ಮೈಸೂರು: ‘ಸಮಾಜಕ್ಕೆ ಸ್ಪಂದಿಸುವ ಶಿಕ್ಷಣ ಇಂದಿನ ಅಗತ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸೊಸೈಟಿಯಿಂದ ಇಲ್ಲಿನ ಸುಭಾಷ್ ನಗರದಲ್ಲಿ ನೂತನವಾಗಿ ಸ್ಥಾಪಿಸಿರುವ ‘ಕ್ವೆಸ್ಟ್ ಅಕಾಡೆಮಿ’ಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮದು ಅಸಮಾನತೆ ಹಾಗೂ ಜಾತಿ ವ್ಯವಸ್ಥೆಯಿಂದ ಕೂಡಿರುವ ಸಮಾಜ. ಜಾತಿ, ಮೌಢ್ಯ, ಕಂದಾಚಾರ ಪಾಲಿಸುವಂತೆ ಹೇಳುವ ಹಾಗೂ ಕರ್ಮಸಿದ್ಧಾಂತ ಪೋಷಿಸುವ ವಿದ್ಯೆ ಇರಬಾರದು. ಕರ್ಮಸಿದ್ಧಾಂತ ಪಾಲಿಸಿದರೆ ಹಾಗೂ ಮೌಢ್ಯ ಹೇಳಿಕೊಟ್ಟರೆ ಅವರು ಮನುಷ್ಯರಾಗುವುದೇ ಇಲ್ಲ’ ಎಂದರು.
‘ಡಾಕ್ಟರ್, ಎಂಜಿನಿಯರ್ ಆಗಿರುತ್ತಾರಾದರೂ ಮೌಢ್ಯ ಬಿಡುವುದೇ ಇಲ್ಲ. ಇಂತಹ ಶಿಕ್ಷಣ ಬೇಕಾ? ಬಸವಣ್ಣ ಕರ್ಮ ಸಿದ್ಧಾಂತ ತಿರಸ್ಕರಿಸಿದ್ದರು. ಈಗ ಬಸವಣ್ಣನವರ ಹೆಸರಲ್ಲೇ ಕರ್ಮಸಿದ್ಧಾಂತ ಪಾಲಿಸುವವರಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಹಣೆಬರಹವೇನಿಲ್ಲ: ‘ನಮ್ಮ ಹಣೆಬರಹ ಎಂದೆಲ್ಲಾ ಜನರು ಮಾತನಾಡುವುದು ನೋಡಿದ್ದೇನೆ. ದೇವರೇನು ಹಣೆ ಮೇಲೆ ಬರೆದಿದ್ದಾನೆಯೇ? ಹಿಂದಿನ ಜನ್ಮವೂ ಇಲ್ಲ, ಮುಂದಿನ ಜನ್ಮವೂ ಇಲ್ಲ. ಈ ಜನ್ಮದಲ್ಲಿ ಏನಾಗಿದ್ದೇವೆ ಎಂಬುದಷ್ಟೆ ಮುಖ್ಯ’ ಎಂದು ತಿಳಿಸಿದರು.
‘ವಿದ್ಯಾವಂತರೇ, ಇವನು ನಮ್ಮ ಜಾತಿಯಲ್ಲ; ವೋಟ್ ಹಾಕುವುದು ಬೇಡ ಎನ್ನುತ್ತಾರೆ. ಮತ್ತೆ ಕೆಲವರು ಇವನು ನಮ್ಮ ಜಾತಿಯವನು ಅದಕ್ಕೇ ವೋಟು ಹಾಕಿ ಎನ್ನುತ್ತಾರೆ. ಅವನಿಗೆ ರಾಜಕೀಯ ಪ್ರಜ್ಞೆ, ತಿಳಿವಳಿಕೆ ಇದೆಯೋ ಇಲ್ಲವೋ ನೋಡುವುದಿಲ್ಲ. ಕಾಳಜಿ ಇದೆಯೋ, ಇಲ್ಲವೋ ತಿಳಿಯುವುದಿಲ್ಲ. ಜಾತಿ ನೋಡು, ವೋಟು ಹಾಕು ಅಷ್ಟೆ. ಇದಕ್ಕೆ ವಿದ್ಯೆ ಕಲಿಬೇಕಾ’ ಎಂದು ಪ್ರಶ್ನಿಸಿದರು.
ಕೊಟ್ಟಿಗೆಯಲ್ಲಿ ಆರಂಭವಾಗಿ...: ‘ಕೊಟ್ಟಿಗೆಯಲ್ಲಿ ಬಿತ್ತಿದ ಬೀಜ (ಸಿದ್ಧಾರ್ಥ ಶಿಕ್ಷಣ ಸೊಸೈಟಿ) ಹೆಮ್ಮರವಾಗಿ ಬೆಳೆದಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಕಾಲೇಜಿನವರೆಗೆ 35ಸಾವಿರ ವಿದ್ಯಾರ್ಥಿಗಳು ಈಗ ಶಿಕ್ಷಣ ಪಡೆಯುತ್ತಿದ್ದಾರೆ. ಗಂಗಾಧರಯ್ಯ ಅವರು ದೊಡ್ಡ ವಿದ್ಯಾವಂತರಲ್ಲದಿದ್ದರೂ ಗ್ರಾಮೀಣ ಪ್ರದೇಶದ, ಬಡ ಹಾಗೂ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂದು ಯೋಚಿಸಿದರಲ್ಲಾ?’ ಎಂದು ಶ್ಲಾಘಿಸಿದರು.
ಸಂಸ್ಥೆಯ ಕಾರ್ಯದರ್ಶಿ, ಗೃಹ ಸಚಿವ ಜಿ.ಪರಮೇಶ್ವರ ಮಾತನಾಡಿ, ‘ದನದ ಕೊಟ್ಟಿಗೆಯಲ್ಲಿ ಆರಂಭವಾದ ಸಂಸ್ಥೆ ಈಗ 85 ಶಾಲಾ–ಕಾಲೇಜುಗಳನ್ನು ನಡೆಸುತ್ತಿದೆ. ಲಕ್ಷಾಂತರ ಮಂದಿ ವಿದ್ಯಾಭ್ಯಾಸ ಮಾಡಿ ಬದುಕು ರೂಪಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ಸಂಸ್ಥೆಯಡಿ 40 ಪ್ರೌಢಶಾಲೆಗಳಿವೆ. ಅವೆಲ್ಲವೂ ಗ್ರಾಮೀಣ ಪ್ರದೇಶಗಳಲ್ಲಿಯೇ ಇವೆ. ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ಅತ್ಯಾಧುನಿಕ ಶಾಲೆಯನ್ನು ನಗರದಲ್ಲೂ ಆರಂಭಿಸಬೇಕು ಎಂಬ ಉದ್ದೇಶದಿಂದ ಮೈಸೂರಿನಲ್ಲಿ ಕ್ವೆಸ್ಟ್ ಅಕಾಡೆಮಿ ಸ್ಥಾಪಿಸಿದ್ದೇವೆ. ಗುಣಮಟ್ಟದ ಶಿಕ್ಷಣ ನಮ್ಮ ಉದ್ದೇಶವಾಗಿದ್ದು, ಶಿಕ್ಷಣದಿಂದ ದೂರ ಉಳಿದಿರುವವರಿಗೆ ತಲುಪಿಸುವಲ್ಲಿ ಬದ್ಧವಾಗಿದೆ’ ಎಂದು ಹೇಳಿದರು.
ಯೋಜನೆ ರೂಪಿಸಬೇಕು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ‘ಸಿದ್ಧಾರ್ಥ ಶಿಕ್ಷಣ ಸೊಸೈಟಿಯು ಶಿಕ್ಷಣ ಕ್ಷೇತ್ರದಲ್ಲಿ ಸಾರ್ಥಕ ಸೇವ ನೀಡುತ್ತಿದೆ’ ಎಂದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯವಾಗಿದೆ. ಶುಲ್ಕ ಎಷ್ಟಿರಬೇಕು ಎಂಬುದನ್ನು ನಿಗದಿಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಮೌಲ್ಯಾಧಾರಿತ ಶಿಕ್ಷಣಕ್ಕೆ ಸ್ಪಷ್ಟ ಯೋಜನೆಯನ್ನು ಸರ್ಕಾರ ರೂಪಿಸಬೇಕು’ ಎಂದು ಆಶಿಸಿದರು.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ಎ.ಆರ್. ಕೃಷ್ಣಮೂರ್ತಿ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಿಕ್ಷಣ ತಜ್ಞ ಅಬ್ರಾಹಂ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಕನ್ನಿಕಾ ಪರಮೇಶ್ವರಿ, ಎಚ್.ಕೆ. ಕುಮಾರಸ್ವಾಮಿ, ಪ್ರಾಂಶುಪಾಲರಾದ ವೀಣಾ ಮಣಿ ಪಾಲ್ಗೊಂಡಿದ್ದರು.
ವೈಚಾರಿಕತೆ, ವೈಜ್ಞಾನಿಕತೆ ಕಲಿಸಬೇಕು...
‘ಶಿಕ್ಷಣವಷ್ಟೆ ಸಿಕ್ಕರೆ ಸಾಲದು. ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ವೈಜ್ಞಾನಿಕತೆ ಹಾಗೂ ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ವಿಕಾಸಕ್ಕೆ, ಸ್ವಾಭಿಮಾನಿಗಳಾಗಲು ಶಿಕ್ಷಣ ಅತ್ಯಗತ್ಯ. ಬಹಳ ಮಂದಿ ಶಿಕ್ಷಣ ಪಡೆದಿರುತ್ತಾರೆ. ಆದರೆ, ಅವರಲ್ಲಿ ಸಾಮಾಜಿಕ ಹಾಗೂ ಮಾನವೀಯ ಸ್ಪಂದನೆ ಇರುವುದಿಲ್ಲ. ಶಿಕ್ಷಣ ಕಲಿತೂ ಜಾತಿವಾದಿಗಳಾದರೆ, ಧಾರ್ಮಿಕ ತಾರತಮ್ಯ ಪಾಲಿಸಿದರೆ ಅಂತಹ ಶಿಕ್ಷಣದಿಂದ ಏನು ಪ್ರಯೋಜನ?’ ಎಂದು ಸಿದ್ದರಾಮಯ್ಯ ಕೇಳಿದರು.
‘ಕೆಲವರು ಮಾತ್ರ ಸಮಾಜದ ಸವಲತ್ತುಗಳನ್ನು ಅನುಭವಿಸಬೇಕಾ, ಸಮಾಜದ ಪ್ರತಿಯೊಬ್ಬರಿಗೂ ಈ ಸವಲತ್ತುಗಳು ಸಿಗಬೇಕು ತಾನೇ? ಸಾಮಾಜಿಕ ತಾರತಮ್ಯ ಹೋಗಬೇಕು ತಾನೇ? ಇದಕ್ಕಾಗಿ ಶಿಕ್ಷಣ ಅಗತ್ಯ. ಸಂಪತ್ತಿನ ಹಂಚಿಕೆ ಅತ್ಯವಶ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.