ಮೈಸೂರು: ಈಗ ನಗರದ ಮಾರುಕಟ್ಟೆ ತುಂಬೆಲ್ಲ ಮಾವಿನದ್ದೇ ಘಮಲು. ಆದರೆ, ನಾವು ಚಪ್ಪರಿಸಿ ತಿನ್ನುವ ಈ ಹಣ್ಣನ್ನು ಮಾಗಿಸಲು ಕಾರ್ಬೈಡ್ ಎಂಬ ವಿಷಕಾರಿ ರಾಸಾಯನಿಕವನ್ನು ಯಥೇಚ್ಛವಾಗಿ ಬಳಸುತ್ತಿದ್ದು, ಇದರಿಂದ ಹಣ್ಣು ತಿನ್ನಲು ಹಿಂಜರಿಯುವಂತೆ ಆಗಿದೆ.
ಹಸಿರಾದ ಮಾವಿನ ಕಾಯಿಗಳನ್ನು ರಂಗುರಂಗಾಗಿ ಕಂಗೊಳಿಸುವ ರೀತಿಯಲ್ಲಿ ಮಾಗಿಸುವ ಸಲುವಾಗಿ ಕ್ಯಾಲ್ಸಿಯಂ ಕಾರ್ಬೈಡ್ ಮೊದಲಾದ ರಾಸಾಯನಿಕಗಳ ಬಳಕೆ ಯಥೇಚ್ಛವಾಗಿ ನಡೆದಿದೆ. ಇದರಿಂದ ರಾಸಾಯನಿಕ ವಿಷವು ನೇರವಾಗಿ ಗ್ರಾಹಕರ ಉದರ ಸೇರುತ್ತಿದೆ. ಸರ್ಕಾರ ಈ ರಾಸಾಯನಿಕಗಳ ಬಳಕೆ ಮೇಲೆ ನಿಷೇಧ ಹೇರಿದ್ದರೂ ಮಾರುಕಟ್ಟೆಯಲ್ಲಿ ಈ ತಂತ್ರ ನಡೆದೇ ಇದೆ.
ಲಾಭ ಗಳಿಕೆಯ ತಂತ್ರ
ಕರ್ನಾಟಕದಲ್ಲಿ ಈಗಷ್ಟೇ ಮಾವಿನ ಕೊಯ್ಲು ಆರಂಭ ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಮಾವು ಬಂದು ತಿಂಗಳಾಗಿದೆ!
ಮಾವು ಋತುವಿನ ಆರಂಭದಲ್ಲಿ ಹಣ್ಣಿನ ಬೆಲೆ ಹೆಚ್ಚಿರುತ್ತದೆ. ಹೀಗಾಗಿ ಕೆಲವು ವರ್ತಕರು ಲಾಭ ಗಳಿಕೆಯ ಸಲುವಾಗಿ ಕಾಯಿಯನ್ನು ಕಿತ್ತು ಬಲವಂತವಾಗಿ ಹಣ್ಣು ಮಾಡುತ್ತಾರೆ. ಆರಂಭದಲ್ಲಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಹಣ್ಣಿನ ಬೆಲೆ ₹150–200ರವರೆಗೂ ಇರುತ್ತದೆ. ನಂತರದಲ್ಲಿ ಇದು ₹60–80ಕ್ಕೆ ಇಳಿಯುತ್ತದೆ. ಹೀಗಾಗಿ ಮೊದಲೇ ಲಾಭದ ಆಸೆಗೆ ಕಾಯಿಯ ಹಂತದಲ್ಲಿಯೇ ಮಾವನ್ನು ಕಿತ್ತು ಬಲವಂತವಾಗಿ ಹಣ್ಣು ಮಾಡಲಾಗುತ್ತಿದೆ. ಹೀಗೆ ಮಾಡಲು ಕಾರ್ಬೈಡ್ ಅನ್ನು ಬಳಸಲಾಗುತ್ತದೆ. ಈ ರಾಸಾಯನಿಕವು ಕಾಯನ್ನು ಕೃತಕವಾಗಿ ಮಾಗಿಸಿ ಅದಕ್ಕೆ ಬಣ್ಣ ನೀಡುತ್ತದೆ. ಇದರೊಟ್ಟಿಗೆ ಹಣ್ಣಿನಲ್ಲಿ ವಿಷಕಾರಿ ಅಂಶವೂ ಸೇರ್ಪಡೆ ಆಗುತ್ತದೆ ಎಂದು ವಿವರಿಸುತ್ತಾರೆ ಮಾರುಕಟ್ಟೆ ತಜ್ಞರು.
ತೊಂದರೆ ಏನು?:
‘ಕಾರ್ಬೈಡ್‌ಯುಕ್ತ ಹಣ್ಣನ್ನು ನೇರವಾಗಿ ಸೇವನೆ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯ ಸಮಸ್ಯೆಗಳಾದ ಗಂಟಲು ಕೆರೆತ, ತುರಿಕೆ, ಚರ್ಮದ ಸಮಸ್ಯೆ, ಅಲರ್ಜಿಯಿಂದ ಹಿಡಿದು ದೀರ್ಘಕಾಲೀನ ಸಮಸ್ಯೆಗಳಿಗೂ ಈ ರಾಸಾಯನಿಕ ಕಾರಣವಾಗಬಹುದು. ಅದರಲ್ಲೂ ಕ್ಯಾನ್ಸರ್‌ನಂತಹ ಮಹಾಮಾರಿ ಬರುವ ಸಾಧ್ಯತೆಯೂ ಇದೆ’ ಎನ್ನುತ್ತಾರೆ ವೈದ್ಯರು.
‘ಈ ರಾಸಾಯನಿಕವನ್ನು ಮಕ್ಕಳು, ದೊಡ್ಡವರು ನೇರವಾಗಿ ಸೇವಿಸಿದಲ್ಲಿ ಸಾವು ಸಂಭವಿಸುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ಮಕ್ಕಳಿಗೆ ಇದರ ಗಾಳಿ ಸೋಕದಂತೆ ಎಚ್ಚರ ವಹಿಸಬೇಕು’ ಎನ್ನುವುದು ಅವರ ಸಲಹೆ.
ಕ್ರಮ ಕೈಗೊಳ್ಳಿ
ರಸಗೊಬ್ಬರದ ಅಂಗಡಿಗಳಲ್ಲಿ ಕಾರ್ಬೈಡ್ ರಾಸಾಯನಿಕ ಮಾರಾಟ ಹಾಗೂ ಹಣ್ಣುಗಳನ್ನು ಮಾಗಿಸಲು ಇವುಗಳ ಬಳಕೆಯನ್ನು ಸರ್ಕಾರ ದಶಕದ ಹಿಂದೆಯೇ ನಿಷೇಧಿಸಿದೆ. ಆದರೆ, ಇಂದಿಗೂ ಕದ್ದುಮುಚ್ಚಿ ಅದರ ಮಾರಾಟ ನಡೆದಿದೆ. ಮೈಸೂರು ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾರ್ಬೈಡ್‌ನಿಂದ ಮಾಗಿಸಿದ ಹಣ್ಣುಗಳು ಸಿಗುತ್ತಲೇ ಇವೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
‘ಕಾರ್ಬೈಡ್ ಬಳಕೆಯನ್ನು ಮೂಲದಲ್ಲಿಯೇ ಪತ್ತೆ ಮಾಡಿ ತಡೆ ಒಡ್ಡಬೇಕು. ವಿಷಯುಕ್ತ ರಾಸಾಯನಿಕವು ರೈತರು ಹಾಗೂ ವರ್ತಕರಿಗೆ ಸುಲಭವಾಗಿ ಸಿಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅಂಗಡಿಗಳಲ್ಲಿ ಇದು ಮಾರಾಟ ಆಗದಂತೆ ಕ್ರಮ ಜರುಗಿಸಬೇಕು. ಮಾರುವವರಿಗೆ ದೊಡ್ಡ ಮಟ್ಟದ ದಂಡ ವಿಧಿಸಬೇಕು’ ಎಂಬುದು ರೈತರು ಹಾಗೂ ಪ್ರಜ್ಞಾವಂತರ ಆಗ್ರಹವಾಗಿದೆ.
ಪರ್ಯಾಯ ಏನು?
ಹಣ್ಣನ್ನು ಮಾಗಿಸಲು ನೈಸರ್ಗಿಕವಾದ ಹಲವು ವಿಧಾನಗಳಿದ್ದು ಅದನ್ನು ಅನುಸರಿಸಬೇಕು. ಯಥಿಲೀನ್ ಮೊದಲಾದ ಹಾನಿಕಾರಕವಲ್ಲದ ದ್ರಾವಣಗಳನ್ನು ಬಳಸಿ ಹಣ್ಣನ್ನು ಮಾಗಿಸಬಹುದು. ಇದರಿಂದ ಆರೋಗ್ಯಕ್ಕೆ ಹೆಚ್ಚು ಹಾನಿಯಾಗುವುದಿಲ್ಲ. ಯಾವುದೇ ಹಣ್ಣನ್ನು ಬಳಸುವ ಮುನ್ನ ಅದನ್ನು ನೀರಿನಲ್ಲಿ ಒಂದೆರಡು ನಿಮಿಷ ನೆನೆಯಿಸಿ ಚೆನ್ನಾಗಿ ತೊಳೆದ ಬಳಿಕವಷ್ಟೇ ತಿನ್ನಬೇಕು ಎನ್ನುವುದು ವೈದ್ಯರು ಹಾಗೂ ತೋಟಗಾರಿಕೆ ವಿಜ್ಞಾನಿಗಳ ಸಲಹೆ.
ನೈಸರ್ಗಿಕ ಮಾವು ಬಳಸಿ
ಸಾವಯವ ರೂಪದಲ್ಲಿ ಬೆಳೆದ ಒಣಹುಲ್ಲಿನ ಶಾಖದಲ್ಲಿ ಇಲ್ಲವೇ ತೋಟಗಾರಿಕೆ ಇಲಾಖೆಯ ವಿಜ್ಞಾನಿಗಳು ಶಿಫಾರಸು ಮಾಡಿದ ಹಾನಿಕಾರಕವಲ್ಲದ ರಾಸಾಯನಿಕ ಬಳಸಿ ಮಾಗಿಸಿದ ಮಾವು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. ತೋಟಗಾರಿಕೆ ಇಲಾಖೆಯು ಮಾವು ಮೇಳಗಳ ಆಯೋಜನೆ ಮೂಲಕ ರೈತರು ಹಾಗೂ ಗ್ರಾಹಕರನ್ನು ನೇರವಾಗಿ ಬೆಸೆಯುವ ಮೂಲಕ ವಿಷಯುಕ್ತ ಮಾವಿನ ಮಾರಾಟಕ್ಕೆ ವೇದಿಕೆ ಒದಗಿಸುತ್ತಿದೆ. ಮೈಸೂರಿನಲ್ಲಿ ಸದ್ಯದಲ್ಲೇ ಮಾವು ಮೇಳ ಆಯೋಜನೆಗೆ ಇಲಾಖೆಯು ಚಿಂತನೆ ನಡೆಸಿದೆ.
ರಾಸಾಯನಿಕ ಬಳಸಿ ಮಾವಿಗೆ ಕೃತಕವಾಗಿ ಬಣ್ಣ ಕಟ್ಟಿ ಮಾರಲಾಗುತ್ತಿದೆ. ಇದು ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು ನಗರಪಾಲಿಕೆಯ ಅಧಿಕಾರಿಗಳು ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕು.ಎಚ್.ಆರ್. ದೊರೆಸ್ವಾಮಿ, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.