ADVERTISEMENT

‘ಕೇಳದ ಕಿವಿಗಳು ಹೇಳಿದ ಕತೆ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 6:20 IST
Last Updated 24 ಜೂನ್ 2024, 6:20 IST
ಕೆ.ಎಸ್‌. ಸುಚೇತಾ ಅವರ ‘ಕೇಳದ ಕಿವಿಗಳು ಹೇಳಿದ ಕತೆ’ ಕೃತಿಯನ್ನು ಆಯಿಷ್‌ ನಿರ್ದೇಶಕಿ ಪ್ರೊ. ಎಂ. ಪುಷ್ಪವತಿ ಭಾನುವಾರ ಬಿಡುಗಡೆ ಮಾಡಿದರು. ನಾ. ದಿವಾಕರ, ಓ.ಎಲ್‌. ನಾಗಭೂಷಣಸ್ವಾಮಿ, ಇ. ರತಿ ರಾವ್‌, ಲೇಖಕಿ ಸುಚೇತಾ, ಪಿ.ವಿ. ನಾಗರಾಜು ಹಾಗೂ ಬಿ.ಕೆ. ಸುರೇಶ್‌ ಜೊತೆಗಿದ್ದರು
ಕೆ.ಎಸ್‌. ಸುಚೇತಾ ಅವರ ‘ಕೇಳದ ಕಿವಿಗಳು ಹೇಳಿದ ಕತೆ’ ಕೃತಿಯನ್ನು ಆಯಿಷ್‌ ನಿರ್ದೇಶಕಿ ಪ್ರೊ. ಎಂ. ಪುಷ್ಪವತಿ ಭಾನುವಾರ ಬಿಡುಗಡೆ ಮಾಡಿದರು. ನಾ. ದಿವಾಕರ, ಓ.ಎಲ್‌. ನಾಗಭೂಷಣಸ್ವಾಮಿ, ಇ. ರತಿ ರಾವ್‌, ಲೇಖಕಿ ಸುಚೇತಾ, ಪಿ.ವಿ. ನಾಗರಾಜು ಹಾಗೂ ಬಿ.ಕೆ. ಸುರೇಶ್‌ ಜೊತೆಗಿದ್ದರು   

ಮೈಸೂರು: ‘ಸಮಸ್ಯೆಯನ್ನೇ ನೆಪ‌ ಮಾಡಿಕೊಂಡು ಸಮಾಜದಿಂದ ಹೊರಗೆ ಉಳಿಯುವವರ ನಡುವೆ ಸುಚೇತಾ ಮಾದರಿ ಆಗಿದ್ದಾರೆ. ಶ್ರವಣ ಸಮಸ್ಯೆ ಮೆಟ್ಟಿ‌ ನಿಂತು ಬರವಣಿಗೆಯ ಸಾಧನೆ ಮಾಡಿದ್ದಾರೆ’ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ. ಎಂ. ಪುಷ್ಪವತಿ ಶ್ಲಾಘಿಸಿದರು.

ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ರಂಗವಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರ ಹಾಗೂ ರಂಗಾಂತರಂಗ ಸಹಯೋಗದಲ್ಲಿ ಭಾನುವಾರ ಕೆ.ಎಸ್‌. ಸುಚೇತಾ ಅವರ ‘ಕೇಳದ ಕಿವಿಗಳು ಹೇಳಿದ ಕತೆ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಶ್ರವಣದೋಷವುಳ್ಳವರ ಕುರಿತು ಕನ್ನಡದಲ್ಲಿ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಬರೆದಿರುವ ‘ಮೂರನೇ ಕಿವಿ’ ಒಂದು ಅಪರೂಪದ ಬರಹಗುಚ್ಛವಾಗಿದ್ದು, ಸುಚೇತಾ ಅವರ ಈ ಕೃತಿ ಕೂಡ ಅದೇ ದಿಸೆಯಲ್ಲಿ ಮೂಡಿಬಂದಿದೆ. ಇಲ್ಲಿನ ಬರಹಗಳು ಅನುಭವದ ಕಥನವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ವರ್ಷಕ್ಕೆ ಸುಮಾರು 75 ಸಾವಿರ ಮಂದಿ ಆಯಿಷ್‌ಗೆ ಬರುತ್ತಾರೆ. ಅಂತಹವರಿಗೆ ಮೊದಲು ಕಿವಿ ಪರೀಕ್ಷೆ ಮಾಡುತ್ತೇವೆ. ಬಾಲ್ಯದಲ್ಲೇ ಕಿವುಡು ಇದ್ದರೆ, ಶ್ರವಣ ಸಾಧನ ಅಳವಡಿಸುತ್ತೇವೆ. ಕೆಲವರಿಗೆ ಮಧ್ಯ ವಯಸ್ಸಿನಲ್ಲಿ ಶ್ರವಣ ಶಕ್ತಿ ಹೋಗುತ್ತದೆ. ಅಂತಹವರಿಗೆ ಚಿಕಿತ್ಸೆಯೂ ಸವಾಲು’ ಎಂದು ವಿವರಿಸಿದರು.

ADVERTISEMENT

‘ಇಂದು ಮಾತು ಬರುವವರಿಗೂ ಹೇಗೆ ಮತ್ತು ಎಲ್ಲಿ ಎಷ್ಟು ಮಾತನಾಡಬೇಕು ಎಂದು ಹೇಳಿ‌ ಕೊಡುವಂಥ ಪರಿಸ್ಥಿತಿ ಈಗ ಇದೆ. ಮಾತನ್ನು ತೂಕ ಮಾಡಿ, ಇನ್ನೊಬ್ಬರಿಗೆ ನೋವಾಗದಂತೆ‌ ಮಾತನಾಡುವುದು ಒಳಿತು’ ಎಂದು ಸಲಹೆ ನೀಡಿದರು.

ಅಂಧತ್ವ ಮೀರಿದ ಸಾಧನೆ ಮಾಡಿರುವ ಲೇಖಕ, ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ.ವಿ. ನಾಗರಾಜ ಕೃತಿ ಕುರಿತು ಮಾತನಾಡಿದ್ದು ವಿಶೇಷವಾಗಿತ್ತು. ದೃಷ್ಟಿದೋಷವಿದ್ದರೂ ತಂತ್ರಜ್ಞಾನದ ಸಹಾಯದಿಂದ ತಾವು ಕೃತಿಗಳ ಓದು ಹಾಗೂ ಬರವಣಿಗೆಯಲ್ಲೂ ತೊಡಗಿಸಿಕೊಂಡಿರುವ ಬಗೆಯನ್ನು ಅವರು ವಿವರಿಸಿದರು.

‘ಸುಚೇತಾರ ಇಡೀ ಕೃತಿಯಲ್ಲಿ ಕೃತಜ್ಞತಾ ಭಾವ, ಆಪ್ತ‌ ನಿರೂಪಣೆ ಇದೆ. ಕೆಲವು ಸುಶಿಕ್ಷಕರೇ ಅಂಗವಿಕಲರನ್ನು ನೋಡುವ, ಗ್ರಹಿಸುವ ದೃಷ್ಟಿಕೋನ ತಪ್ಪಿದೆ. ಅಂಗವಿಕಲರ ಮಕ್ಕಳು ಅಂಗವಿಕಲರೇ ಆಗಿ‌ ಹುಟ್ಟುತ್ತಾರೆ ಎಂಬ ತಪ್ಪು ಕಲ್ಪನೆ ಶಿಕ್ಷಿತರಲ್ಲೇ ಹೆಚ್ಚಿದೆ. ಈ ಧೋರಣೆ ಇನ್ನಾದರೂ ಬದಲಾಗಬೇಕಿದೆ’ ಎಂದು ಆಶಿಸಿದರು.

ವಿಮರ್ಶಕ ಪ್ರೊ. ಓ.ಎಲ್‌. ನಾಗಭೂಷಣಸ್ವಾಮಿ ‘ರವೀಂದ್ರ ಭಟ್ಟರ ‘ಮೂರನೇ ಕಿವಿ’ ಹಾಗೂ ಸುಚೇತಾರ ಈ ಕೃತಿಗಳು ನಮ್ಮನ್ನು ಸಂವೇದನಾಶೀಲ‌ ಆಗಿಸುತ್ತಿವೆ. ಇಂತಹ ಕೃತಿಗಳನ್ನು ಸಮಾಜಕ್ಕೆ ಇನ್ನಷ್ಟು ಪರಿಚಯಿಸುವ ಅಗತ್ಯವಿದೆ’ ಎಂದರು.

ಮಹಿಳಾ ಹೋರಾಟಗಾರ್ತಿ ಇ. ರತಿರಾವ್‌ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಪಬ್ಲಿಷಿಂಗ್‌ ಹೌಸ್‌ನ ಬಿ.ಕೆ. ಸುರೇಶ್‌, ಲೇಖಕಿ ಸುಚೇತಾ, ಅವರ ಪತಿ ಸ್ವರೂಪ್ ಉಪಸ್ಥಿತರಿದ್ದರು.

ಸುಚೇತಾ ಅಂತಹ ಅನೇಕರು ನಮ್ಮಲ್ಲಿ ಇದ್ದಾರೆ. ಅವರೆಲ್ಲ ಮುಖ್ಯವಾಹಿನಿಗೆ ಬರುವಂತೆ ಆಗಬೇಕು. ನ್ಯೂನತೆ ಎಂದು ಕೊರಗದೇ ಸಾಧನೆ ಮೂಲಕ ಮಾದರಿ ಆಗಬೇಕು
ಪ್ರೊ. ಎಂ. ಪುಷ್ಪವತಿ ಆಯಿಷ್‌ ನಿರ್ದೇಶಕಿ

ಕೃತಿ ಪರಿಚಯ

ಕೃತಿ: ಕೇಳದ ಕಿವಿಗಳು ಹೇಳಿದ ಕತೆ

ಲೇಖಕಿ: ಕೆ.ಎಸ್. ಸುಚೇತಾ

ಪ್ರಕಾಶಕರು: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‌

ಪುಟ: 122

ಬೆಲೆ: ₹150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.