ADVERTISEMENT

ಮೈಸೂರು | ರಜೆ: ಗರಿಗೆದರಿದ ಪ್ರವಾಸೋದ್ಯಮ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 13:35 IST
Last Updated 24 ಡಿಸೆಂಬರ್ 2023, 13:35 IST
ಮೈಸೂರು ಅರಮನೆ ಆವರಣದಲ್ಲಿ ಭಾನುವಾರ ಕಂಡುಬಂದ ಪ್ರವಾಸಿಗರು -ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.
ಮೈಸೂರು ಅರಮನೆ ಆವರಣದಲ್ಲಿ ಭಾನುವಾರ ಕಂಡುಬಂದ ಪ್ರವಾಸಿಗರು -ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.   

ಮೈಸೂರು: ಕ್ರಿಸ್‌ಮಸ್‌ ರಜೆ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿದೆ. ಹೋಟೆಲ್‌, ರೆಸ್ಟೋರೆಂಟ್‌ ಕೊಠಡಿಗಳು ಮುಂಗಡ ಬುಕ್‌ ಆಗಿದ್ದು, ಬಹುತೇಕ ಭರ್ತಿಯಾಗಿವೆ.

ಅಂಬಾವಿಲಾಸ ಅರಮನೆ, ಚಾಮರಾಜೇಂದ್ರ ಮೃಗಾಲಯ, ದಸರಾ ವಸ್ತುಪ್ರದರ್ಶನ, ಕಾರಂಜಿಕೆರೆ ಹಾಗೂ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಪ್ರವಾಸಿ ತಾಣಗಳ ಸುತ್ತಮುತ್ತ ಟ್ರಾಫಿಕ್‌ಜಾಮ್‌ ಕಂಡುಬಂದಿತು. ಅರಮನೆ ಸುತ್ತಮುತ್ತ ಸಂಜೆ ಹೆಚ್ಚಿನ ವಾಹನ ಹಾಗೂ ಜನಸಂದಣಿ ಕಂಡುಬಂತು. ದೊಡ್ಡಕೆರೆ ಮೈದಾನದ ಪಾರ್ಕಿಂಗ್ ಜಾಗದಲ್ಲಿ ನೂರಾರು ವಾಹನಗಳು ನಿಂತಿದ್ದವು.

ವಿವಿಧ ಜಿಲ್ಲೆಗಳ ಶಾಲಾ ಮಕ್ಕಳು ಪ್ರವಾಸಕ್ಕೆಂದು ನಗರಕ್ಕೆ ಬರುತ್ತಿದ್ದಾರೆ. ಅರಮನೆ ಆವರಣದಲ್ಲಿ ಮಾಡಿರುವ ಫಲಪುಷ್ಪ ಪ್ರದರ್ಶನವೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ADVERTISEMENT

‘ನಗರದ ಹೃದಯ ಭಾಗದಲ್ಲಿರುವ ಎಲ್ಲಾ ಹೋಟೆಲ್‌ಗಳ ಕೊಠಡಿಗಳೂ ಭರ್ತಿಯಾಗಿವೆ. ಹೊರವಲಯದಲ್ಲಿರುವ ಹೋಟೆಲ್‌ ಕೊಠಡಿಗಳು ಶೇ 90ರಷ್ಟು ತುಂಬಿವೆ. ದಸರಾ ದಿನಗಳಿಂದಲೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಪ್ರವಾಸೋದ್ಯಮ ಹಾಗೂ ಹೋಟೆಲ್ ಉದ್ಯಮಕ್ಕೆ ಅನುಕೂಲವಾಗಿದೆ’ ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದರು.

‘ನಗರದಲ್ಲಿ 415 ಹೋಟೆಲ್‌ಗಳಲ್ಲಿದ್ದು 10,300 ಕೊಠಡಿಗಳಿವೆ. ಕೇರಳ, ತಮಿಳುನಾಡು, ಆಂಧ್ರದ ಮೊದಲಾದ ಕಡೆಗಳ ಪ್ರವಾಸಿಗರು ಶೇ 50ರಷ್ಟು ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ. ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳ ಪ್ರವಾಸಿಗರು ಕೂಡ ಬರುತ್ತಿದ್ದಾರೆ’ ಎಂದು ಹೇಳಿದರು.

‘ಮಗಳ ಹುಟ್ಟುಹಬ್ಬದ ಕಾರಣದಿಂದ ಕುಟುಂಬಸಹಿತ ಚಾಮುಂಡಿ ಬೆಟ್ಟೆಕ್ಕೆ ತೆರಳುತ್ತಿದ್ದೆವು. ಆದರೆ, ವಾಹನಗಳ ಸಾಲು ನೋಡಿ ನಾನು ಅರ್ಧ ದಾರಿಯಲ್ಲೇ ವಾಪಸಾದೆ. ಭಾನುವಾರ ಚಾಮುಂಡಿ ಬೆಟ್ಟಕ್ಕೆ ಬಹಳ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು. ಮೈಸೂರು–ಬೆಂಗಳೂರು ಹೆದ್ದಾರಿಯಲ್ಲೂ ಬಹಳ ವಾಹನಗಳು ಸಂಚರಿಸಿದವು. ಟೋಲ್‌ ಸಂಗ್ರಹ ಸ್ಥಳದಲ್ಲಿ ನೂರಾರು ವಾಹನಗಳಿದ್ದವು’ ಎಂದು ಕುವೆಂಪುನಗರದ ನಿವಾಸಿ ಮಧುಸೂದನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.