ADVERTISEMENT

ಮೈಸೂರು: ಕೆ.ಆರ್.ಆಸ್ಪತ್ರೆ ಆವರಣಕ್ಕೆ ಬೇಕಿದೆ ಸಿ.ಸಿ ಟಿವಿ ಕ್ಯಾಮೆರಾ

ಶಿವಪ್ರಸಾದ್ ರೈ
Published 18 ಆಗಸ್ಟ್ 2024, 5:46 IST
Last Updated 18 ಆಗಸ್ಟ್ 2024, 5:46 IST
ಕೆ.ಆರ್‌ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿ ಇಲ್ಲ.
ಕೆ.ಆರ್‌ ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿ ಇಲ್ಲ.    

ಮೈಸೂರು: ನಿತ್ಯ ನೂರಾರು ಜನ ಓಡಾಡುವ ದೊಡ್ಡಾಸ್ಪತ್ರೆ (ಕೆ.ಆರ್‌ ಆಸ್ಪತ್ರೆ)ಯ ಪ್ರವೇಶ ದ್ವಾರಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಇಲ್ಲ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅತ್ಯಾಚಾರದಂಥ ಘಟನೆಯಿಂದ, ಆಸ್ಪತ್ರೆಗಳಲ್ಲಿ ಸುರಕ್ಷತೆಯ ಬಗ್ಗೆ ಮಾತುಗಳು ಕೇಳಿಬರುತ್ತಿರುವಾಗಲೇ, ಜಿಲ್ಲೆಯ ಪ್ರಮುಖ ಆಸ್ಪತ್ರೆಯ ದುಸ್ಥಿತಿಯ ಬಗ್ಗೆ ಚರ್ಚೆಗಳಾಗುತ್ತಿವೆ.

ಕೆ.ಆರ್‌ ಆಸ್ಪತ್ರೆಗೆ ಜೆ.ಕೆ ಮೈದಾನದ ಬಳಿ, ಚೆಲುವಾಂಬ ಆಸ್ಪತ್ರೆ ಮುಂಭಾಗ, ಕೆ.ಆರ್‌ ಆಸ್ಪತ್ರೆ ವೃತ್ತದ ಬಳಿಯ ಮುಖ್ಯದ್ವಾರದಿಂದ ಪ್ರವೇಶ ಪಡೆಯಬಹುದು. ಮುಖ್ಯದ್ವಾರದ ಮೂಲಕವೇ ಹೆಚ್ಚಿನ ಜನ ಓಡಾಡುತ್ತಾರೆ. ಆದರೆ ಈ ಮೂರು ಕಡೆಯು ಹೆಚ್ಚಿನ ಸಂದರ್ಭದಲ್ಲಿ ಕಾವಲು ಸಿಬ್ಬಂದಿಯೇ ಇರುವುದಿಲ್ಲ. ಸಿ.ಸಿ ಟಿವಿ ಕ್ಯಾಮೆರಾವಂತೂ ಕನಸಿನ ಮಾತಾಗಿದೆ.

ಸಾರ್ವಜನಿಕ ಪ್ರದೇಶವಾದ್ದರಿಂದ ರೋಗಿಗಳ ಹೊರತಾಗಿ ಇತರರೂ ಓಡಾಡುತ್ತಾರೆ. ಜಿಲ್ಲೆಯಲ್ಲಿ ನಡೆಯುವ ಅನೇಕ ಪ್ರಕರಣ, ಅಪಘಾತಕ್ಕೆ ಸಂಬಂಧಿಸಿದ ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಇಲ್ಲಿ ಅಚಾತುರ್ಯ ಸಂಭವಿಸಿದರೆ, ಮೂಲ ಪತ್ತೆ ಮಾಡಲು ಸಿ.ಸಿ ಟಿವಿ ಕ್ಯಾಮೆರಾಗಳು ಇ‌ಲ್ಲಿ ಕಾಣ ಸಿಗುವುದಿಲ್ಲ. ‘ವೈದ್ಯರ ಮೇಲೆ ದಾಳಿಯಂತಹ ಸಂದರ್ಭಗಳಲ್ಲಿ ಆಸ್ಪತ್ರೆಯ ಒಳಗೆ ಯಾರೆಲ್ಲಾ ನುಸುಳಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಿದೆ’ ಎನ್ನುತ್ತಾರೆ ಸಾರ್ವಜನಿಕರು.

ADVERTISEMENT

ಕಾರ್ಡ್‌ ಇಲ್ಲ; ‘ಹೊರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿರುವಂತೆ ರೋಗಿಗಳಿಗೆ ಹಾಗೂ ಅವರ ಸಹಾಯಕರಿಗೆ ಗುರುತಿನ ಚೀಟಿ ವ್ಯವಸ್ಥೆಯೂ ಇಲ್ಲ. ಎಲ್ಲರೂ ನೇರವಾಗಿ ಆಸ್ಪತ್ರೆ ಆವರಣಕ್ಕೆ ಬರುತ್ತಾರೆ. ಅವರಲ್ಲಿ ಯಾರ ಮನಸ್ಥಿತಿ, ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳುವುದು ಅಸಾಧ್ಯ. ಅವರು ತೊಂದರೆ ಮಾಡಿದರೂ ಸಹಿಸಿಕೊಂಡು ಕೆಲಸ ಮಾಡಬೇಕು. ಕಾರ್ಡ್‌ ವ್ಯವಸ್ಥೆ ತಂದು ಪ್ರವೇಶ ದ್ವಾರದಲ್ಲೇ ಜನರನ್ನು ಪರಿಶೀಲಿಸಿ ಅಗತ್ಯ ಇರುವವರನ್ನು ಮಾತ್ರವೇ ಒಳಗೆ ಬಿಟ್ಟರೆ ಉತ್ತಮ’ ಎಂದು ವೈದ್ಯಾಧಿಕಾರಿಯೊಬ್ಬರು ತಿಳಿಸಿದರು.

ಆಸ್ಪತ್ರೆಯ ಒಳಭಾಗದಲ್ಲಿ ಪೇ ಪಾರ್ಕಿಂಗ್‌ ವ್ಯವಸ್ಥೆಯಿದೆ. ಆದರೆ ಯಾವ ವಾಹನ ಬಂದಿದೆ ಎಂದು ನಮೋದಿಸಿಕೊಳ್ಳುವ ವ್ಯವಸ್ಥೆಯೇ ಇಲ್ಲ. ವೈದ್ಯರಿಗೆ, ಸಿಬ್ಬಂದಿ ವಾಹನಗಳಿಗೆ ಮೀಸಲಾದ ಸ್ಥಳದಲ್ಲೇ ಸಾರ್ವಜನಿಕರ ವಾಹನಗಳು ತುಂಬಿಕೊಂಡಿರುತ್ತದೆ. ಒಟ್ಟಿನಲ್ಲಿ ಆಸ್ಪತ್ರೆ ಆವರಣಕ್ಕೆ ಯಾರು ಬೇಕಾದರೂ ಬರಬಹುದು ಎಂಬ ಸ್ಥಿತಿ ಇದೆ. ಇದರಿಂದಾಗಿ ರೋಗಿಗಳಲ್ಲದವರೂ ಒಳ ಸೇರಿಕೊಳ್ಳುತ್ತಾರೆ. ಜನರ ಓಡಾಟ ಕಡಿಮೆ ಇರುವಲ್ಲಿ ಇವರ ಸಂಖ್ಯೆ ಹೆಚ್ಚು.

ಕೆ.ಆರ್‌ ಆಸ್ಪತ್ರೆಯ ಶತಮಾನೋತ್ಸವದ ಸಂಭ್ರಮದ ಸಮಯದಲ್ಲಿ ಆಸ್ಪತ್ರೆಯ ಅಭಿವೃದ್ಧಿಗಾಗಿ ಸರ್ಕಾರ ₹89 ಕೋಟಿ ಮೀಸಲಿಟ್ಟಿದೆ. ಅದರ ಕಾಮಗಾರಿಗಳೂ ತ್ವರಿತಗತಿಯಲ್ಲಿ ನಡೆಯುತ್ತಿವೆ. ಅದರೊಂದಿಗೆ ಆಸ್ಪತ್ರೆ ಆವರಣ ಭದ್ರತೆಯ ದೃಷ್ಟಿಯಿಂದ ಸಿ.ಸಿ ಟಿವಿ ಕ್ಯಾಮೆರಾಗಳ ಅಳವಡಿಕೆಯೂ ಆಗಲಿ ಎಂಬುದು ಸಿಬ್ಬಂದಿ ಮತ್ತು ಜನರ ಆಶಯ.

ಆವರಣದ ಸುತ್ತ ಬೇಕು ಭದ್ರತೆ

‘ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದ ಔಷಧದ ಅಗತ್ಯವಿಲ್ಲದ ಆಸ್ಪತ್ರೆಗೆ ಸಂಬಂಧವಿಲ್ಲದವರೂ ಆವರಣ ಪ್ರವೇಶಿಸುತ್ತಾರೆ. ಚೆಲುವಾಂಬ ಆಸ್ಪತ್ರೆ ಬಿಟ್ಟರೆ ಉಳಿದ ಕಡೆಗಳಲ್ಲಿ ಅಗತ್ಯವಿರುವಷ್ಟು ಸಿ.ಸಿ ಟಿವಿ ಕ್ಯಾಮೆರಾ ಇಲ್ಲ. ಹೀಗಾಗಿ ಜನರ ಓಡಾಟ ಕಡಿಮೆ ಇರುವಲ್ಲಿಯೂ ಸೇರಿದಂತೆ ಆವರಣದ ಪೂರ್ತಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆ ಆಗಬೇಕು’ ಎನ್ನುವುದು ಸಿಬ್ಬಂದಿ ಹಾಗೂ ಸಾರ್ವಜನಿಕರ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.