ಮೈಸೂರು: ‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ; ನನ್ನ ಹೆಸರಿನಲ್ಲೇ ಮತ ಕೇಳುತ್ತೇವೆ. ನಮ್ಮ ಕುಟುಂಬದವರ‍್ಯಾರೂ ಸ್ಪರ್ಧಿಸುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಉಪ ಚುನಾವಣೆಗೆ ಚನ್ನಪಟ್ಟಣದಲ್ಲಿ ವೇದಿಕೆ ಸಿದ್ಧಮಾಡಿಕೊಳ್ಳುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ನಮಗೆ ಕಡಿಮೆ ಮತ ಬಂತು. ವಿಧಾನಸಭೆಯಲ್ಲಿ ಇನ್ನೂ ಕಡಿಮೆ ಮತಗಳು ಬಂದಿದ್ದವು. ನಮ್ಮ ಅಡಿಪಾಯ ಭದ್ರಗೊಳಿಸುತ್ತಿದ್ದೇವೆ. ಜನರು ನಮ್ಮ ಕೆಲಸ ನೋಡಿ ಕೈ ಹಿಡಿಯುವ ವಿಶ್ವಾಸವಿದೆ’ ಎಂದರು.
‘ಚನ್ನಪಟ್ಟಣದಲ್ಲಿ ವ್ಯಕ್ತಿ ಮೇಲೆ ಚುನಾವಣೆ ನಡೆಯುವುದಿಲ್ಲ. ಪಕ್ಷದ ಸಿದ್ಧಾಂತದ ಮೇಲೆ ಚುನಾವಣೆ ಮಾಡಲು ಹೊರಟಿದ್ದೇನೆ. ವಿರೋಧಪಕ್ಷದವರು ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ಸದ್ಯ ನಮ್ಮ ಮನೆಯನ್ನು ರಿಪೇರಿ ಮಾಡಿಕೊಂಡರೆ ಸಾಕು’ ಎಂದು ಹೇಳಿದರು.
‘ಬಿಜೆಪಿಯವರು ಇನ್ನೂ 10 ವರ್ಷ ವಿರೋಧಪಕ್ಷವಾಗಿಯೇ ಇರಲಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೆ ಎಂದು ಕಾಯುತ್ತಲೇ ಇರಲಿದ್ದಾರೆ’ ಎಂದರು.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆಯೇ ಎಂಬ ಪ್ರಶ್ನೆಗೆ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.