ADVERTISEMENT

ಕೈಬೀಸಿ ಕರೆಯುವ ಹೂಗಳ ಚಿತ್ತಾರ

ವಿವಿಧ ಬಗೆಯ ಹೂವು, ಸಿರಿಧಾನ್ಯ, ಕೆಂಪು ಮೆಣಸು ಬಳಸಿ ಕಲಾಕೃತಿ ರಚನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 5:23 IST
Last Updated 4 ಅಕ್ಟೋಬರ್ 2024, 5:23 IST
ದಸರಾ ಮಹೋತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನದಲ್ಲಿ ಹೂಗಳಿಂದ ಅರಳಿರುವ ಸೆಲ್ಫಿ ಪಾಯಿಂಟ್‌ – ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ದಸರಾ ಮಹೋತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನದಲ್ಲಿ ಹೂಗಳಿಂದ ಅರಳಿರುವ ಸೆಲ್ಫಿ ಪಾಯಿಂಟ್‌ – ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.   

ಮೈಸೂರು: ಸುಗಂಧ ಬೀರುವ ಲಕ್ಷಾಂತರ ಹೂಗಳ ಚಿತ್ತಾರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೆಂಗುಲಾಬಿ, ಚೆಂಡು ಹೂ, ಸೇವಂತಿಗೆಯ ಅಂದ ಎಲ್ಲರನ್ನು ಮರುಳು ಮಾಡುವಂತಿದೆ. ಅದರಿಂದಲೇ ಅರಳಿದ ಕಲಾಕೃತಿಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.

ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಉಸ್ತುವಾರಿಯಲ್ಲಿ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಿರುವ ‘ದಸರಾ ಫಲಪುಷ್ಪ ಪ್ರದರ್ಶನ’ವು ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ ಕಟ್ಟಿಕೊಟ್ಟಿದೆ. ಉದ್ಯಾನ ಪ್ರವೇಶಿಸಿದ ಕೂಡಲೇ ‘ತಂಡಿ ಸಡಕ್‌’ ಎಂಬ ಕೂಲ್‌ ಪಾರ್ಕ್, ವಿವಿಧ ಸಸಿಗಳು, ಗುಲಾಬಿ ಹೂಗಳ ಅಲಂಕಾರವುಳ್ಳ ಚಪ್ಪರ ಮನಸ್ಸಿಗೆ ಆನಂದ ಉಂಟುಮಾಡುತ್ತಿವೆ.

ಗಾಜಿನ ಮನೆಯಲ್ಲಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಬೆಳೆದು ಬಂದಿರುವ ಹಾದಿಯನ್ನು ಅರ್ಥಗರ್ಭಿತವಾಗಿ ಕಟ್ಟಿಕೊಡಲಾಗಿದೆ. ಅನುಭವ ಮಂಟಪ ಮತ್ತು ಆಧುನಿಕ ಸಂಸತ್ತು, ಶಾಕ್ಯ ಸಂಘದಲ್ಲಿ ಪ್ರಜಾಪ್ರಭುತ್ವದ ಮೌಲ್ಯ, ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿನಿಧಿ ಸಭೆ ಹಾಗೂ ಸಂಸತ್‌ ಭವನದ ಕುರಿತ ಕಲಾಕೃತಿಗಳು ರಾರಾಜಿಸುತ್ತಿವೆ.

ADVERTISEMENT

ಬೆಂಗಳೂರಿನ ಸ್ನೀಲೂ ಫ್ಲವರ್ಸ್‌ ತಂಡ ಈ ಕಲಾಕೃತಿ ರಚಿಸಿದ್ದು, ಪ್ಯೂಪಲ್‌ ಆರ್ಕೀಡ್‌, ಕೋಲ್ಕತ್ತ ಹೈಬ್ರೀಡ್‌, ವಿವಿಧ ಬಣ್ಣದ ಗುಲಾಬಿ, ಬ್ಲೂ ಡೆಸ್ಸಿ, ಜಿಪ್ಸಿ, ಜಿಂಜರ್‌ ಲಿಲ್ಲಿ ಮುಂತಾದ ಸುಮಾರು 15 ಲಕ್ಷ ಹೂಗಳನ್ನು ಬಳಸಿದ್ದಾರೆ. ಸುವರ್ಣ ಕರ್ನಾಟಕ ಸಂಭ್ರಮ, ಮಹಿಳಾ ವಿಶ್ವಕಪ್‌, ಸ್ವಚ್ಛತೆಯ ಸಂದೇಶ ಸಾರುವ ನಂದಿ ಕಲಾಕೃತಿಗಳು ಆಕರ್ಷಣೀಯವಾಗಿವೆ.

ಮೈಸೂರು ಸಂಸ್ಥಾನದ ರಾಜರು ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆ ಚಿತ್ರಿಸಲಾಗಿದೆ. ಮೈಸೂರಿನ ಹೆಗ್ಗುರುತು ಟಾಂಗಾದಲ್ಲಿ ಸಾಗುತ್ತಿರುವ ಪ್ರವಾಸಿಗರು, ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸುವ ಕಲಾಕೃತಿ, ಕೆಂಪು ಗುಲಾಬಿಯಿಂದ ರಚಿಸಿದ ಗಡಿಯಾರ, ವೀಣೆ ಕಣ್ಮನ ಸೆಳೆಯುತ್ತಿವೆ. ರೈತ ಹಾಗೂ ಸೈನಿಕನನ್ನು ಪ್ರತಿನಿಧಿಸುವ ಕಲಾಕೃತಿ ಭಿನ್ನವಾಗಿದೆ.

ಕೆಂಪು ಮೆಣಸಿನಿಂದ ತಯಾರಿಸಿದ ಪಾರಿವಾಳ ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ಸಾವಿತ್ರಿಬಾಯಿ ಫುಲೆಯು ಶಾಲೆಯಲ್ಲಿ ಮಕ್ಕಳಿಗೆ ಪಾಠ ಬೋಧಿಸುತ್ತಿರುವ ಕಲಾಕೃತಿ ನೈಜವಾಗಿದೆ. ಸೆಲ್ಫಿ ಪ್ರಿಯರಿಗಾಗಿ ‘ಐ ಲವ್‌ ಯೂ ಮೈಸೂರು’ ಬರಹವುಳ್ಳ ಸೆಲ್ಫಿ ಪಾಯಿಂಟ್‌ ನಿರ್ಮಿಸಿದ್ದು, ಅದರೊಂದಿಗೆ ಗುಲಾಬಿಯಿಂದ ರಚಿಸಿದ ಹೃದಯ ಹಾಗೂ ಅರಮನೆಯ ಕಲಾಕೃತಿ ಸೆಲ್ಫಿ ಅಂದವನ್ನು ಹೆಚ್ಚಿಸುತ್ತಿದೆ.

ಮೈಸೂರಿನ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳಿಂದ ಮೂಡಿರುವ ಅನುಭವ ಮಂಟಪದ ಪ್ರತಿಕೃತಿ – ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರಿನ ಕುಪ್ಪಣ್ಣ ಉದ್ಯಾನದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿರುವ ಸಾವಿತ್ರಿಬಾಯಿ ಫುಲೆಯು ಶಾಲೆಯಲ್ಲಿ ಮಕ್ಕಳಿಗೆ ಪಾಠ ಬೋಧಿಸುತ್ತಿರುವ ಕಲಾಕೃತಿ – ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರಿನ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವ ಎಚ್‌.ಸಿ.ಮಹದೇವಪ್ಪ ವಿಧಾನಪರಿಷತ್‌ ಸದಸ್ಯ ಮಂಚೇಗೌಡ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.