ADVERTISEMENT

ಮೈಸೂರು | ಸಿಇಟಿ: 2,263 ಮಂದಿ ಗೈರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 16:30 IST
Last Updated 19 ಏಪ್ರಿಲ್ 2024, 16:30 IST

ಮೈಸೂರು: ಜಿಲ್ಲೆಯ 39 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯಾವುದೇ ಗೊಂದಲಗಳಿಲ್ಲದೆ ಶುಕ್ರವಾರ ಸುಗಮವಾಗಿ ನಡೆಯಿತು. ಇದರೊಂದಿಗೆ ಎರಡು ದಿನಗಳ ಪರೀಕ್ಷೆಗೆ ತೆರೆಬಿತ್ತು. 

ಬೆಳಿಗ್ಗೆ ಭೌತವಿಜ್ಞಾನ ವಿಷಯಕ್ಕೆ 1,185 ಮಂದಿ ಹಾಗೂ ಮಧ್ಯಾಹ್ನ ನಡೆದ ರಸಾಯನವಿಜ್ಞಾನ ಪರೀಕ್ಷೆಗೆ 1,078 ವಿದ್ಯಾರ್ಥಿಗಳು ಸೇರಿದಂತೆ 2,263 ಮಂದಿ ಗೈರಾದರು.

‘ಭೌತ ವಿಜ್ಞಾನಕ್ಕೆ ಹೆಸರು ನೋಂದಾಯಿಸಿದ 17,137 ವಿದ್ಯಾರ್ಥಿಗಳಲ್ಲಿ 15,952 ಮಂದಿ ಪರೀಕ್ಷೆ ಬರೆದರು. ಶೇ 93.08ರಷ್ಟು ದಾಖಲಾತಿ ಇತ್ತು. ರಸಾಯನ ವಿಜ್ಞಾನ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 17,137 ವಿದ್ಯಾರ್ಥಿಗಳಲ್ಲಿ 16,059 ಮಂದಿ ಹಾಜರಾಗಿದ್ದರು. ಶೇ 93.70ರಷ್ಟು ಹಾಜರಾತಿ ಇತ್ತು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮರಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಭೌತವಿಜ್ಞಾನ ಪರೀಕ್ಷೆಗೆ ನಂಜನಗೂಡಿನ ಸಿಟಿಜನ್‌ ಪಿಯು ಕಾಲೇಜಿನಲ್ಲಿ 359 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 145 ಮಂದಿ ಗೈರಾಗಿದ್ದರು. ಇಲ್ಲಿ ಅತಿ ಕಡಿಮೆ ಹಾಜರಾತಿ ಇತ್ತು. ಮರಿಮಲ್ಲಪ್ಪ ಪಿಯು ಕಾಲೇಜಿನಲ್ಲಿ 240 ಮಂದಿ ಪೈಕಿ 6 ಮಂದಿ ಗೈರಾಗಿದ್ದು, ಹಾಜರಾತಿ ಪ್ರಮಾಣ ಹೆಚ್ಚಿತ್ತು.

ರಸಾಯನ ವಿಜ್ಞಾನ ಪರೀಕ್ಷೆಗೆ ಸೇಂಟ್‌ ಫಿಲೋಮಿನಾ ಕಾಲೇಜಿನಲ್ಲಿ 552 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 48 ಮಂದಿ ಗೈರಾಗಿದ್ದರು. ಇಲ್ಲಿ ಹಾಜರಾತಿ ಪ್ರಮಾಣ ಕಡಿಮೆ ದಾಖಲಾಗಿದೆ. ಮಂಚೇಗೌಡನ ಕೊಪ್ಪಲಿನ ಸರ್ಕಾರಿ ಪಿಯು ಕಾಲೇಜು ಕೇಂದ್ರದಲ್ಲಿ 294 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 42 ಮಂದಿ ಗೈರಾಗಿದ್ದರು. 

ಗಣಿತ ಪರೀಕ್ಷೆಯಲ್ಲಿ ಎಲ್ಲ 39 ಕೇಂದ್ರಗಳಲ್ಲಿ ಶೇ 80ಕ್ಕಿಂತ ಹೆಚ್ಚು ಹಾಜರಾತಿ ಇತ್ತು. ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು, ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲಾಗಿತ್ತು. ಜಿಲ್ಲೆಯ ಅಭ್ಯರ್ಥಿಗಳಲ್ಲದೆ ನೆರೆಯ ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.