ಮೈಸೂರು: ಬಿಜೆಪಿ ಹಾಗೂ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ದಕ್ಷಿಣ ಕನ್ನಡದ ಜಿ.ಗೀತಾ ಹಾಗೂ ಬೆಂಗಳೂರಿನ ಪ್ರಾಚಿಗೌಡ ಎಂಬುವರನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದ ಸರ್ಕಾರವು, ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಆದೇಶ ವಾಪಸ್ ಪಡೆದಿದೆ.
ಮಹೇಶ್ ಸೋಸಲೆ, ರಮೇಶ್ ಕಾಳಪ್ಪ ಗುಬ್ಬೇವಾಡ, ಸಿದ್ದಯ್ಯ ಅವರೊಂದಿಗೆ ಮಹಿಳಾ ಮೀಸಲಾತಿಯಡಿ ಗೀತಾ ಹಾಗೂ ಪ್ರಾಚಿಗೌಡ ಅವರನ್ನು ನಾಮನಿರ್ದೇಶನ ಮಾಡಿ ಫೆ.26ರಂದು ಉನ್ನತ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿತ್ತು.
ಗೀತಾ, ಈ ಹಿಂದೆ ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ಈಗಿನ ಕೆಎಸ್‌ಒಯು ಕುಲಪತಿ ಶರಣಪ್ಪ ವಿ. ಹಲಸೆ ಆಗ ಅಲ್ಲಿಯೂ ಕುಲಪತಿಯಾಗಿದ್ದರು. ಪ್ರಾಚಿಗೌಡ, ಯುವ ಬಲ ಜಾಗೃತಿ ಪರಿಷತ್ ಸಂಘಟನೆಯ ಅಧ್ಯಕ್ಷೆಯಾಗಿದ್ದಾರೆ. ಗೀತಾ ಮತ್ತು ಪ್ರಾಚಿಗೌಡ ಅವರು ಜಾಲತಾಣಗಳ ಖಾತೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಹಿಂದುತ್ವ ರಾಜಕಾರಣದ ಬಗ್ಗೆ ಬರೆದುಕೊಂಡಿದ್ದರು. ಬಿಜೆಪಿ ಪರ ಅಭಿಯಾನದಲ್ಲಿ ಭಾಗಿಯಾಗಿದ್ದರು. ಈ ಇಬ್ಬರ ನೇಮಕಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.