ADVERTISEMENT

ಮೈಸೂರು: ಗ್ಯಾಲರಿಯಲ್ಲಿ ಹಕ್ಕಿಗಳ ದರ್ಶನ!

‘ರೆಕ್ಕೆಪುಕ್ಕ’ ಭಾರತೀಯ ಹಕ್ಕಿಗಳ ಛಾಯಾಚಿತ್ರ ಪ್ರದರ್ಶನ ಇಂದಿನಿಂದ

ಮೋಹನ್ ಕುಮಾರ ಸಿ.
Published 9 ನವೆಂಬರ್ 2024, 6:23 IST
Last Updated 9 ನವೆಂಬರ್ 2024, 6:23 IST
ರೆಡ್‌ಸ್ಟಾರ್ಟ್
ರೆಡ್‌ಸ್ಟಾರ್ಟ್   

ಮೈಸೂರು: ಪಕ್ಷಿವೀಕ್ಷಣೆಯ ಹವ್ಯಾಸ, ಬಾನಾಡಿಗಳ ಮೇಲಿನ ಪ್ರೀತಿಯಿಂದ ಆರಂಭಿಸಿದ ಛಾಯಾಗ್ರಹಣವು ವಿಜ್ಞಾನಿ ಹಾಗೂ ತಂತ್ರಜ್ಞರಿಬ್ಬರನ್ನು ಹಿಮಾಲಯದ ಪರ್ವತ ಶ್ರೇಣಿ, ಕಣಿವೆಗಳಲ್ಲಿ, ಪಶ್ಚಿಮಘಟ್ಟಗಳ ಹಸಿರಿನಲ್ಲಿ ಅಲೆಯುವಂತೆ ಮಾಡಿತು.

ಕಾಡುಗಳ ಅಲೆದಾಟದಲ್ಲಿ ಅವರಿಗೆ ಸೆರೆಯಾದ ಹಕ್ಕಿಗಳು ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಇದೇ ನ.9, 10ರಂದು ಹೊಳೆಯಲಿವೆ!

ಬಾನಾಡಿಗಳ ಒಡನಾಡಿಗಳಾದ ಬಾಬಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿ ಗಿರಿ ಚಂದ್ರಶೇಖರ್ ಹಾಗೂ ‘ವಿಪ್ರೊ’ ಕಂಪನಿಯ ತಂತ್ರಜ್ಞ ಕಶ್ಯಪ್‌ ಅವರು ಭಾರತ ಪಕ್ಷಿ ಪಿತಾಮಹ ಡಾ.ಸಲೀಂ ಆಲಿ ಜನ್ಮದಿನಕ್ಕೆ ಅವರ ನೆನಪಿನಲ್ಲಿ ‘ರೆಕ್ಕೆ ಪುಕ್ಕ’ ಭಾರತದ ಹಕ್ಕಿಗಳ ಛಾಯಾಚಿತ್ರ ಪ್ರದರ್ಶನವನ್ನು ಇಲ್ಲಿ ಆಯೋಜಿಸಿದ್ದಾರೆ. 

ADVERTISEMENT

ಪಶ್ಚಿಮಘಟ್ಟಗಳ ಹಾರುವ ಹುಲಿಗಳೆಂದೇ ಕರೆಯಲಾಗುವ ‘ದೊಡ್ಡ ದಾಸ ಮಂಗಟ್ಟೆ’, ‘ಮಲಬಾರಿನ ಕರಿ ಮಂಗಟ್ಟೆ’, ‘ಬೂದು ಮಂಗಟ್ಟೆ’ ಸೇರಿದಂತೆ ಹಾರ್ನ್‌ಬಿಲ್‌ಗಳು, ಹತ್ತಾರು ಮರಕುಟಿಕಗಳು, ಪಿಕಳಾರಗಳು, ಕಾಕರ್ನೆ, ಮಿಂಚುಳ್ಳಿಗಳು, ಗೂಬೆಗಳು ಚಿತ್ರ ಪ್ರದರ್ಶನದಲ್ಲಿ ತಮ್ಮ ಹಾರುವ, ಕೂರುವ ವಿವಿಧ ಭಂಗಿಗಳನ್ನು ತೋರಲಿವೆ.

ಅರಣ್ಯ ರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸುವ ಹಕ್ಕಿಗಳನ್ನು ಬೆನ್ನು ಹತ್ತಿರುವ ಗಿರಿ– ಕಶ್ಯಪ್‌ ಜೋಡಿಯು ತೆಗೆದಿರುವ ಛಾಯಾಚಿತ್ರಗಳಲ್ಲಿ 180 ಪ್ರಭೇದದ ಹಕ್ಕಿಗಳು ಛಾಯಾಚಿತ್ರ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಲಿವೆ.

‘ಅರುಣಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಪಶ್ಚಿಮ ಬಂಗಾಳದ ಕಾಡುಗಳಲ್ಲಿ ತೆಗೆದ ಅಪರೂಪದ ಚಿತ್ರಗಳು ಇರಲಿವೆ. ಹಿಮಾಲಯದ ಹಕ್ಕಿಗಳು ವರ್ಣರಂಜಿತವಾಗಿರುತ್ತವೆ. ದೇಶದ ಶೇ 20ರಷ್ಟು ಹಕ್ಕಿಗಳು ಈ ಭಾಗದಲ್ಲಿವೆ. ಪಶ್ಚಿಮ ಘಟ್ಟದ ಉದ್ದಕ್ಕೂ ಅಲೆದಾಡಿ ತೆಗೆದ ಹಕ್ಕಿಗಳ ಚಿತ್ರಗಳನ್ನು ಛಾಯಾಚಿತ್ರ ಪ್ರದರ್ಶನದಲ್ಲಿಡಲಾಗಿದೆ’ ಎಂದು ಗಿರಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮನು ವಿಜಯಲಕ್ಷ್ಮಿ ಚಾಲನೆ

ಪಕ್ಷಿತಜ್ಞರಾದ ಮನು ಹಾಗೂ ವಿಜಯಲಕ್ಷ್ಮಿ ಅವರು ಛಾಯಾಚಿತ್ರ ಪ್ರದರ್ಶನಕ್ಕೆ ನ.9ರಂದು ಬೆಳಿಗ್ಗೆ 10.30ಕ್ಕೆ ಚಾಲನೆ ನೀಡಲಿದ್ದಾರೆ. ಪ್ರದರ್ಶನವು 9 10ರಂದು ಬೆಳಿಗ್ಗೆ 10.30ರಿಂದ ಸಂಜೆ 7.30ರವರೆಗೆ ಇರಲಿದೆ.

ಗೋಲ್ಡನ್ ಬುಷ್ ರಾಬಿನ್
ನೊಣಹಿಡುಕ
ಯುರೇಷಿಯನ್ ಸ್ಪೂನ್‌ಬಿಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.