ADVERTISEMENT

ರೋಮಾಂಚನ ಸೃಷ್ಟಿಸಿದ ದೇಹದಾರ್ಢ್ಯ ಪ್ರದರ್ಶನ

‘ಮಿ.ಧ್ರುವನಾರಾಯಣ ಕಪ್‌–2023’ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 6:19 IST
Last Updated 7 ಆಗಸ್ಟ್ 2023, 6:19 IST
ಮೈಸೂರಿನ ಅಶೋಕಪುರಂನ ಭಾನುವಾರ ಆಯೋಜಿಸಿದ್ದ ‘ಮಿ.ಧ್ರುವನಾರಾಯಣ ಕಪ್‌–2023’ ಅಂತರಜಿಲ್ಲಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಟುಗಳು ವಿವಿಧ ಭಂಗಿ ಪ್ರದರ್ಶಿಸಿದರು
ಮೈಸೂರಿನ ಅಶೋಕಪುರಂನ ಭಾನುವಾರ ಆಯೋಜಿಸಿದ್ದ ‘ಮಿ.ಧ್ರುವನಾರಾಯಣ ಕಪ್‌–2023’ ಅಂತರಜಿಲ್ಲಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಟುಗಳು ವಿವಿಧ ಭಂಗಿ ಪ್ರದರ್ಶಿಸಿದರು   

ಮೈಸೂರು: ಇಲ್ಲಿನ ಅಶೋಕಪುರಂನ ಎನ್‌ಟಿಎಂಎಸ್‌ ಸರ್ಕಾರಿ ಶಾಲೆ ಆವರಣದಲ್ಲಿ ಭಾನುವಾರ ನಡೆದ ದೇಹದಾರ್ಢ್ಯ ಪ್ರದರ್ಶನ ನೋಡುಗರಲ್ಲಿ ರೋಮಾಂಚನ ಮೂಡಿಸಿತು.

‘ಮಿ.ಧ್ರುವನಾರಾಯಣ ಕಪ್‌–2023’ ಅಂತರಜಿಲ್ಲಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೈಸೂರು ನಗರದೊಂದಿಗೆ ವಿವಿಧ ತಾಲ್ಲೂಕುಗಳು ಹಾಗೂ ಪಕ್ಕದ ಜಿಲ್ಲೆಗಳಿಂದಲೂ 45ಕ್ಕೂ ಹೆಚ್ಚು ಪಟುಗಳು ಪಾಲ್ಗೊಂಡಿದ್ದರು.

ಅಶೋಕಪುರಂ ಯೂತ್ಸ್‌, ಮೈಸೂರು ಡಿಸ್ಟ್ರಿಕ್ಟ್‌ ಅಮೇಚೂರ್‌ ಬಾಡಿ ಬಿಲ್ಡರ್‌ ಅಸೋಸಿಯೇಷನ್‌ನಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ  ಚಟುವಟಿಕೆಗಳು ಯವಜನರ ಬದುಕಿನ ಭಾಗವಾಗಬೇಕು. ಅವುಗಳ ಮೂಲಕ ಸಮಾಜವನ್ನು, ಸಮುದಾಯವನ್ನು ಒಗ್ಗೂಡಿಸುವ ಕೆಲಸವಾಗಲಿ. ಕೋಮುವಾದ ಅಳಿದು, ಸಂವಿಧಾನ, ಪ್ರಜಾಪ್ರಭುತ್ವ ಉಳಿಯಲು ಶ್ರಮಿಸಿ’ ಎಂದರು.

‍‘ಸಾರ್ವಜನಿಕರಲ್ಲಿ ಭರವಸೆ ಮೂಡಿಸಿದ್ದ ನಾಯಕ ಧ್ರುವನಾರಾಯಣ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಸಂವಿಧಾನ ತೆಗೆದು ಹಾಕಬೇಕು ಎನ್ನುವ ಕಾಲದಲ್ಲಿ ಸಂವಿಧಾನ ಓದು ಎಂದು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಅಶೋಕಪುರಂನಲ್ಲಿ ದಲಿತ ಕುಟುಂಬಗಳೇ ಹೆಚ್ಚಿವೆ. ನಿಮ್ಮ ಸ್ವಾಭಿಮಾನದ ಬದುಕಿಗೆ ಅನೇಕ ಯೋಜನೆಗಳನ್ನು ಮಾಡಲಿದ್ದೇವೆ ಎಂಬ ಭರವಸೆಯನ್ನಂತೂ ನೀಡುತ್ತೇನೆ’ ಎಂದು ತಿಳಿಸಿದರು.

ಶಾಸಕ ದರ್ಶನ್‌ ಧ್ರುವನಾರಾಯಣ ಮಾತನಾಡಿ, ‘ದೇಹದಾರ್ಢ್ಯ ಸ್ಪರ್ಧೆ ಅತ್ಯಂತ ಶ್ರಮದಾಯಕ ಮತ್ತು ದುಬಾರಿ. ಇಲ್ಲಿ ಆಗಮಿಸಿದ ಪಟುಗಳನ್ನು ನೋಡಿದರೆ ಸಂತಸವಾಗುತ್ತದೆ. ಉಳಿದವರಿಗೂ ದೇಹದ ಆರೋಗ್ಯ, ಸಧೃಡತೆ ಹೊಂದಲು ನೀವು ಪ್ರೇರಣೆ’ ಎಂದರು. 

ಶಾಸಕ ಎ.ಆರ್.ಕೃಷ್ಣಮೂರ್ತಿ, ಮುಖಂಡರಾದ ಎಂ.ಕೆ.ಸೋಮಶೇಖರ್, ಎಂ.ಪ್ರದೀಪ್ ಕುಮಾರ್, ಜೇಸುದಾಸ್, ಜೋಗಿ ಮಹೇಶ್, ಸುರೇಶ್ ಕುಮಾರ್, ಪುರುಷೋತ್ತಮ, ಜಯರಾಜ್, ಪುನೀತ್, ಕೃಷ್ಣ, ಆದರ್ಶ ಭೀಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.