ಮೈಸೂರು: ‘ಆಳುವವರ ನೀಚತನದಿಂದ ನಮ್ಮ ಜನ ಸಂಕಷ್ಟ ಎದುರಿಸುತ್ತಿದ್ದರೂ, ಅನ್ಯಾಯದ ವಿರುದ್ಧ ಧ್ವನಿ ಎತ್ತದೇ ತಮ್ಮ ಹಣೆಬರಹ ಸರಿಯಿಲ್ಲ ಎಂದು ಗೋಳಾಡುತ್ತಾರೆ. ಇದು ನಾಚಿಕೆಗೇಡಿನ ಸ್ಥಿತಿ’ ಎಂದು ಸಾಹಿತಿ ಕಾಳೇಗೌಡ ನಾಗವಾರ ಆಕ್ರೋಶ ವ್ಯಕ್ತಪಡಿಸಿದರು.
ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್‌ನಿಂದ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮದ್ದೂರು ದೊರೆಸ್ವಾಮಿ ರಚನೆಯ ‘ಹಂಬಲದ ಹಣತೆ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಜಾತಿಯ ಕಾರಣಕ್ಕಾಗಿ ನಮ್ಮನ್ನೂ ಶಾಲೆಗೆ ಸೇರಿಸುತ್ತಿರಲಿಲ್ಲ ಎಂದು ಅಳುತ್ತಾರೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಯಂಥ ಸಾಂವಿಧಾನಿಕ ಹುದ್ದೆಗೇರಿಯೂ ಜಾತಿ ವ್ಯವಸ್ಥೆ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮ ಜಾರಿಗೊಳಿಸದೇ ಕಣ್ಣೀರು ಸುರಿಸಿದರೆ ಪ್ರಯೋಜನವೇನು. ಜನಸಾಮಾನ್ಯರ ಪಾಡೇನು’ ಎಂದು ಪ್ರಶ್ನಿಸಿದರು.
‘ದೇಶದ ಬಹುತೇಕ ರಾಜಕಾರಣಿಗಳು ಮಾಡಿರುವ ಅನಾಚಾರ–ಅಪರಾಧಗಳಿಂದ ಅವರನ್ನು ರಕ್ಷಣೆ ಮಾಡಲು ಆಯಾ ಜಾತಿಗಳ ಮಠಾಧೀಶರು ಮುಂದೆ ಬರುತ್ತಾರೆ. ದಲಿತರ ಕೇರಿಗೆ ಹೋಗಿ ಪವಿತ್ರನಾಗಿ ಬಂದೆ ಎಂದು ಹೇಳಿದ ಬಸವಣ್ಣನವರನ್ನು ಹೆಚ್ಚು ಕಾಲ ಬದುಕಲು ಬಿಡಲಿಲ್ಲ. ಪ್ರಸ್ತುತ ಬಸವಣ್ಣನವರನ್ನೂ ಒಂದು ಜಾತಿಗೆ ಸೀಮಿತಗೊಳಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮಂಟೇಸ್ವಾಮಿ ಮತ್ತು ಮಾದಪ್ಪ ಕಾವೇರಿ ಕಣಿವೆಯ ದಲಿತ ಸಮುದಾಯಕ್ಕೆ ಸೇರಿದವರು. ಇವರನ್ನು ಉತ್ತರದಿಂದ ಬಂದವರು ಎಂದು ಎಲ್ಲರೂ ಹೇಳುತ್ತಾರೆ. ಈ ಬಗ್ಗೆ ಸಂಶೋಧನೆ ನಡೆಯಬೇಕು. ಈ ಕೃತಿಯೂ ಅಗತ್ಯ ವಿಚಾರಗಳ ಬಗ್ಗೆ ಆಳವಾದ ಗ್ರಹಿಕೆಯನ್ನು ನಮ್ಮಲ್ಲಿ ಮೂಡಿಸುತ್ತದೆ’ ಎಂದರು.
ಚಿಂತಕ ನಾ.ದಿವಾಕರ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆಗಳ ಇಲಾಖೆಯ ಸಹಾಯಕ ಆಯುಕ್ತ ಎಸ್. ನಾಗರಾಜು, ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ, ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಉಪಸ್ಥಿತರಿದ್ದರು.
ಕೃತಿ ಪರಿಚಯ ಕವನ ಸಂಕಲನ: ಹಂಬಲದ ಹಣತೆ
ಲೇಖಕ: ಮದ್ದೂರು ದೊರೆಸ್ವಾಮಿ
ಪ್ರಕಾಶನ: ಸಂಸ್ಕೃತಿ ಬುಕ್ ಪ್ಯಾರಡೈಸ್
ಪುಟ: 104
ಬೆಲೆ: ₹130
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.