ADVERTISEMENT

ಮಹೇಶ್‌ ಬಿಜೆಪಿಗಾದರೂ ಬದ್ಧವಾಗಿರಲಿ: ಬಿಎಸ್‌ಪಿಯ ಕೃಷ್ಣಮೂರ್ತಿ ಮಾತಿನ ಚಾಟಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 9:08 IST
Last Updated 13 ಆಗಸ್ಟ್ 2021, 9:08 IST
ಎಂ.ಕೃಷ್ಣಮೂರ್ತಿ
ಎಂ.ಕೃಷ್ಣಮೂರ್ತಿ   

ಮೈಸೂರು: ಶಾಸಕ ಎನ್.ಮಹೇಶ್ ಬಿಎಸ್‌ಪಿಯಲ್ಲಿ ನಿಯತ್ತಿನಿಂದ ಇರಲಿಲ್ಲ. ಕನಿಷ್ಠ ಬಿಜೆಪಿ ಪಕ್ಷಕ್ಕಾದರೂ ನಿಯತ್ತಿನಿಂದ ಇರಲಿ ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.

ಬಿ.ಎಸ್.ಯಡಿಯೂರಪ್ಪ ಅವರ ಬೆನ್ನಿಗೆ ಅವರೆ ಕರೆದುಕೊಂಡು ಬಂದ ಶಾಸಕರು, ಮಠಾಧೀಶರು, ರಾಜ್ಯದಲ್ಲಿ ಪ್ರಬಲವಾಗಿದ್ದ ಸಮುದಾಯ ಇತ್ತು. ಆದರೂ, ಹೈಕಮಾಂಡ್ ಹೇಳಿದ ತಕ್ಷಣ ರಾಜೀನಾಮೆ ನೀಡಿ ತಮ್ಮ ನಿಯತ್ತನ್ನು ಪ್ರದರ್ಶಿಸಿದ್ದಾರೆ. ಅವರನ್ನು ನೋಡಿಯಾದರೂ ಮಹೇಶ್‌ ಕಲಿಯಬೇಕು ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಚಾಟಿ ಬೀಸಿದರು.

ಬಿಎಸ್‌ಪಿಯನ್ನು ತಾಯಿ ಎಂದು ತಿಳಿದಿದ್ದೆ. ತಾಯಿಯೇ ಮೋಸ ಮಾಡಿದ್ದಾಳೆ ಎಂದು ಮಹೇಶ್‌ ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಅವರಿಗೆ ಮೋಸವಾಗಿಲ್ಲ. ಮಹೇಶ ಅವರಿಂದಲೇ ಪಕ್ಷಕ್ಕೆ ವಿಶ್ವಾಸದ್ರೋಹವಾಗಿದೆ ಎಂದು ಹೇಳಿದರು.

ADVERTISEMENT

ಸತತ 7 ಚುನಾವಣೆಗಳಲ್ಲಿ ಸೋತರೂ ಬಿಎಸ್‌ಪಿ ಅವರಿಗೆ ಓಡಾಡಲು ಕಾರು ನೀಡಿತು. ಮತ್ತೆ ಮತ್ತೆ ಟಿಕೆಟ್ ಕೊಟ್ಟಿತು. ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಮಾಯಾವತಿ ಒತ್ತಡ ಹೇರಿ ಸಚಿವ ಸ್ಥಾನ ಕೊಡಿಸಿದರು ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವಾಗ ಸದನದಲ್ಲಿ ಹಾಜರಿದ್ದು ತಟಸ್ಥರಾಗಿರಿ ಎಂದು ಪಕ್ಷ ಸೂಚಿಸಿತ್ತು. ಆದರೆ, ಸದನಕ್ಕೆ ಗೈರಾಗಿ ತಲೆಮರೆಸಿಕೊಂಡಿದ್ದು ಏಕೆ ಎಂಬ ಪ್ರಶ್ನೆಗೆ ಮಹೇಶ್ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಅತಿ ಹೆಚ್ಚು ಸುಳ್ಳು ಹೇಳಿದವರಿಗೆ ನೀಡಲಾಗುವ ನೊಬೆಲ್ ಬಹುಮಾನವನ್ನು ನರೇಂದ್ರ ಮೋದಿಗೆ ನೀಡಬೇಕು ಎಂದು ಹಿಂದೆ ಮಹೇಶ್‌ ಹೇಳಿದ್ದರು. ಈಗ ಅವರ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಒಂದು ವೇಳೆ ತಾಕತ್ತು ಇದ್ದರೆ ಅಂದು ಹೇಳಿದ ಮಾತನ್ನು ಈಗ ಮತ್ತೆ ಹೇಳಲಿ. ವಚನಭ್ರಷ್ಟ ಪ್ರಧಾನಿ ಎಂಬ ಹೇಳಿಕೆಯನ್ನು ಪುನರುಚ್ಚರಿಸಲಿ ಎಂದು ಹರಿಹಾಯ್ದರು.

ರಾಜ್ಯ ಘಟಕದ ಕಾರ್ಯದರ್ಶಿ ಶಿವಮಾದೆಗೌಡ, ನಗರ ಘಟಕದ ಅಧ್ಯಕ್ಷ ಶ್ರೀನಿವಾಸಪ್ರಸಾದ್, ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.