ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನ ಜಮೀನಿಗೆ ಸೋಮವಾರ ಬಂದಿದ್ದ ಬಾಲಕನನ್ನು ಹುಲಿ ಪೊದೆಯೊಳಕ್ಕೆ ಎಳೆದೊಯ್ದು ಕೊಂದಿದೆ.
ತಾಲ್ಲೂಕಿನ ಕಲ್ಲಹಟ್ಟಿ ಗ್ರಾಮದ ಕೃಷ್ಣ ನಾಯಕ್ ಮತ್ತು ಮಾದುಬಾಯಿ ದಂಪತಿಯ ಪುತ್ರ ಚರಣ್ ನಾಯಕ್ (8) ಮೃತ. ಆತನ ಪೋಷಕರು ಜಮೀನಿನಲ್ಲಿ ಮೆಣಸಿಕಾಯಿ ಕೀಳುತ್ತಿದ್ದರು.
2ನೇ ತರಗತಿಯ ಚರಣ್, ಶಾಲೆಯಲ್ಲಿ ಕ್ರೀಡಾಕೂಟಕ್ಕಾಗಿ ರಜೆ ಕೊಟ್ಟಿದ್ದರಿಂದ ಪೋಷಕರೊಂದಿಗೆ ಬಂದಿದ್ದ. ಕೃಷ್ಣ ಅವರು ಮಗನನ್ನು ಮನೆಗೆ ಕರೆದೊಯ್ಯಲು ರಸ್ತೆ ಬದಿ ನಿಲ್ಲಿಸಿ, ಮೆಣಸಿನಕಾಯಿ ಮೂಟೆ ತರಲು ಜಮೀನಿಗೆ ಹೋಗಿದ್ದರು. ಆಗ, ಚರಣ್‌ನನ್ನು ಹುಲಿ ಎಳೆದೊಯ್ದಿದೆ. ತೊಡೆ, ಕೈ ಮತ್ತು ದೇಹದ ಇತರ ಭಾಗವನ್ನು ತಿಂದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.
ಧರಣಿ: ‘ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದಾಗಿ ಈ ದುರಂತ ನಡೆದಿದೆ’ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟಿಸಿದರು. ಶಾಸಕ ಅನಿಲ್ ಚಿಕ್ಕಮಾದು ಕೂಡ ಪಾಲ್ಗೊಂಡಿದ್ದರು.
ಈ ಹಿಂದೆ, ಈ ಭಾಗದಲ್ಲಿ ಕೊಟ್ಟಿಗೆಗಳಲ್ಲಿ ಕಟ್ಟಿದ್ದ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ್ದ ತಿಂದ ಘಟನೆಗಳು ನಡೆದಿದ್ದವು. ಮನುಷ್ಯನ ಮೇಲೆ ದಾಳಿ ಮಾಡಿ ಕೊಂದಿರುವುದು ಇದೇ ಮೊದಲು. ಇದು, ಅಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.