ADVERTISEMENT

ಜಾತಿ ಜನಗಣತಿ ವರದಿ ಜಾರಿಗೊಳಿಸಿ: ದಲಿತ ಸಂಘರ್ಷ ಸಮಿತಿ ಸದಸ್ಯರ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:33 IST
Last Updated 22 ಅಕ್ಟೋಬರ್ 2024, 14:33 IST
ಜಾತಿ ಜನಗಣತಿ ವರದಿ ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ
ಜಾತಿ ಜನಗಣತಿ ವರದಿ ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ರಾಜ್ಯ ಸರ್ಕಾರವು ಜಾತಿ ಜನಗಣತಿ ವರದಿ ಅಂಗೀಕರಿಸಿ, ಅನುಷ್ಠಾನಕ್ಕೆ ತರಬೇಕು’ ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟಿಸಿದರು.

‘ಸರ್ಕಾರವು ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಜನಗಣತಿ ವರದಿಯನ್ನು ಸ್ವೀಕರಿಸಿದ ಕೂಡಲೇ ಕೆಲವು ಪಟ್ಟಭದ್ರ ಜಾತಿವಾದಿ ‌‌‌‌‌ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ತೀವ್ರ ಅಸಮಾಧಾನ ಹೊರಹಾಕಿ ವಿರೋಧ ವ್ಯಕ್ತಪಡಿಸುತ್ತಿರುವುದು ಕಳವಳಕಾರಿ ಸಂಗತಿ’ ಎಂದು ಪ್ರತಿಭಟನಕಾರರು ದೂರಿದರು.

‘ರಾಜ್ಯದ ಜನಸಂಖ್ಯೆಯ ಬಹು ಭಾಗವಾಗಿರುವ ಆದಿವಾಸಿಗಳು, ಅಲೆಮಾರಿಗಳು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಶೋಷಿತ ಸಮುದಾಯಗಳು ಹಲವು ದಶಕಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿವೆ. ಆದರೆ, ಜಾತಿ ಕೇಂದ್ರಿತ ಪಕ್ಷ ರಾಜಕಾರಣವು ಈ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿತ್ತು. ಹೀಗಾಗಿ ದುರ್ಬಲ ತಳ ಸಮುದಾಯಗಳ ಉನ್ನತಿಗಾಗಿ ಯೋಜನೆಗಳನ್ನು ರೂಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಜನಗಣತಿ ವರದಿಯ ಅಂಕಿ– ಅಂಶಗಳ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳ ಈಗಿರುವ ಶೇ 50ರಷ್ಟು ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇ 75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು, ಬಿ.ಡಿ.ಶಿವಬುದ್ಧಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.