ಮೈಸೂರು: ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಈಗಾಗಲೇ ಎರಡು ಪ್ರಕರಣ ದಾಖಲಿಸಿದ್ದು, ಆತನನ್ನು ಜೈಲಿಗೆ ಕಳುಹಿಸದೇ ಬಿಡುವುದಿಲ್ಲ’ ಎಂದು ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು.
ವಿಜಯನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ, ನಗರ ಮತ್ತು ಗ್ರಾಮಾಂತರ ಘಟಕದ ಹಿಂದುಳಿದ ವರ್ಗಗಳ ಮೋರ್ಚಾ ಸಾಮಾಜಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘47 ವರ್ಷಗಳ ನಂತರ ಒಕ್ಕಲಿಗರಿಗೆ ಟಿಕೆಟ್ ಸಿಕ್ಕಿದೆ ಎಂದು ಈ ವ್ಯಕ್ತಿ ಜಾತಿ ರಾಜಕಾರಣ ಮಾಡುತ್ತಿದ್ದಾನೆ. ಈಗ ಆತನಿಗೆ ಒಕ್ಕಲಿಗ ಸಮುದಾಯ ನೆನಪಾಗಿದೆ. ಹಿಂದೆ ಇದೇ ವ್ಯಕ್ತಿ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಅವರಂತಹ ತನ್ನದೇ ಸಮುದಾಯದ ನಾಯಕರ ಚಾರಿತ್ರ್ಯವಧೆ ಮಾಡುವಾಗ ಜಾತಿ ನೆನಪಾಗಲಿಲ್ಲವೇ’ ಎಂದು ಎಂ. ಲಕ್ಷ್ಮಣ್ ಹೆಸರು ಹೇಳದೆಯೇ ಟೀಕಿಸಿದರು.
‘ಮಹಾರಾಜರಿಗೆ ಎಂದೂ ಸಿದ್ದರಾಮಯ್ಯ ಗೌರವ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮೈಸೂರಿನಲ್ಲಿ ‘ಮಹಿಷ ದಸರಾ’ ಮತ್ತೆ ಆರಂಭ ಆಗಿದೆ. ಇಲ್ಲಿ ಮಹಾರಾಜರ ಪರಂಪರೆ ಮುಂದುವರಿಯಬೇಕೆ ಹೊರತು ಸಿದ್ದರಾಮಯ್ಯ ಪರಂಪರೆ ಅಲ್ಲ’ ಎಂದರು. ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಹರಿಸಲಿದ್ದು, ದೇಶಭಕ್ತರು ಅದರಲ್ಲಿ ಕೊಚ್ಚಿ ಹೋಗಬಾರದು. ಮೈಸೂರು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 7ರಲ್ಲಿ ಬಿಜೆಪಿಗೆ ತಲಾ 50 ಸಾವಿರ ಮತಗಳ ಮುನ್ನಡೆ ಸಿಗಬೇಕು ಎಂದು ಆಶಿಸಿದರು.
ಶಾಸಕ ಟಿ.ಎಸ್. ಶ್ರೀವತ್ಸ ‘ಕಾಂಗ್ರೆಸ್‌ನವರಿಗೆ ಇನ್ನೊಬ್ಬರಿಗೆ ಮರ್ಯಾದೆ ಕೊಡುವುದು ಗೊತ್ತಿಲ್ಲ. ಹಿಂದೆ ಸಿದ್ದರಾಮಯ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದರು. ಈಗ ರಾಜ್ಯದ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಂಸ್ಕೃತಿ ಗೊತ್ತಿಲ್ಲದಂತೆ ಮಾತನಾಡುತ್ತಾರೆ. ಮೋದಿ ಅಂತಹ ವ್ಯಕ್ತಿತ್ವದ ಬಗ್ಗೆ ಮಾತನಾಡಲು ಅವರಿಗೆ ಅರ್ಹತೆ ಏನಿದೆ’ ಎಂದು ಪ್ರಶ್ನಿಸಿದರು.
ಬಿಜೆಪಿ ಒಬಿಸಿ ಮೋರ್ಚ ಅಧ್ಯಕ್ಷ ರಘು ಕೌಟಿಲ್ಯ ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪನೆಗೊಂಡಿದ್ದ ಹಿಂದುಳಿದ ವರ್ಗಗಳ ಎಲ್ಲ ನಿಗಮಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರ ಸೂಕ್ತ ಅನುದಾನ ನೀಡದೆಯೇ ಬೀಗ ಜಡಿಯಲು ಹೊರಟಿದೆ. ದೇವರಾಜ ಅರಸು ನಿಗಮಕ್ಕೆ ಬರೀ ₹30 ಕೋಟಿ ಕೊಟ್ಟಿದೆ’ಎಂದು ದೂರಿದರು.
ಬಿಜೆಪಿ ಅಭ್ಯರ್ಥಿ ಯದುವೀರ್ ‘ ಅರಸು ಸಮುದಾಯ ಸಹ ಒಬಿಸಿಗೆ ಸೇರಿದ್ದು, ನಿಮ್ಮೆಲ್ಲರ ಧ್ವನಿ ನನ್ನ ಧ್ವನಿ. ಸಮುದಾಯದ ಜನರು ಬೆಂಬಲಿಸಬೇಕು’ ಎಂದು ಕೋರಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ ‘ ಹಿಂದುಳಿದ ಸಮುದಾಯಗಳು ಈವರೆಗೆ ಲಿಂಗಾಯತ, ಒಕ್ಕಲಿಗ ಸಮುದಾಯದ ನಾಯಕರನ್ನು ಬೆಳೆಸುತ್ತ ಬಂದಿವೆ. ಒಬಿಸಿ ಸಮುದಾಯಕ್ಕೆ ಸೇರಿದ ಯದುವೀರ್ ಈ ಬಾರಿ ಅಭ್ಯರ್ಥಿ ಆಗಿದ್ದಾರೆ. ಪ್ರತಿ ಸಮುದಾಯವು ಅವರನ್ನು ಬೆಂಬಲಿಸಬೇಕು’ ಎಂದು ಕೋರಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ರಾಜ್ಯ ಒಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಉಪಾಧ್ಯಕ್ಷ ಗೋವಿಂದ ರಾಜು, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ನಗರ ಒಬಿಸಿ ಮೋರ್ಚಾ ಅಧ್ಯಕ್ಷ ರಾಜೇಶ್, ಗ್ರಾಮಾಂತರ ಮೋರ್ಚ ಅಧ್ಯಕ್ಷ ಬಾಲಚಂದ್ರ, ಮುಖಂಡರಾದ ಸಿದ್ದರಾಜು, ಸಂದೇಶ ಸ್ವಾಮಿ ಪಾಲ್ಗೊಂಡರು.
ಏಪ್ರಿಲ್ 3ರಂದು ಯದುವೀರ್ ನಾಮಪತ್ರ ಸಲ್ಲಿಸಲಿದ್ದು ಅಂದು ವಿಜಯೋತ್ಸವದ ರೀತಿ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಬಿಜೆಪಿ ಇಲ್ಲಿ ಗೆದ್ದರೆ ಯದುವೀರ್ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ.ಪ್ರತಾಪ ಸಿಂಹ, ಸಂಸದ
ಮೈಸೂರು–ಕೊಡಗು ಕ್ಷೇತ್ರದಲ್ಲಿ ಈವರೆಗೆ ಒಂದು ಸಿಂಹವಿತ್ತು. ಇದೀಗ ಯದುವೀರ್ ಅಭ್ಯರ್ಥಿಯಾಗಿದ್ದು ಇನ್ನು ಮುಂದೆ ಈ ಭಾಗದಲ್ಲಿ ಜೋಡಿ ಸಿಂಹಗಳು ಜೊತೆಯಾಗಿ ಘರ್ಜಿಸಲಿವೆ.ರಘು ಕೌಟಿಲ್ಯ, ಬಿಜೆಪಿ ಒಬಿಸಿ ಮೋರ್ಚ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.