ADVERTISEMENT

ಮಿದುಳು ಟ್ಯೂಮರ್‌: ಮುನ್ನೆಚ್ಚರಿಕೆ ಅಗತ್ಯ

ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಎಸ್‌ಆರ್‌ಎಸ್‌, ಎಸ್‌ಆರ್‌ಟಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 15:16 IST
Last Updated 14 ಜೂನ್ 2024, 15:16 IST
   

ಮೈಸೂರು: ‘ಮಿದುಳು ಟ್ಯೂಮರ್ (ಗಡ್ಡೆ) ಸಮಸ್ಯೆಯಿಂದ ಬಳಲುತ್ತಿರುವವರಿಗೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ‘ಸ್ಟಿರಿಯೊಟ್ಯಾಕ್ಟಿಕ್ ರೇಡಿಯೊ ಸರ್ಜರಿ’ (ಎಸ್‌ಆರ್‌ಎಸ್‌) ಹಾಗೂ ‘ಸ್ಟಿರಿಯೊಟ್ಯಾಕ್ಟಿಕ್‌ ರೇಡಿಯೇಶನ್ ಥೆರಪಿ’ (ಎಸ್‌ಆರ್‌ಟಿ) ಚಿಕಿತ್ಸೆ ಸೌಲಭ್ಯವಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಮಾಧವಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರತಿ ತಿಂಗಳು 8ರಿಂದ 10 ಪ್ರಕರಣಗಳು ವರದಿಯಾಗುತ್ತಿವೆ. ಎಲ್ಲ ವಯೋಮಾನದವರೂ ಮಿದುಳು ಗಡ್ಡೆ ಸಮಸ್ಯೆ ಎದುರಿಸುತ್ತಿದ್ದಾರೆ. ಸುಧಾರಿತ ರೇಡಿಯೊಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.

‘ದೇಶದಲ್ಲಿ ವರ್ಷಕ್ಕೆ 24 ಸಾವಿರ ಮಂದಿ ರೋಗಕ್ಕೆ ಬಲಿಯಾಗುತ್ತಿದ್ದು, ರೋಗಲಕ್ಷಣಗಳನ್ನು ಅರಿಯಬೇಕು. ತಲೆನೋವು, ವಾಂತಿ, ದೃಷ್ಟಿ ಮಂದವಾಗುವುದು, ದೇಹದಲ್ಲಿ ಅಸಮತೋಲನ, ಸ್ನಾಯು ನೋವು ಉಂಟಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಹೇಳಿದರು. 

ADVERTISEMENT

ಅಂಕಾಲಜಿಸ್ಟ್ ಡಾ.ವಿನಯ್‌ಕುಮಾರ್ ಮುತ್ತಗಿ ಮಾತನಾಡಿ, ‘ಜೂನ್ 8ರಂದು ವಿಶ್ವ ಮಿದುಳು ಗಡ್ಡೆ ದಿನವನ್ನು ಆಚರಿಸಲಾಗಿದ್ದು, ಮಿದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆ ಈ ವರ್ಷದ ಧ್ಯೇಯವಾಕ್ಯವಾಗಿದೆ. ಗಡ್ಡೆ ಬೆಳೆದಾಗ ಮಿದುಳಿನ ಚಿಪ್ಪು ಅಗಲವಾಗುವುದಿಲ್ಲ. ಅದರಿಂದ ಅಪಾಯವು ಹೆಚ್ಚಿರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಬೇಕು. ಟ್ಯೂಮರ್‌ ಬಗ್ಗೆ ಜಾಗೃತಿ ಅಗತ್ಯ’ ಎಂದರು. 

‘ಆರೋಗ್ಯಕರ ಜೀವನಶೈಲಿ ನಡೆಸಬೇಕು. ನಿತ್ಯ 40 ನಿಮಿಷ ವ್ಯಾಯಾಮ, 8 ಗಂಟೆ ನಿದ್ದೆ ಮಾಡಬೇಕು. ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು.

ಆಸ್ಪತ್ರೆಯ ಮಾರುಕಟ್ಟೆ ವ್ಯವಸ್ಥಾಪಕ ಆನಂದ್, ಗೌತಮ್‌ ಧಮೇರ್ಲಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.