ADVERTISEMENT

ಕಟ್ಟೆಮಳಲವಾಡಿ ನಾಲೆ ಆಧುನೀಕರಣ: ಅನುದಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 14:25 IST
Last Updated 25 ನವೆಂಬರ್ 2024, 14:25 IST
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ನಾಲೆ ಆಧುನಿಕರಣಗೊಳಿಸಲು ಅನುದಾನ ಬಿಡುಗಡೆ ಮಾಡುವಂತೆ ಪ್ರಗತಿಪರ ರೈತರಾದ ಪುರುಶೋತ್ತಮ್ , ಚಿಲ್ಕುಂದ ನಾಗರಾಜ್ ಮತ್ತು ಸತ್ಯ ಫೌಂಡೇಶ್ನ ಅಧ್ಯಕ್ಷ ಸತ್ಯಪ್ಪ, ತಹಶೀಲ್ದಾರ್ ಮಂಜುನಾಥ್ ಗೆ ಸೋಮವಾರ ಮನವಿ ಪತ್ರ ನೀಡಿದರು.
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ನಾಲೆ ಆಧುನಿಕರಣಗೊಳಿಸಲು ಅನುದಾನ ಬಿಡುಗಡೆ ಮಾಡುವಂತೆ ಪ್ರಗತಿಪರ ರೈತರಾದ ಪುರುಶೋತ್ತಮ್ , ಚಿಲ್ಕುಂದ ನಾಗರಾಜ್ ಮತ್ತು ಸತ್ಯ ಫೌಂಡೇಶ್ನ ಅಧ್ಯಕ್ಷ ಸತ್ಯಪ್ಪ, ತಹಶೀಲ್ದಾರ್ ಮಂಜುನಾಥ್ ಗೆ ಸೋಮವಾರ ಮನವಿ ಪತ್ರ ನೀಡಿದರು.   

ಹುಣಸೂರು: ‘ಕಟ್ಟೆಮಳಲವಾಡಿ ನಾಲೆ ಆಧುನೀಕರಣಕ್ಕೆ ಹಾರಂಗಿ ನೀರಾವರಿ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿ ಶಾಶ್ವತ ಪರಿಹಾರ ನೀಡಬೇಕು’ ಎಂದು ಅಚ್ಚುಕಟ್ಟು ಪ್ರದೇಶದ ರೈತ ಪುರುಷೋತ್ತಮ ರಾವ್ ಸಾಳಂಕೆ ಆಗ್ರಹಿಸಿದ್ದಾರೆ.

ನಗರದ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಅವರು, ‘ನ.28ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯು ನಿಗಮ ಮಂಡಳಿ ಸಭೆ ನಡೆಸುತ್ತಿದ್ದು, ಕಟ್ಟೆಮಳಲವಾಡಿ ಅಚ್ಚುಕಟ್ಟು ಪ್ರದೇಶದ ನಾಲೆ ದುರಸ್ತಿಗೆ ಈಗಾಗಲೇ ಇಲಾಖೆ ಸಲ್ಲಿಸಿರುವ ₹ 49 ಕೋಟಿ ಮೊತ್ತದ ಪ್ರಸ್ತಾವನೆಗೆ ಒಪ್ಪಿಗೆ ನೀಡಬೇಕು, ಕಾಂಕ್ರೀಟ್ ಲೈನಿಂಗ್ ಕಾಮಗಾರಿ ನಡೆಸಿ 1,600 ಹೆಕ್ಟೇರ್ ಪ್ರದೇಶದ ರೈತರಿಗೆ ನೀರಿನ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ‘ತಾಲ್ಲೂಕಿನ ಜೀವ ನದಿ ಲಕ್ಷ್ಮಣತೀರ್ಥ ನದಿಗೆ ಕಟ್ಟೆಮಳಲವಾಡಿ ಗ್ರಾಮದಲ್ಲಿ ನಿರ್ಮಿಸಿದ ಅಣೆಕಟ್ಟೆ ಸಂಪೂರ್ಣ ಶಿಥಿಲವಾಗಿತ್ತು. ಹಿಂದಿನ ಶಾಸಕರ ಅವಧಿಯಲ್ಲಿ ₹ 3 ಕೋಟಿ ಅನುದಾನದಲ್ಲಿ ಅಣೆಕಟ್ಟೆ ದುರಸ್ತಿಗೊಂಡಿದ್ದು, ನೀರು ಕಟ್ಟೆಯಲ್ಲಿ ಲಭ್ಯವಿದ್ದರೂ ನಾಲೆ ಶಿಥಿಲವಾಗಿ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲ. ಈ ಸಂಬಂಧ ಪ್ರತಿ ವರ್ಷವೂ ಕಾವೇರಿ ನೀರಾವರಿ ನಿಗಮ ಮಂಡಳಿ ಎದುರು ರೈತರು ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.

ADVERTISEMENT

‘16 ಕಿ.ಮೀ. ಉದ್ದದ ಈ ನಾಲೆ ಅಭಿವೃದ್ಧಿಗೊಂಡರೆ ಕಿರುಸೋಡ್ಲು, ರಾಮಪಟ್ಟಣ, ಸೋಮನಹಳ್ಳಿ, ಅಗ್ರಹಾರ, ತೊಂಡಾಳು, ಉಂಡವಾಡಿ, ಹುಲ್ಯಾಳು, ಗಾವಡೆಗೆರೆ, ಬಿಳಿಗೆರೆ, ಮಾರಗೌಡನಹಳ್ಳಿ, ಕಟ್ಟೆಮಳಲವಾಡಿ, ಕಟ್ಟೆಮಳಲವಾಡಿ ಕೊಪ್ಪಲು ಗ್ರಾಮಗಳಿಗೆ ನಾಲೆ ನೀರು ಲಭ್ಯವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.