ಮೈಸೂರು: ‘ದೈಹಿಕ ಸದೃಢತೆ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರಿಯಾಶೀಲರಾಗಿರುವುದು ಮುಖ್ಯವಾಗುತ್ತದೆ’ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಹೇಳಿದರು.
ಎಆರ್‌ಡಿಎಸ್‌ಐ (ಭಾರತೀಯ ಮರೆಗುಳಿತನ ಹಾಗೂ ಸಂಬಂಧಿಸಿದ ಕಾಯಿಲೆಗಳ ಸೊಸೈಟಿ) ಮೈಸೂರು ಶಾಖೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು, ಶಾರದಾವಿಲಾಸ ಫಾರ್ಮಸಿ ಕಾಲೇಜು, ಅಪ್ನಾದೇಶ್ ಹಾಗೂ ರೋಟರಿ ಮೈಸೂರು ಸಹಯೋಗದಲ್ಲಿ ಇಲ್ಲಿನ ರೋಟರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ‘ಬುದ್ಧಿಮಾಂದ್ಯ ಸ್ನೇಹಿ ಮೈಸೂರು’ (ಡಿಮೆನ್ಸಿಯಾ ಫ್ರೆಂಡ್ಲಿ ಮೈಸೂರು) ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ನಾನು 55 ವರ್ಷದಿಂದಲೂ ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದೇನೆ. ಬೆಳಿಗ್ಗೆ 6.30ರಿಂದ ಒಂದು ತಾಸಿನವರೆಗೆ ಸೂರ್ಯ ನಮಸ್ಕಾರ, ವಿವಿಧ ಆಸನಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ನಿತ್ಯ ಸರಾಸರಿ 200 ಕಿ.ಮೀ. ಪ್ರವಾಸ ಮಾಡುತ್ತೇನೆ. ನಾನು ಸದಾ ಕ್ರಿಯಾಶೀಲವಾಗಿರುವುದಕ್ಕೆ ಯೋಗಾಭ್ಯಾಸವೇ ಕಾರಣ. ಪ್ರತಿಯೊಬ್ಬರೂ ನಿತ್ಯವೂ ಸರಾಸರಿ ಒಂದು ಗಂಟೆಯಾದರೂ ವಾಯುವಿಹಾರ ಅಥವಾ ಯೋಗಾಭ್ಯಾಸವನ್ನು ಮಾಡಬೇಕು’ ಎಂದು ಸಲಹೆ ನೀಡಿದರು.
ಫಿಟ್‌ನೆಸ್ ಅಗತ್ಯ: ‘ಪ್ರಸ್ತುತ ಆಹಾರ, ನೀರು, ಗಾಳಿ ಹಾಗೂ ವಾತಾವರಣ ಎಲ್ಲವೂ ಮಲಿನವಾಗಿದೆ. ಹೀಗಾಗಿ, ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಮಹತ್ವ ಕೊಡಬೇಕು. ಯೋಗಾಸನ, ವ್ಯಾಯಾಮ ಅಥವಾ ವಾಯುವಿಹಾರದ ಮೂಲಕ ಫಿಟ್‌ನೆಸ್ ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.
‘ಮೇಘಾಲಯದ ಬಹಳಷ್ಟು ಮಂದಿ ದೆಹಲಿಯವರು ರಾಜ್ಯಪಾಲರಾಗಿ ಬರುತ್ತಾರೆ ಎಂದುಕೊಂಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನವನಾದ ನನಗೆ ಅವಕಾಶ ನೀಡಿದ್ದಾರೆ. ಅಲ್ಲಿನ ಜನರು, ನಿಮ್ಮನ್ನು ನಮ್ಮವ ಎಂದುಕೊಳ್ಳಬೇಕು; ಆ ರೀತಿ ನೀವು ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ರಾಜಭವನದಿಂದ ಹೊರಬರಬೇಕು. ಸಾಮಾನ್ಯರ ರಾಜ್ಯಪಾಲರ ಎನಿಸಿಕೊಳ್ಳಬೇಕು. ಆದಿವಾಸಿಗಳನ್ನು ಭೇಟಿಯಾಗಬೇಕು; ಶಾಲೆಗಳಿಗೆ ಹೋಗಬೇಕು. ಕೇಂದ್ರದಿಂದ ಬರುವ ಅನುದಾನ ಸಾಮಾನ್ಯ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದೂ ಸೂಚಿಸಿದ್ದಾರೆ’ ಎಂದರು.
ಬಹು ಚಿಕಿತ್ಸಾ ಪದ್ಧತಿ ಬೇಕು: ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಗಜಾನನ ಹೆಗಡೆ ಮಾತನಾಡಿ, ‘ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿವೆ. ಇವುಗಳನ್ನು ಒಂದೇ ಚಿಕಿತ್ಸಾ ಪದ್ಧತಿಯಿಂದ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಬಹು ಚಿಕಿತ್ಸಾ ಪದ್ಧತಿಗಳ ಮೂಲಕ ನಿರ್ವಹಣೆ ಇಂದಿನ ಅಗತ್ಯವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಆಯುರ್ವೇದ ಚಿಕಿತ್ಸಾ ಪದ್ಧತಿ ಎಂದರೆ ಉತ್ತಮ ಜೀವನಕ್ರಮ ಅನುಸರಿಸುವುದು, ಪಥ್ಯ, ಧ್ಯಾನ ಹಾಗೂ ಔಷಧಿಗಳ ಪ್ರಯೋಗದ ಸಮ್ಮಿಶ್ರಣವೇ ಆಗಿದೆ. ಇದು ವ್ಯಕ್ತಿ ಹಾಗೂ ರೋಗವೆರಡನ್ನೂ ಗುರಿಯಾಗಿಟ್ಟುಕೊಂಡು ಚಿಕಿತ್ಸೆ ಕೊಡುವುದೇ ಆಗಿದೆ. ಇದಕ್ಕಾಗಿ ಯಾವ ಸಂದರ್ಭದಲ್ಲಿ ಯಾವ ಪದ್ಧತಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬ ಜಾಗೃತಿಯನ್ನು ಜನರಲ್ಲಿ ಮೂಡಿಸಬೇಕಾದ ಅಗತ್ಯವಿದೆ’ ಎಂದು ತಿಳಿಸಿದರು.
‘ಮನಸ್ಸು ಮತ್ತು ಇಂದ್ರಿಯವನ್ನು ನಿಗ್ರಹಿಸದೇ ಕೇವಲ ಯೋಗಾಸನ ಮಾಡುವುದರಿಂದ ಪ್ರಯೋಜನವಾಗದು. ಎಲ್ಲ ಚಿಕಿತ್ಸಾ ಪದ್ಧತಿಯಲ್ಲೂ ಇರುವ ವೈಜ್ಞಾನಿಕ ಅಂಶಗಳನ್ನು ಬಳಸಿಕೊಂಡರೆ ರೋಗಗಳ ನಿರ್ವಹಣೆ ಕಷ್ಟವೇನೂ ಆಗಲಾರದು’ ಎಂದು ಹೇಳಿದರು.
ಇದೇ ವೇಳೆ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ವಿಜಯಶಂಕರ್ ಅವರನ್ನು ಸನ್ಮಾನಿಸಿದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ.ಲಕ್ಷ್ಮಿನಾರಾಯಣ ಶೆಣೈ, ರೋಟರಿ ಮೈಸೂರು ಅಧ್ಯಕ್ಷ ಪ್ರವೀಣ್, ಎಆರ್‌ಡಿಎಸ್ಐ ಮೈಸೂರು ಅಧ್ಯಕ್ಷ ಹನುಮಂತಾಚಾರ್ ಜೋಶಿ ಪಾಲ್ಗೊಂಡಿದ್ದರು.
‘ಮೈಸೂರು ಮಾದರಿ ಅಳವಡಿಕೆಗೆ’
‘ಮೇಘಾಲಯದಲ್ಲಿ ಆಸ್ತಿಯ ಹಕ್ಕು ಕುಟುಂಬದ ಕಿರಿಯ ಮಗಳಿಗೆ ಇದೆ. ಮದುವೆಯಾದ ನಂತರ ಗಂಡ ಪತ್ನಿಯ ಮನೆಯಲ್ಲಿರಬೇಕು. ಶೇ 90ರಷ್ಟು ಆದಿವಾಸಿಗಳೇ ಇದ್ದರೂ ಅಲ್ಲಿ ಒಬ್ಬೇ ಒಬ್ಬ ಭಿಕ್ಷುಕರೂ ಕಾಣಿಸುವುದಿಲ್ಲ. ‘ನವ ಶಿಲ್ಲಾಂಗ್ ನಗರ’ವನ್ನು ₹ 10 ಸಾವಿರ ಕೋಟಿಯಲ್ಲಿ ನಿರ್ಮಿಸಲಾಗುತ್ತಿದ್ದು ಅದಕ್ಕೆ ಮೈಸೂರನ್ನು ಮಾದರಿಯಾಗಿ ಇಟ್ಟುಕೊಳ್ಳಿ; ಇಲ್ಲಿ ಮೈಸೂರು ಮಹಾರಾಜರು ಒದಗಿಸಿದ್ದ ಮೂಲಸೌಲಭ್ಯಗಳನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ವಿಜಯಶಂಕರ್ ಹೇಳಿದರು. ‘ಮೇಘಾಲಯವೂ ಈಗ ಮೈಸೂರಿನವರದ್ದೆ. ಅಲ್ಲಿಗೆ ಇಲ್ಲಿಯ ಪ್ರವಾಸಿಗರು ಬರಬೇಕು’ ಎಂದು ಕೋರಿದರು.
ಏನಿದು ಕಾರ್ಯಕ್ರಮ?
‘ಬುದ್ಧಿಮಾಂದ್ಯ ಸ್ನೇಹಿ ಮೈಸೂರು’ ಕಾರ್ಯಕ್ರಮದಲ್ಲಿ ನಗರದಲ್ಲಿ ಎಷ್ಟು ಜನ ಅಂತಹ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ನಡೆಯಲಿದೆ. ಆಕ್ಟಿವಿಟಿ ಸೆಂಟರ್ ಆರಂಭಿಸಲು ಉದ್ದೇಶಿಸಲಾಗಿದೆ. ಬ್ರೇನ್ ಜಿಮ್ಮಿಂಗ್ ಕೂಡ ಮಾಡಲಾಗುವುದು. ಲಭ್ಯ ಆ್ಯಪ್‌ಗಳ ಬಗ್ಗೆ ಪ್ರಚಾರ ಮಾಡಲಾಗುವುದು. ಇದೆಲ್ಲವನ್ನೂ ಸ್ವರ್ಕಾರೇತರ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಮಾಡಲಾಗುತ್ತಿದೆ’ ಎಂದು ಆಯೋಜಕರು ತಿಳಿಸಿದರು.
40 ವರ್ಷ ವಯಸ್ಸಿನ ನಂತರ ಒಂದಿಲ್ಲೊಂದು ಸಮಸ್ಯೆಗಳು ಬರುತ್ತವೆ. ವಯಸ್ಸಾದಂತೆ ಮರೆಗುಳಿತನದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಒಂಟಿಯಾಗಿರುವುದು ಬುದ್ಧಿಮಾಂದ್ಯತೆಗೆ ದೊಡ್ಡ ಕಾರಣ.-ಸಿ.ಎಚ್. ವಿಜಯಶಂಕರ್, ಮೇಘಾಲಯ ರಾಜ್ಯಪಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.