ADVERTISEMENT

ಅಮೃತ ವಿಶ್ವವಿದ್ಯಾಪೀಠಂನಲ್ಲಿ ‘ಬ್ರೇನ್‌ ಬೈಟ್ಸ್- 2024’ ರಸಪ್ರಶ್ನೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 16:23 IST
Last Updated 6 ನವೆಂಬರ್ 2024, 16:23 IST
ಬೋಗಾದಿಯ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ‘ಬ್ರೇನ್‌ ಬೈಟ್ಸ್‌–2024’ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರು ಗಣ್ಯರೊಂದಿಗೆ ಸಂಭ್ರಮಿಸಿದರು
ಬೋಗಾದಿಯ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ‘ಬ್ರೇನ್‌ ಬೈಟ್ಸ್‌–2024’ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರು ಗಣ್ಯರೊಂದಿಗೆ ಸಂಭ್ರಮಿಸಿದರು   

ಮೈಸೂರು: ‘ಪ್ರಸ್ತುತ ಮಾಹಿತಿಯು ವ್ಯಾಪಕವಾಗಿ ವಿವಿಧ ಮಾಧ್ಯಮಗಳಿಂದ ದೊರೆಯುತ್ತಿದೆ. ಆದರೆ, ನಿಜವಾದ ಜ್ಞಾನ ಸಂಪಾದನೆಗೆ ವಿಶ್ಲೇಷಣೆ, ತಿಳಿವಳಿಕೆ ಮತ್ತು ಸಕ್ರಿಯವಾಗಿ ತೊಡಗಿಕೊಳ್ಳುವಿಕೆಯ ಅಗತ್ಯವಿರುತ್ತದೆ’ ಎಂದು ಇನ್ಫೊಸಿಸ್‌ ಕಂಪನಿಯ ಸಹ ಉಪಾಧ್ಯಕ್ಷ ನವೀನ್ ಪಟೇಲ್ ತಿಳಿಸಿದರು.

ಹೊರವಲಯದ ಬೋಗಾದಿಯಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ‘ಬ್ರೇನ್‌ ಬೈಟ್ಸ್‌–2024’ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಂಠಪಾಠವನ್ನು ಮೀರಿದ ವಿಮರ್ಶಾತ್ಮಕ ಚಿಂತನೆಯು ಕೌಶಲವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ. ನಿರಂತರ ಕಲಿಕೆಯು ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಕಲಿಕೆಯನ್ನು ಜೀವನಪರ್ಯಂತದ ಪ್ರಯಾಣವೆಂದು ಪರಿಗಣಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ADVERTISEMENT

ಪದವಿ ಪೂರ್ವ ವಿದ್ಯಾರ್ಥಿಗಳ ಏಕತಾನದ ಹಾಗೂ ಒತ್ತಡದ ಅಭ್ಯಾಸದ ನಡುವೆ ಒಂದು ಮಾಹಿತಿಯುಕ್ತ ಬಿಡುವನ್ನು ಕಲ್ಪಿಸಿ ಉತ್ತೇಜನ ನೀಡುವ ಉದ್ದೇಶದಿಂದ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ‘ಲಿಖಿತ’, ‘ಆನ್‌ಲೈನ್’, ‘ಕನೆಕ್ಟ್-ದಿ–ಡಾಟ್ಸ್’, ‘ಆಡಿಯೊ–ವಿಶ್ಯುವಲ್’ ಹಾಗೂ ರ‍್ಯಾಪಿಡ್-ಪೈಯರ್’ ಎಂಬ 5 ಸುತ್ತುಗಳನ್ನು ಒಳಗೊಂಡಿತ್ತು.

ಬಹುಮಾನ ವಿಜೇತರು: ಪ್ರಥಮ ಸ್ಥಾನ: ಅನುಷಾ ಷಡಕ್ಷರಿ ಮತ್ತು ದಿಶಾ ಜಿ ಪೂಜಾರ್ (ಮಾನಸರೋವರ ಪುಷ್ಕರಿಣಿ ವಿದ್ಯಾಶ್ರಮ).

ದ್ವಿತೀಯ ಸ್ಥಾನ: ಮನೋಜ್ ಎಸ್.ಎಂ. ಮತ್ತು ಅನಿರುದ್ಧ್ ಎಂ. (ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜು).

ತೃತೀಯ ಸ್ಥಾನ: ಸುಕೃತ್ ಎಚ್.ಎಸ್. ಮತ್ತು ರಿಶಿತ್ ರಾವ್ (ಶ್ರೀವಿವೇಕ ವಿದ್ಯಾಲಯ ಪದವಿ ಪೂರ್ವ ಕಾಲೇಜು)

ವಿಜೇತರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು. ರಸಪ್ರಶ್ನೆ ಸ್ಪರ್ಧೆಯ ಜೊತೆಗೆ ಟ್ರೆಷರ್ ಹಂಟ್ ಸ್ಪರ್ಧೆಯನ್ನೂ ನಡೆಸಲಾಯಿತು.

ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ನ ನಿರ್ದೇಶಕ ಅನಂತಾನಂದ ಚೈತನ್ಯ, ಸಂಚಾಲಕ ಮುಕ್ತಿದಾಮೃತ ಚೈತನ್ಯ, ಅಸೋಸಿಯೇಟ್ ಡೀನ್ ಶೇಖರ್ ಬಾಬು, ಶೈಕ್ಷಣಿಕ ಸಂಯೋಜಕಿ ರೇಖಾ ಭಟ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.