ಮೈಸೂರು: ‘ಟೀಕೆ, ವಿರೋಧಗಳನ್ನು ಗೌರವಿಸುವ ಸಂಯಮ ಬಲಪಂಥೀಯರ ಬಳಿ ಇಲ್ಲವಾಗಿದೆ. ಬೆದರಿಸುವವರಿಗೆ, ಕಿರುಚುವವರಿಗೆ, ಅಸಹಿಷ್ಣುತೆಗೆ ಈಗ ಮಣೆ ಹಾಕಲಾಗುತ್ತಿದೆ’ ಎಂದು ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ.ಕೃಷ್ಣ ಇಲ್ಲಿ ಶುಕ್ರವಾರ ಆತಂಕ ವ್ಯಕ್ತಪಡಿಸಿದರು.
‘ಹಿಂದೂ ವಿರೋಧಿ, ದೇಶ ವಿರೋಧಿ, ಅರ್ಬನ್ ನಕ್ಸಲ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ನನ್ನ ಕಾರ್ಯಕ್ರಮಗಳನ್ನೇ ರದ್ದುಪಡಿಸುವ ಹುನ್ನಾರ ನಡೆಯುತ್ತಿದೆ. ಇ–ಮೇಲ್ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ. ಭಯದ ವಾತಾವರಣದಲ್ಲಿ, ಪೊಲೀಸರ ಭದ್ರತೆಯಲ್ಲಿ ಸಂಗೀತ ಕಛೇರಿ ನಡೆಸುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಾಪ್ರಹಾರ ನಡೆಸಿದರು.
‘ಕಷ್ಟಕರ ಪ್ರಶ್ನೆ ಕೇಳುವುದರಲ್ಲಿ ಸಂವಿಧಾನದ ನಿಜವಾದ ಸೌಂದರ್ಯ ಅಡಗಿದೆ. ಆದರೆ, ಮತ್ತೊಬ್ಬರ ಮಾತು ಕೇಳುವ, ಟೀಕೆಗಳನ್ನು ಆಲಿಸುವ ವ್ಯವಧಾನವೇ ಯಾರ ಬಳಿಯೂ ಇಲ್ಲ. ಏಕವ್ಯಕ್ತಿಯ ಮಾತು ಮಾತ್ರ ಇಲ್ಲಿ ನಡೆಯುತ್ತಿದೆ. ಆತನ ಮಾತು ಕೇಳದಿದ್ದರೆ ನೀವು ಭಾರತೀಯರೇ ಅಲ್ಲ ಎನ್ನುವ ಪರಿಸ್ಥಿತಿ ಉದ್ಭವಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದರು.
‘ಮೋದಿ ಅವರಿಗೆ ದೇಶ– ವಿದೇಶಗಳ ನಾಯಕರ ಜನ್ಮದಿನಕ್ಕೆ ಶುಭಾಶಯ ಹೇಳಲು ಸಮಯವಿರುತ್ತದೆ. ಆದರೆ, ದೇಶದ ಸಮಸ್ಯೆಗಳಿಗೆ ಸ್ಪಂದಿಸಲು ಬಿಡುವಿಲ್ಲ. ಹಿಂದೆ ಒಂದು ಪತ್ರ ಬರೆದಿದ್ದೆ. ಆದರೆ, ಅವರು ಯಾವುದೇ ವಿಚಾರಕ್ಕೆ ತಕ್ಷಣ ಪ್ರತಿಕ್ರಿಯಿಸುವುದಿಲ್ಲ. ಮಾಂಸದ ವಿಚಾರದಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಿದರೂ ತುಟಿ ಬಿಚ್ಚಲಿಲ್ಲ. ಇದು ಹಿಂಬಾಲಕರಿಗೆ ತಪ್ಪು ಸಂದೇಶ ರವಾನಿಸುತ್ತಿದೆ. ಅವರ ಅಟ್ಟಹಾಸ ಜೋರಾಗುತ್ತಿದೆ. ಸರ್ಕಾರವೇ ಇದಕ್ಕೆ ನೇರ ಹೊಣೆ ಹೊರಬೇಕು’ ಎಂದು ಹೇಳಿದರು.
‘ಬಲಪಂಥೀಯರ ಒತ್ತಡಕ್ಕೆ ಮಣಿದು ಯಾವುದೇ ಕಾರಣ ನೀಡದೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ನವದೆಹಲಿಯಲ್ಲಿ ನಡೆಯಬೇಕಿದ್ದ ನನ್ನ ಸಂಗೀತ ಕಛೇರಿ ಮುಂದೂಡಿತು’ ಎಂದರು.
‘ಮೋದಿ ಅವರ ಧೋರಣೆ, ಅವರು ಜಾರಿಗೆ ತಂದಿರುವ ಕೆಲ ನೀತಿಗಳಿಗೆ ನನ್ನ ವಿರೋಧವಿದೆ. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಈ ಕಾರಣಕ್ಕೆ ಸಂಗೀತ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
‘ಬಲಪಂಥೀಯರ ಬೆದರಿಕೆಯಿಂದಾಗಿ ಕೆಲ ಕಲಾವಿದರು ಸಾಮಾಜಿಕ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ. ದೊರೆ, ಜಮೀನ್ದಾರರು, ರಾಜಕೀಯ ವ್ಯಕ್ತಿಗಳು, ಕಾರ್ಪೊರೇಟ್ ವಲಯಕ್ಕೆ ಬದ್ಧರಾಗಿ ಕೆಲಸ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಇದರಲ್ಲಿ ತುಸು ಹೆಚ್ಚು ಕಡಿಮೆಯಾದರೆ ಕಾರ್ಯಕ್ರಮವೇ ರದ್ದಾಗುತ್ತದೆ. ಆದಾಯಕ್ಕೆ ಕೊಕ್ಕೆ ಬೀಳುತ್ತದೆ’ ಎಂದು ಮಾರ್ಮಿಕವಾಗಿ ನುಡಿದರು.
‘ಪ್ರಾದೇಶಿಕ ಪಕ್ಷಗಳು ಕೈಜೋಡಿಸಿ ದೇಶದಲ್ಲಿ ಬದಲಾವಣೆ ತರುವ ಸಮಯ ಬಂದಿದೆ. ಈ ವಿಚಾರವನ್ನು ಗಂಭೀರವಾಗಿ ಚರ್ಚಿಸಿ ತುರ್ತಾಗಿ ತೀರ್ಮಾನ ಕೈಗೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.
ಶಬರಿಮಲೆ ವಿವಾದ ಬಗ್ಗೆ ಪ್ರತಿಕ್ರಿಯಿಸಿ, ’ಶಬರಿಮಲೆ ದೇಗುಲ ಪ್ರವೇಶಿಸುವ ಎಲ್ಲಾ ಹಕ್ಕು ಮಹಿಳೆಯರಿಗೆ ಇದೆ. ಬಿಜೆಪಿ ಹಾಗೂ ಕೇರಳ ಕಾಂಗ್ರೆಸ್ ಧೋರಣೆಗೆ ನನ್ನ ವಿರೋಧವಿದೆ. ಜನರ ಭಕ್ತಿಗಿಂತ ಮಿಗಿಲಾದ ವಿಚಾರ ಮತ್ತೊಂದಿಲ್ಲ’ ಎಂದರು.
ಮಾತನಾಡದ ಸ್ಥಿತಿಯಲ್ಲಿ ಕಲಾವಿದರು
‘ಜೀಸಸ್, ಅಲ್ಲಾ ಮೇಲೆ ಹಾಡು ಹಾಡಿದರೆ ಈಗ ಆಕ್ಷೇಪ ವ್ಯಕ್ತವಾಗುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಖ್ಯಾತ ಸಂಗೀತಗಾರರು ಇಂಥದ್ದೇ ಗಾಯನಕ್ಕೆ ಹೊಗಳಿಕೆಗೆ ಪಾತ್ರರಾಗಿ ಪ್ರಸಿದ್ಧಿ ಪಡೆದಿದ್ದರು’ ಎಂದು ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಹೇಳಿದರು.
‘ಕಲಾವಿದರು ಈಗ ಆತಂಕದ ಪರಿಸ್ಥಿತಿಗೆ ಸಿಲುಕಿದ್ದಾರೆ. ಏನಾದರೂ ಹೆಚ್ಚು ಕಡಿಮೆ ಮಾತನಾಡಿದರೆ ನಾಳಿನ ಕಾರ್ಯಕ್ರಮಗಳಿಗೆ ಕತ್ತರಿ ಬೀಳುತ್ತದೆ, ಆದಾಯಕ್ಕೆ ಕೊಕ್ಕೆ ಬೀಳುತ್ತದೆ. ಟಿ.ಎಂ.ಕೃಷ್ಣ ಅವರಂಥ ಗಾಯಕರನ್ನು ಬೆಂಬಲಿಸಿದರೆ ಕೆಲವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ’ ಎಂದು ವಿಷಾದಿಸಿದರು.
ವಿಕಾರ ರೂಪ ತಳೆದಿರುವ ಟೀಕೆ
‘ಯಾವುದೇ ವಿಚಾರ ಕುರಿತು ಟೀಕೆ, ವಿರೋಧ ಗಂಭೀರ ನೆಲೆಗಟ್ಟಿನಲ್ಲಿ ನಡೆದಿದ್ದರೆ ಯಾವುದೇ ತೊಂದರೆ ಇರಲಿಲ್ಲ. ಆದರೆ, ಟೀಕೆಗಳು ಈಗ ವಿಕಾರ ರೂಪ ತಳೆದಿವೆ. ತೀರಾ ಕೆಳಮಟ್ಟಕ್ಕೆ ಇಳಿದು ಟೀಕೆ ಮಾಡುತ್ತಿರುವುದು ದುರದೃಷ್ಟಕರ’ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದರು.
‘ಗಂಭೀರ ಉದ್ದೇಶ ಇಟ್ಟುಕೊಂಡು ಮಾತನಾಡುತ್ತಿರುವ, ಸಮಾಜದಲ್ಲಿನ ಅಸಮತೋಲನ ಹೋಗಲಾಡಿಸಲು ಪ್ರಯತ್ನಿಸುತ್ತಿರುವ ಸಂಗೀತಗಾರ ಟಿ.ಎಂ.ಕೃಷ್ಣ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳು ಅದಕ್ಕೆ ಉದಾಹರಣೆ. ಕಲಾವಿದರು ಕೇವಲ ಕಲೆಗೆ ಸೀಮಿತವಾಗಿರಬೇಕು ಎಂದರೆ ಹೇಗೆ? ಟೀಕೆ, ಟಿಪ್ಪಣಿಗಳನ್ನು ಏಕೆ ಗೌರವಯುತವಾಗಿ ಸ್ವೀಕರಿಸುವುದನ್ನು ಈ ಸಮಾಜ ಕಲಿತಿಲ್ಲ? ಏನಾದರೂ ಪ್ರಶ್ನೆ ಮಾಡಿದರೆ ರಾಷ್ಟ್ರವಿರೋಧಿ ಪಟ್ಟ ಹೊರಿಸಲಾಗುತ್ತಿದೆ. ಸಂಯಮ, ತಾಳ್ಮೆ ಇಲ್ಲದಂತಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.