ADVERTISEMENT

ಮೈಸೂರು | ಹೊಸ ವರ್ಷಾಚರಣೆ ಹಿನ್ನೆಲೆ; ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

ಹೊಸ ವರ್ಷಾಚರಣೆ ಹಿನ್ನೆಲೆ ಹೋಟೆಲ್‌ ರೂಂಗಳು ಬುಕ್ಕಿಂಗ್‌

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 6:02 IST
Last Updated 26 ಡಿಸೆಂಬರ್ 2023, 6:02 IST
<div class="paragraphs"><p>ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಆವರಣದಲ್ಲಿ ಸೋಮವಾರ ಕಂಡುಬಂದ ಪ್ರವಾಸಿಗರು</p></div>

ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಆವರಣದಲ್ಲಿ ಸೋಮವಾರ ಕಂಡುಬಂದ ಪ್ರವಾಸಿಗರು

   

ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.

ಮೈಸೂರು: ಮೈಸೂರು ಭಾಗದ ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ವಾರಾಂತ್ಯ ಜನರ ದಂಡು ಕಂಡುಬರುತ್ತಿದ್ದು, ಪ್ರವಾಸೋದ್ಯಮ ಗರಿಗೆದರಿದೆ.

ADVERTISEMENT

ಹೋಟೆಲ್‌, ಲಾಡ್ಜ್‌ ಹಾಗೂ ರೆಸಾರ್ಟ್‌ಗಳಲ್ಲಿನ ಕೊಠಡಿಗಳು ಬಹುತೇಕ ಭರ್ತಿಯಾಗಿದ್ದವು. ಮುಂಗಡವಾಗಿ ಕಾಯ್ದಿರಿಸದೇ ಬರುವವರು ವಾಸ್ತವ್ಯಕ್ಕೆ ಪರದಾಡುವಂತಾಯಿತು. 

ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ದಸರಾ ವಸ್ತುಪ್ರದರ್ಶನ, ಕಾರಂಜಿ ಕೆರೆಗೆ ಹೆಚ್ಚಿನ ಜನರು ಭೇಟಿ ನೀಡಿದ್ದರು. ಸಂಜೆಯ ವೇಳಾ ವಾಹನದಟ್ಟಣೆ ಕಂಡುಬಂತು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಬಂದಿದ್ದರು. ಕೇರಳ, ತಮಿಳುನಾಡು ಮೊದಲಾದ ರಾಜ್ಯಗಳ ‍ಪ್ರವಾಸಿಗರು ಕೂಡ ಬರುತ್ತಿದ್ದಾರೆ.

ಕೋವಿಡ್ ಭೀತಿಯ ಕರಿನೆರಳು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ‘ನಗರ ಹಾಗೂ ಸುತ್ತಮುತ್ತಲಿನ ಹೋಟೆಲ್‌ಗಳ ಕೊಠಡಿಗಳು ಹೊಸ ವರ್ಷಾಚರಣೆವರೆಗೂ ಭರ್ತಿಯಾಗಿವೆ. ಹೊರ ರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ’ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದರು.

ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದ ಪಾರ್ಕಿಂಗ್‌ ಲಾಟ್‌ನಲ್ಲಿ ಸೋಮವಾರ ಬಹಳಷ್ಟು ವಾಹನಗಳು ಕಂಡುಬಂದವು/ ಪ್ರಜಾವಾಣಿ ಚಿತ್ರ

ದಾಖಲೆ ಆದಾಯ: ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಬೃಂದಾವನ, ರಂಗನತಿಟ್ಟು, ಶ್ರೀರಂಗಪಟ್ಟಣದಲ್ಲಿ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ‌. ರಂಗನತಿಟ್ಟು ಪಕ್ಷಿಧಾಮವನ್ನು ಬೆಳಿಗ್ಗೆ 6ರಿಂದಲೇ ವೀಕ್ಷಣೆಗೆ ಮುಕ್ತವಾಗಿರಿಸಲಾಗಿತ್ತು. ಪಕ್ಷಿಧಾಮಕ್ಕೆ ಭಾನುವಾರ ವಿದೇಶಿ ಪ್ರವಾಸಿಗರು ಸೇರಿ 4,885 ಮಂದಿ ಭೇಟಿ ನೀಡಿದ್ದು, ₹5.99ಲಕ್ಷ ಆದಾಯ ಬಂದಿದೆ. ಇದು ಈವರೆಗಿನ ದಾಖಲೆ ಎಂದು ಅಧಿಕಾರಿಗಳು ತಿಳಿಸಿದರು.

ಒಂದೇ ದಿನ ಲಕ್ಷ  ಮಂದಿ ಭೇಟಿ: ಕೊಡಗು ಜಿಲ್ಲೆಯಲ್ಲಿ ಹೋಂಸ್ಟೇಗಳು, ರೆಸಾರ್ಟ್‌ಗಳು ಹಾಗೂ ಹೋಟೆಲ್‌ಗಳ ಕೊಠಡಿಗಳು ಶನಿವಾರದಿಂದಲೇ ಭರ್ತಿಯಾಗಿದ್ದವು. ನೆರೆಯ ಕೇರಳದಲ್ಲಿ ಕೋವಿಡ್ ಹೆಚ್ಚಿದ್ದರಿಂದ ಕೊನೆ ಕ್ಷಣದಲ್ಲಿ ಅಲ್ಲಿನ ಪ್ರವಾಸ ರದ್ದುಗೊಳಿಸಿದ ಅನೇಕರು ಕೊಡಗಿನತ್ತ ಬಂದರು. 

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾ ಹೋಟೆಲ್‌, ರೆಸಾರ್ಟ್ಸ್‌ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ ಅಧ್ಯಕ್ಷ ನಾಗೇಂದ್ರಪ್ರಸಾದ್, ‘ಜಿಲ್ಲೆಯಲ್ಲಿ ಹೋಟೆಲ್‌, ರೆಸಾರ್ಟ್ ಹಾಗೂ ಹೋಂಸ್ಟೇಗಳಲ್ಲಿ 35ಸಾವಿರಕ್ಕೂ ಅಧಿಕ ರೂಂಗಳಿದ್ದು, ಎಲ್ಲವೂ ಭರ್ತಿಯಾಗಿವೆ. ಜಿಲ್ಲೆಯ ಪ್ರವಾಸೋದ್ಯಮ 5 ವರ್ಷದ ಹಿಂದಿನ ಸ್ಥಿತಿಗೆ ಮರಳಿದೆ ಎನಿಸುತ್ತಿದೆ’ ಎಂದರು.

ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಸೋಮವಾರ ಕಂಡು ಬಂದ ಪ್ರವಾಸಿಗರ ದಂಡು

ಚಾಮರಾಜನಗರ ಜಿಲ್ಲೆಯಲ್ಲೂ ಪ್ರವಾಸಿಗರ ದಂಡು ಕಂಡುಬಂದಿತು. ಬಂಡೀಪುರದಲ್ಲಿ ಸಫಾರಿಗೆ ಬೇಡಿಕೆ ಹೆಚ್ಚಿದೆ. ಹಿಮವದ್ ಗೋಪಾಲ ಸ್ವಾಮಿ ಹಾಗೂ ಮಹದೇಶ್ವರ ಬೆಟ್ಟವೂ ಪ್ರವಾಸಿಗರಿಂದ ತುಂಬಿತ್ತು.

ಯಳಂದೂರು ತಾಲ್ಲೂಕಿನ ಬಿಳಿಬಿರಿರಂಗನಬೆಟ್ಟದಲ್ಲಿನ ಹೋಂಸ್ಟೇಗಳು, ಅತಿಥಿಗೃಹಗಳು, ಕೆ.ಗುಡಿಯ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ ಕೂಡ ಭರ್ತಿಯಾಗಿವೆ. ಜ. 5ರವರೆಗೂ ಪ್ರವಾಸಿಗರು ಕಾಯ್ದಿರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.