ ಕಿತ್ತು ಹಾಕಲು ಈ ಹೋರಾಟ. ನಮಗೆ ಅಧಿಕಾರದ ದಾಹ ಇಲ್ಲಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಕಾಂಗ್ರೆಸ್‌ನದ್ದು ಜನಾಂದೋಲನ ಅಲ್ಲ , ಧನದ ಆಂದೋಲನ. ಈಗ ನಿವೇಶನ ವಾಪಸ್ ಕೊಡುತ್ತೇನೆ ಎನ್ನುತ್ತಿದ್ದಾರೆ. ಕದ್ದ ಮಾಲು ವಾಪಸ್ ಕೊಟ್ಟ ಮಾತ್ರಕ್ಕೆ ಕಳ್ಳನನ್ನು ಬಿಡಲು ಸಾಧ್ಯವೇ?ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಪ್ಪು ಕಾಗೆ. ಕಾಗೆಯಲ್ಲಿ ಕಪ್ಪು ಚುಕ್ಕೆ ತೋರಿಸಿ ಎಂದರೆ ಹೇಗೆ? ದಲಿತರಿಗೆ ಮುಂದಿನಿಂದ ಪ್ರೀತಿ, ಹಿಂದಿನಿಂದ ಚಾಕು ಎಂಬ ತಂತ್ರ ಅವರದ್ದುಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ ವಿಪಕ್ಷ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.