ಮೈಸೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಗಳಲ್ಲಿ ಬಿಜೆಪಿ ಹಣದ ಪ್ರಭಾವ ಬೀರುತ್ತಿದ್ದು, ಚುನಾವಣಾ ಆಯೋಗ ಹೆಚ್ಚುವರಿ ವೀಕ್ಷಕರನ್ನು ನೇಮಕ ಮಾಡಬೇಕು ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದರು.
ಚುನಾವಣಾ ಆಯೋಗದ ಬಗ್ಗೆ ಭರವಸೆ ಇದೆ. ಆದರೆ, ಒಂದು ಮತಕ್ಕೆ ₹ 2 ಸಾವಿರ ಹಣ ಹಂಚಲಾಗುತ್ತಿದೆ ಎಂಬ ಸುದ್ದಿಯೂ ಇದೆ. ವಿಜಯೇಂದ್ರ ಅವರೇ ಅಲ್ಲಿ ಮೊಕ್ಕಾಂ ಹೂಡಿದ್ದಾರೆ. ಹೆಚ್ಚು ದರ ನೀಡಿ ಖರೀದಿಸಿದ ವೆಂಟಿಲೇಟರ್‌ನ ಹಣದ ಪ್ರಭಾವವನ್ನು ಅಲ್ಲಿ ಕಾಣಬಹುದು ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದರೆ ಸರ್ಕಾರಕ್ಕೆ ಆಪತ್ತು ಇಲ್ಲ. ಆದರೆ, ಈಗಾಗಲೇ ಶರಶಯ್ಯೆಯಲ್ಲಿ ಭೀಷ್ಮನಂತೆ ಮಲಗಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸುವ ಬಸವರಾಜ ಯತ್ನಾಳ್ ಸೇರಿದಂತೆ ಇತರರ ಕೈಮೇಲಾಗುವುದು ಖಚಿತ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಚಿವ ಎಸ್.ಟಿ.ಸೋಮಶೇಖರ್ ಪಕ್ಷಾಂತರ ಮಾಡಿದಾಗ ಎಷ್ಟು ಹಣ ಸಿಕ್ಕಿದೆ ಎಂದು ಅವರು ಮನಸ್ಸಾಕ್ಷಿಯಿಂದ ಹೇಳಲಿ ಎಂದು ಅವರು ಸವಾಲೆಸೆದರು.
‘ಬಿಸಿಜಿ’ ಸೇರಿದಂತೆ ಉಚಿತ ಲಸಿಕೆ ನೀಡಿಕೆಯನ್ನು ಕಾಂಗ್ರೆಸ್ ಎಂದಿಗೂ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಿಲ್ಲ. ಆದರೆ, ಬಿಜೆಪಿ ಕೊರೊನಾ ವ್ಯಾಕ್ಸಿನ್‌ನ್ನು ತನ್ನ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.