ADVERTISEMENT

ಸಿದ್ದರಾಮಯ್ಯಗೆ ನೈತಿಕತೆ ಇಲ್ಲವೇ?: ಮಹೇಶ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:20 IST
Last Updated 16 ಜುಲೈ 2024, 4:20 IST
ಎಂ.ಜಿ. ಮಹೇಶ್‌
ಎಂ.ಜಿ. ಮಹೇಶ್‌   

ಮೈಸೂರು: ‘ನಮ್ಮ ಜಮೀನನ್ನು ವಶಕ್ಕೆ ಪಡೆದಿದ್ದರಿಂದಾಗಿ ಮುಡಾ ನೀಡಿದ ನಿವೇಶನಗಳನ್ನು ತೆಗೆದುಕೊಂಡಿದ್ದೇವೆ; ವಿಜಯನಗರದಲ್ಲೇ ಕೊಡುವಂತೆ ಕೇಳಿರಲಿಲ್ಲ ಎಂಬ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲವೇ?’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ. ಮಹೇಶ್ ಕೇಳಿದರು. 

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಎಲ್ಲಿ ಜಮೀನು ತೆಗೆದುಕೊಂಡಿದ್ದೀರೋ ಅಲ್ಲಿಯೇ ನಿವೇಶನ ಕೊಡಿ ಎಂದೇಕೆ ಅವರು ಕೇಳಲಿಲ್ಲ. ಬಹಳ ಬೆಲೆ ಬಾಳುವ ಬಡಾವಣೆಯಲ್ಲಿ ನಿವೇಶನ ಹೊಂದುವುದು ಸರಿಯಲ್ಲ ಎಂದು ಅವರಿಗೆ ಅನ್ನಿಸಲಿಲ್ಲವೇಕೆ? ಯಾರೋ ಅಧಿಕಾರಿಗಳು ಅಕ್ರಮ ಎಸಗುತ್ತಾರೆ ಎಂದಾದರೆ ಅವರು ಒಪ್ಪಿ ಬಿಡುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಕೆಸರೆಯಲ್ಲಿ ಅವರ ಜಮೀನನ್ನು ಮುಡಾದಿಂದ ಪಡೆದುಕೊಳ್ಳಲಾಗಿದೆ. ಆದರೆ, ಭೂ‍ಪರಿಹಾರವಾಗಿ ನಿವೇಶನಗಳನ್ನು ಕೊಟ್ಟಿರುವುದು ಅಭಿವೃದ್ಧಿ ಹೊಂದಿರುವ ಜಾಗದಲ್ಲಿ. ಮುಡಾದ ಆಗಿನ ಆಯುಕ್ತರು ಬೇರೆಡೆ ನಿವೇಶನ ನೀಡಲು ವಿರೋಧ ವ್ಯಕ್ತ‍ಪಡಿಸಿದ್ದರು. ಆದರೂ ಸಿದ್ದರಾಮಯ್ಯ ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ. ಲಾಭಕ್ಕೆ ಬೇಕಾದ ಅಕ್ರಮ ಕೆಲಸವನ್ನೆಲ್ಲಾ ಎಸಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘2015ರಲ್ಲಿ ಮಾಡಿದ ಕಾಯ್ದೆಯನ್ನು ಈಗ ಅನ್ವಯಿಸಬಹುದೇ? ಯಾವಾಗಲೋ ಪಡೆದುಕೊಂಡ ಜಮೀನಿಗೆ ಈಗಿನ ಮಾರುಕಟ್ಟೆ ಬೆಲೆಯನ್ನು ಮುಡಾದಿಂದ ಕೇಳುವುದು ಎಷ್ಟು ಸರಿ? ಹಲವು ದಶಕಗಳಿಂದ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಅವರಿಗೆ ನೈತಿಕತೆ ಬೇಡವೇ?’ ಎಂದು ಕೇಳಿದರು.

‘ಮುಡಾವನ್ನು ಎಲ್ಲ ಪಕ್ಷದವರೂ ಸೇರಿ ಲೂಟಿ ಹೊಡೆದಿದ್ದಾರೆ. ಇನ್ಮುಂದೆ ಅಲ್ಲಿ ನಡೆಯುವ ಪ್ರತಿ ಸಭೆಯನ್ನೂ ನೇರಪ್ರಸಾರ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.