ಮೈಸೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಶುದ್ಧ ಹಸ್ತ ಎನ್ನುವುದಾದರೆ ಪ್ರಕರಣವನ್ನು ಸಿಬಿಐ ಇಲ್ಲವೇ ಲೋಕಾಯುಕ್ತಕ್ಕೆ ವಹಿಸಲಿ?’ ಎಂದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
‘ಶುಕ್ರವಾರ ನಡೆದ ಕಾಂಗ್ರೆಸ್‌ನ ಸಮಾವೇಶದ ಬಗ್ಗೆ ನಾವೂ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವು. ಅಲ್ಲಿಯೇ ರಾಜೀನಾಮೆ ಘೋಷಿಸಬಹುದು ಎಂದುಕೊಂಡಿದ್ದೆವು. ಆದರೆ ಸಿದ್ದರಾಮಯ್ಯ ಆಡಿದ್ದೇ ಆಡು ಕಿಸಬಾಯಿ ದಾಸ ಎಂಬಂತೆ ಹೇಳಿದ್ದನ್ನೇ ಹೇಳಿದ್ದಾರೆ. ‘ನಾನು ಏನು ತಪ್ಪು ಮಾಡಿದ್ದೇನೆ?’ ಎಂದು ಕೇಳಿದರೆ , ಮಂತ್ರಿಗಳು ದುಡ್ಡು ಕೊಟ್ಟು ಕರೆತಂದ ಜನರಾದರೂ ಏನು ಹೇಳಲು ಸಾಧ್ಯ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣವೇ ನಡೆದಿಲ್ಲ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದರು. ಆದರೆ ಇ.ಡಿ. ಪ್ರವೇಶ ಕೊಟ್ಟ ನಂತರ ಬರೀ ₹89 ಕೋಟಿ ಅಕ್ರಮ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಹಗರಣದಲ್ಲಿ ನನ್ನ ಪಾತ್ರ ಏನು ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಹಣಕಾಸು ಸಚಿವರಾಗಿ ಏಕೆ ಅನುದಾನ ಬಳಕೆಯನ್ನು ನೀವು ಪರಿಶೀಲಿಸಲಿಲ್ಲ’ ಎಂದು ಪ್ರಶ್ನಿಸಿದರು.
‘ಮುಡಾ ಹಗರಣವೇ ಆಗಿಲ್ಲ ಎಂದು ಹೇಳುತ್ತೀರಿ. ಹಾಗಿದ್ದರೆ ನಾವು ಪಾದಯಾತ್ರೆ ಮಾಡುವ ಕಡೆಯಲೆಲ್ಲ ಮುಂಚೆಯೇ ಯಾಕೆ ಬಾಯಿ ಬಡಿದುಕೊಂಡು ಹೋಗುತ್ತಿದ್ದೀರಿ. ಮಾತೆತ್ತಿದರೆ ಬಿಜೆಪಿ ಹಗರಣವನ್ನು ಬಿಚ್ಚಿಡುತ್ತೇನೆ ಎನ್ನುತ್ತೀರಿ. ವಿರೋಧ ಪಕ್ಷದವರನ್ಮು ಬಿಚ್ಚಲು ವಿಧಾನಸೌಧವೇ ಇದೆ. ಅಧಿಕಾರಿಗಳು ನಿಮ್ಮ ಕೈಯಲ್ಲೇ ಇದ್ದರು. ಯಾಕೆ ಅಲ್ಲಿಯೇ ಉತ್ತರ ನೀಡಲಿಲ್ಲ?’ ಎಂದು ಅಶೋಕ್ ಕೇಳಿದರು.
‘40 ವರ್ಷದ ರಾಜಕಾರಣದಲ್ಲಿ ಶುದ್ಧ ಹಸ್ತ ಎನ್ನುತ್ತೀರಿ. ರೀಡೂ ಮಾಡಿದ್ದು ಯಾರು? ಹತ್ತು ವರ್ಷದ ಹಿಂದೆ ರಚಿಸಿದ ಕೆಂಪಣ್ಣ ಆಯೋಗದ ವರದಿ ಏನಾಯಿತು. ಅದನ್ನಾದರೂ ಜನರ ಮುಂದೆ ಇಡಿ. ಮುಡಾ ಹಗರಣದಲ್ಲಿ ದೇಸಾಯಿ ಆಯೋಗ ವರದಿ ಕೊಡಲು ಇಪ್ಪತ್ತೈದು ವರ್ಷ ಬೇಕೆ?’ ಎಂದು ಪ್ರಶ್ನಿಸಿದರು.
‘ನಿನ್ನನ್ನು ಕ್ಲೀನ್ ಎಂದು ಜನ ಹೇಳಬೇಕೆ ಹೊರತು ನೀನೇ ಹೊಗಳಿಕೊಳ್ಳುವುದಲ್ಲ. ನೀನೇ ಹಗರಣ ಮಾಡಿ ಸಿಕ್ಕಿಹಾಕಿಕೊಂಡಿದ್ದೀಯಾ. ಸಮಾಜವಾದಿ ಎಂದು ಹೇಳಿಕೊಂಡು ದುಬಾರಿ ವಾಚ್ ಪಡೆದಿದ್ದೀಯಾ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ವಿಧಾನ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ಮುಖಂಡ ಬಂಗಾರು ಹನುಮಂತು ಜೊತೆಗಿದ್ದರು.
ಪ್ರೀತಂ ಗೌಡ ನಮ್ಮ ಕಾರ್ಯಕರ್ತ. ಘಟನೆಯನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಸಣ್ಣಪುಟ್ಟ ಮನಸ್ತಾಪ ಸಹಜ. ಎಲ್ಲವನ್ನೂ ಮರೆತು ಎರಡೂ ಪಕ್ಷದವರು ಹಾಲು- ಜೇನಿನಂತೆ ಹೋಗುತ್ತೇವೆಆರ್.ಅಶೋಕ, ವಿಧಾನಸಭೆ ವಿಪಕ್ಷ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.