ADVERTISEMENT

ಯಾರ ಮುಲಾಜಿಗೂ ಒಳಗಾಗದೇ ಜಾತಿ ಗಣತಿ ವರದಿ ಬಿಡುಗಡೆ ಮಾಡಿ: ಎಚ್. ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 13:25 IST
Last Updated 25 ಡಿಸೆಂಬರ್ 2023, 13:25 IST
ಎಚ್. ವಿಶ್ವನಾಥ್‌
ಎಚ್. ವಿಶ್ವನಾಥ್‌   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರ ಮುಲಾಜಿಗೂ ಒಳಗಾಗದೇ ಜಾತಿ ಗಣತಿ ವರದಿಯನ್ನು ತ್ವರಿತವಾಗಿ ಸ್ವೀಕರಿಸಿ, ಬಿಡುಗಡೆ ಮಾಡಬೇಕು’ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜಾತಿ ಗಣತಿ ವರದಿ ಬಿಡುಗಡೆಗೆ ವೀರಶೈವ ಲಿಂಗಾಯತ ಸಮುದಾಯ ಏಕೆ ವಿರೋಧ ಮಾಡುತ್ತಿದೆಯೋ ಗೊತ್ತಾಗುತ್ತಿಲ್ಲ. ಮೊದಲು ವರದಿಯನ್ನು ಸರ್ಕಾರ ಸ್ವೀಕರಿಸಿ, ಬಿಡುಗಡೆ ಮಾಡಲಿ. ಅದರಲ್ಲಿ ಏನಿದೆ ಎಂಬುದು ಚರ್ಚೆಯಾಗಲಿ. ವರದಿಯನ್ನೇ ನೋಡದೇ–ತಿಳಿಯದೇ ಸುಮ್ಮನೆ ಆರಂಭದಲ್ಲಿಯೇ ವಿರೋಧಿಸುವುದು ಸರಿಯಲ್ಲ’ ಎಂದರು.

‘ಇದೇ ರೀತಿ ಹಿಂದೆ ಹಾವನೂರು ಆಯೋಗದ ವರದಿಯನ್ನೂ ಸಾಕಷ್ಟು ವಿರೋಧಿಸಿದ್ದರು. ಆದರೆ, ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಎಲ್ಲರ ವಿರೋಧದ ನಡುವೆಯೂ ಹಾವನೂರು ವರದಿ ಬಿಡುಗಡೆ ಮಾಡಿದರು. ಈಗಿನ ಮುಖ್ಯಮಂತ್ರಿಯೂ ಅದೇ ರೀತಿ ಕ್ರಮ ಕೈಗೊಳ್ಳಬೇಕು. ಯಾರ ಮುಲಾಜಿಗೂ ಒಳಗಾಗಬಾರದು. ವರದಿಯ ಬಗ್ಗೆ ಅನಗತ್ಯವಾಗಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

‌ಹಿಜಾಬ್ ನಿಷೇಧ ವಾಪಸ್‌ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಆ ವಿಚಾರವನ್ನು ಈಗ ಮಾತನಾಡುವುದು ಸರಿಯಲ್ಲ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.