ADVERTISEMENT

ಮೈಸೂರು | ಕ್ರಿಸ್‌ಮಸ್‌: ಮಿನುಗುತ್ತಿದೆ ‘ಬಜಾರ್‌’

Shwetha Kumari
Published 19 ಡಿಸೆಂಬರ್ 2023, 5:30 IST
Last Updated 19 ಡಿಸೆಂಬರ್ 2023, 5:30 IST
ಮನ್ನಾರ್ಸ್‌ ಮಾರುಕಟ್ಟೆಯಲ್ಲಿ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಿ
ಮನ್ನಾರ್ಸ್‌ ಮಾರುಕಟ್ಟೆಯಲ್ಲಿ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಿ   

ಮೈಸೂರು: ನಗರದ ಶಿವರಾಂಪೇಟೆಯ ಮನ್ನಾರ್ಸ್ ಮಾರುಕಟ್ಟೆ ರಸ್ತೆಯು ಸಂಜೆಯಾದರೆ ಕ್ರಿಸ್‌ಮಸ್‌ ಹಬ್ಬದ ಖರೀದಿಗೆ ಆಗಮಿಸುವ ಗ್ರಾಹಕರಿಂದ ಗಿಜಿಗಿಡುತ್ತಿದೆ. ಕ್ರಿಸ್‌ಮಸ್‌ ಮರ, ನಕ್ಷತ್ರ, ಗಂಟೆಗಳು, ಲೈಟಿಂಗ್‌ ಸೆಟ್‌ಗಳಿಂದ ಮಿನುಗುವ ಅಂಗಡಿಗಳಲ್ಲಿ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಸಂತಾಕ್ಲಾಸ್‌ ಬಟ್ಟೆಗಳಿಗೆ, ಗೊಂಬೆಗಳಿಗೆ ಮಕ್ಕಳಿಂದ ಯುವಕರೂ ಆಕರ್ಷಿತರಾಗುತ್ತಿದ್ದಾರೆ.

ಕ್ರೈಸ್ತ ಸಮುದಾಯ ತಮ್ಮ ಅತಿದೊಡ್ಡ ಹಬ್ಬವಾದ ಕ್ರಿಸ್‌ಮಸ್‌ ಆಚರಣೆಗೆ ಸಜ್ಜಾಗುತ್ತಿದೆ. ಡಿಸೆಂಬರ್‌ ಆರಂಭದಿಂದಲೇ ಖರೀದಿಯಲ್ಲಿ ತೊಡಗಿದ್ದು, ವ್ಯಾಪಾರಿಗಳಿಗೂ ವರ್ಷಾಂತ್ಯದ ಬಹುದೊಡ್ಡ ಸಂಭ್ರಮವಾಗಿ ಕ್ರಿಸ್‌ಮಸ್‌ ಕಂಡುಬರುತ್ತಿದೆ. ಜತೆಗೆ ಹೊಸ ವರ್ಷಾಚರಣೆಯೂ ಸೇರಿದ್ದರಿಂದ ಅಂಗಡಿಗಳೆಲ್ಲಾ ದೀಪಾಲಂಕಾರದಲ್ಲಿ ಮಿನುಗುತ್ತಿವೆ.

ಲೂರ್ದ್‌ ನಗರ, ಗಾಂಧಿನಗರ, ಶ್ರೀರಾಂಪುರ, ವಿಜಯನಗರ, ಜೆ.ಪಿ.ನಗರ, ಲಷ್ಕರ್ ಮೊಹಲ್ಲಾ, ಬೃಂದಾವನ ಬಡಾವಣೆ, ಗೋಕುಲಂ, ಅಶೋಕಪುರಂ, ವಿಜಯನಗರ ಸೇರಿದಂತೆ ನಗರದ ವಿವಿಧ ಭಾಗಗಳಿಂದ ಮಾರುಕಟ್ಟೆಗೆ ಕುಟುಂಬದೊಂದಿಗೆ ಆಗಮಿಸುತ್ತಿರುವ ಕ್ರೈಸ್ತ ಸಮುದಾಯದ ಗ್ರಾಹಕರು ಮನೆಯ ಹಬ್ಬದ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳುತ್ತಿದ್ದಾರೆ.

ADVERTISEMENT
ಹಬ್ಬದ ಶಾಪಿಂಗ್‌ ಇತರ ಶಾಪಿಂಗ್‌ಗಿಂತ ಭಿನ್ನವೆನಿಸುತ್ತದೆ. ಮನೆಯಲ್ಲಿ ಈ ಬಾರಿ ಹಬ್ಬದ ಅಲಂಕಾರ ನನಗೆ ವಹಿಸಿದ್ದಾರೆ.
ಮರಿಯಾ, ಬೃಂದಾವನ ಬಡಾವಣೆ

‘ಕ್ರಿಸ್‌ಮಸ್‌ನಲ್ಲಿ ಮಾತ್ರ ಅಂಗಡಿಯನ್ನು ಹಾಕುತ್ತೇವೆ. ನಕ್ಷತ್ರ, ಕ್ರಿಸ್‌ಮಸ್‌ ಮರ, ಮರಕ್ಕೆ ಹಾಕುವ ಸೆಟ್‌ಗಳು, ತೂಗುಗಂಟೆಗಳಿಗೆ ಬೇಡಿಕೆ ಹೆಚ್ಚಿದೆ. ಅವುಗಳನ್ನು ಮಾತ್ರ ಮಾರುತ್ತೇವೆ. ಕಳೆದ ಬಾರಿಗಿಂತ ಶೇ 20ರಷ್ಟು ದರ ಹೆಚ್ಚಳವಾಗಿದೆ. ದೊಡ್ಡ ಅಂಗಡಿಗಿಂತ ನಮ್ಮಲ್ಲಿ ಹತ್ತು ರೂಪಾಯಿ ಕಡಿಮೆಗೆ ಸಿಗುತ್ತೆ. ನಮ್ಮದೇ ಆದ ಗ್ರಾಹಕರಿದ್ದಾರೆ’ ಎಂದು ವ್ಯಾಪಾರಿ ವಿಶ್ವನಾಥ್ ಹೇಳಿದರು.

ಎಲ್ಲವೂ ದುಬಾರಿ

ಪ್ರತಿ ವರ್ಷ ಇಲ್ಲಿ ಬಂದು ಹಬ್ಬದ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇನೆ. ಮನೆಯಲ್ಲೂ ಕಳೆದ ಬಾರಿಯ ಕೆಲವೊಂದಷ್ಟು ವಸ್ತುಗಳಿರುತ್ತವೆ. ಅಲ್ಲಿ ಕೆಟ್ಟು ಹೋದವನ್ನು ಮತ್ತು ಮಾರುಕಟ್ಟೆಗೆ ಹೊಸದಾಗಿ ಬಂದವನ್ನು ಖರೀದಿಸುತ್ತೇನೆ. ಕಳೆದ ಸಲಕ್ಕಿಂತ ಎತ್ತರದ ಕ್ರಿಸ್‌ಮಸ್‌ ಮರ ತೆಗೆದುಕೊಳ್ಳಬೇಕು ಎಂದು ಬಂದಿರುವೆ. ಎಲ್ಲವೂ ದುಬಾರಿಯಾಗಿದೆ. ಹಿಂದಿನ ಹಬ್ಬಕ್ಕಿಂತ ₹2 ಸಾವಿರದಷ್ಟು ಹೆಚ್ಚುವರಿ ಖರ್ಚಾಗುತ್ತಿದೆ’ ಎಂದು ರಾಘವೇಂದ್ರ ನಗರದ ನವೀನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಕ್‌ಗೆ ಬೇಡಿಕೆ; ದರದಲ್ಲಿ ವ್ಯತ್ಯಾಸವಿಲ್ಲ’

‘ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಕಾರಣ ಡಿಸೆಂಬರ್‌ ತಿಂಗಳಲ್ಲಿ ಯಾವಾಗಲೂ ಬೇಡಿಕೆ ಜಾಸ್ತಿಯೇ ಇರುತ್ತದೆ. ಈ ಬಾರಿಯೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಇದೆ’ ಎಂದು ಡಾಲ್‌ಫಿನ್‌ ಕೇಕ್‌ ಅಂಗಡಿಯ ಮಾಲೀಕ ನಿಜಾರ್ ತಿಳಿಸಿದರು. ‘ಕೇಕ್‌ಗೆ ಬಳಸುವ ಉತ್ಪನ್ನಗಳ ದರ ಕೊಂಚ ಏರಿಕಯಾಗಿದೆ. ಆದರೆ ಕೇಕ್‌ ದರದಲ್ಲಿ ಅಂತಹ ವ್ಯತ್ಯಾಸವಾಗಿಲ್ಲ. ನೂತನ ವಿನ್ಯಾಸ ಮತ್ತು ಫ್ಲೇವರ್‌ನಲ್ಲಿ ವಿವಿಧ ಕೇಕ್‌ಗಳನ್ನು ಪರಿಚಯಿಸಲಾಗುತ್ತಿದೆ. ಪ್ರದರ್ಶನಗಳ ಮೂಲಕವೂ ಜನರನ್ನು ತಲುಪುತ್ತಿದ್ದೇವೆ’ ಎಂದರು.

ಹಬ್ಬದ ಅಲಂಕಾರ ವಸ್ತುಗಳು;ದರ (₹ಗಳಲ್ಲಿ)

ಕ್ರಿಸ್‌ಮಸ್‌ ಮರ;100-2000 ಗಂಟೆಗಳು;50-200 ಮರದ ಅಲಂಕಾರ ಸೆಟ್;80–350 ನಕ್ಷತ್ರಗಳು;20-500 ಸಾಂತಾ ಕ್ಲಾಸ್‌ ಉಡುಪು;200-1000 ಮಿಂಚು ಹಾರಗಳು;50–200

ಮನ್ನಾರ್ಸ್‌ ಮಾರುಕಟ್ಟೆಯಲ್ಲಿ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವ್ಯಾಪಾರದಲ್ಲಿ ನಿರತರಾಗಿರುವ ಗ್ರಾಹಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.