ADVERTISEMENT

ರಾಜ್ಯ ಸರ್ಕಾರದಿಂದ ಜನರ ಮೇಲೆ ಸೇಡಿನ ರಾಜಕಾರಣ: ಬಿ.ವೈ.ವಿಜಯೇಂದ್ರ ಕಿಡಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 8:04 IST
Last Updated 23 ಜೂನ್ 2024, 8:04 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಮೈಸೂರು: ‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ನೀಡಲಿಲ್ಲವೆಂಬ ಕಾರಣಕ್ಕೆ ನಾಡಿನ ಜನರ ಮೇಲೆ ರಾಜ್ಯ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಸೇಡು ತೀರಿಸಿಕೊಳ್ಳಲು ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯನ್ನು ಈ ಸರ್ಕಾರ ಏರಿಸಿದೆ. ಗ್ಯಾರಂಟಿಗಳನ್ನು ಕೊಟ್ಟರೂ ಜನ ಅವರ ಕೈ ಹಿಡಿಯಲಿಲ್ಲ. ಈ ಸಿಟ್ಟು ಕಾಂಗ್ರೆಸ್‌ನವರಿಗಿದೆ. ಆದ್ದರಿಂದಲೇ ಜನ ವಿರೋಧಿ ನಿರ್ಧಾರಗಳನ್ನು ಮಾಡುತ್ತಿದೆ’ ಎಂದು ದೂರಿದರು.

‘ಸರ್ಕಾರ ಜನರ ಮೇಲೆ ಸೇಡಿನ ರಾಜಕಾರಣ ನಿಲ್ಲಿಸಬೇಕು. ತೈಲ ಬೆಲೆಯನ್ನು ತಕ್ಷಣವೇ ಇಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಕಡತಕ್ಕೆ ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಹಿ ಹಾಕಿರುವುದಕ್ಕೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ರಾಜ್ಯ ಸರ್ಕಾರವು ಕೇಂದ್ರದ ಪ್ರತಿ ನಿರ್ಧಾರದಲ್ಲೂ ಮೊಸರಿನಲ್ಲಿ ಕಲ್ಲು ಹುಡುಕುವ ರೀತಿ ವರ್ತಿಸುತ್ತಿದೆ’ ಎಂದು ತಿರುಗೇಟು ನೀಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದು ಕೈಗಾರಿಕೆಯೂ ಬಂದಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರವು ಕೈಗಾರಿಕೆಗಳನ್ನು ಸ್ಥಾಪಿಸಲು ಹೊರಟಾಗ ಅದಕ್ಕೂ ಕಾಂಗ್ರೆಸ್‌ ತಕರಾರು ಮಾಡುತ್ತಿದೆ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾ ಕುಳಿತರೆ ರಾಜ್ಯದ ಅಭಿವೃದ್ಧಿ ಹೇಗಾಗುತ್ತದೆ ಹೇಳಿ?’ ಎಂದು ಕೇಳಿದರು.

‘ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮಂಗಳವಾರ (ಜೂನ್‌ 25) ನವದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸುತ್ತೇನೆ. ಸೀಟನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಅಥವಾ ತೆಗೆದುಕೊಳ್ಳವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಪ್ರಾಥಮಿಕ ಚರ್ಚೆಯೂ ನಡೆದಿಲ್ಲ. ಜೆಡಿಎಸ್ ಮತ್ತು ಬಿಜೆಪಿ ನಾಯಕರು ಸೇರಿ ಚರ್ಚಿಸಿಯೇ ನಿರ್ಧಾರ ಮಾಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ನಿಂದ ಯಾರಾದರೂ ಸ್ಪರ್ಧಿಸಲಿ, ಅದು ಅವರಿಗೆ ಬಿಟ್ಟ ವಿಚಾರ. ಜನ ಮನಸ್ಸು ಮಾಡಿದರೆ ಎಂತಹ ಫಲಿತಾಂಶ ಬರುತ್ತದೆ ಎಂಬುದಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಸಾಕ್ಷಿಯಾಗಿದೆ. ಯಾರು ಎಷ್ಟೇ ಬಲಾಢ್ಯರಾದರೂ ಜನರ ತೀರ್ಮಾನವೇ ಅಂತಿಮವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.