ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ: ಮೈಸೂರಿನಲ್ಲಿ ಪರ, ವಿರುದ್ಧ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 8:52 IST
Last Updated 22 ಡಿಸೆಂಬರ್ 2019, 8:52 IST
ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮೈಸೂರಿನ ಮಹಾತ್ಮ ಗಾಂಧಿ ಚೌಕದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು
ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮೈಸೂರಿನ ಮಹಾತ್ಮ ಗಾಂಧಿ ಚೌಕದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು   

ಮೈಸೂರು: ಪೌರತ್ವ ತಿದ್ದುಪಡಿಕಾಯ್ದೆಯ ಪರವಾಗಿ ಮತ್ತು ವಿರುದ್ಧವಾಗಿ ಪ್ರತ್ಯೇಕ ಪ್ರದರ್ಶನಗಳು ನಗರದಲ್ಲಿ ಭಾನುವಾರ ನಡೆದಿವೆ. ಪ್ರಚೋದನಾತ್ಮಕವಾದ ಕರಪತ್ರ ಹಂಚುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ವಿದ್ಯಾರಣ್ಯಾಪುರಂ ಠಾಣೆ ಪೊಲೀಸರು ಎಸ್‌ಯುಸಿಐನ ಇಬ್ಬರು ಮಹಿಳಾ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ (ಗ್ರಾಮಾಂತರ) ಕಾಂಗ್ರೆಸ್ ನೇತೃತ್ವದಲ್ಲಿ ಕಾಯ್ದೆ ವಿರೋಧಿಸಿ ಮಹಾತ್ಮ ಗಾಂಧಿ ಚೌಕದಲ್ಲಿ ಪ್ರತಿಭಟನೆ ಆರಂಭಿಸಿದರು. ಇದಕ್ಕೂ ಮೊದಲುಇಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಹೀಗಾಗಿ, ಕೆಲವೇ ನಿಮಿಷಗಳಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ‘ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಕಿಡಿಕಾರಿದರು.

ADVERTISEMENT

ಇತ್ತ ನಗರದ ಓವಲ್ ಮೈದಾನದಲ್ಲಿ ಕಾಯ್ದೆಯ ಪರವಾಗಿ ಬಿಜೆಪಿ ಹಾಗೂ ಮತ್ತಿತರಸಂಘಟನೆಗಳು ಶಕ್ತಿ ಪ್ರದರ್ಶನ ನಡೆಸಿದವು. ಶಾಸಕ ರಾಮದಾಸ್, ಬಿಜೆಪಿ ಮುಖಂಡ ಬಿ.ಪಿ.ಮಂಜುನಾಥ್ ಸೇರಿದಂತೆ ಹಲವು ಪ್ರಮುಖರು ಇದರಲ್ಲಿ ಭಾಗಿಯಾದರು. ಸುಮಾರು ಒಂದು ಗಂಟೆಗಳ ಕಾಲ ಕೇಂದ್ರ ಸರ್ಕಾರ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಘೋಷಣೆಗಳನ್ನು ಕಾರ್ಯಕರ್ತರು ಕೂಗಿದರು. ನಂತರ, ಸ್ಥಳಕ್ಕೆ ಬಂದ ಪೊಲೀಸರು ಇವರನ್ನು ತೆರವುಗೊಳಿಸಿದರು.

ಕಾರ್ಯಕರ್ತರು ವಶಕ್ಕೆ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಇಲ್ಲಿನ ನಾಚನಹಳ್ಳಿ ಪಾಳ್ಯದಲ್ಲಿ ಕರಪತ್ರಗಳನ್ನು ಹಂಚುತ್ತಿದ್ದ ಎಸ್‌ಯುಸಿಐ ಪಕ್ಷದ ಇಬ್ಬರು ಮಹಿಳಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಧ್ಯಾ ಮತ್ತು ಕಲಾವತಿ ಅವರು ಯಾವುದೇ ಪೂರ್ವಾನುಮತಿ ಇಲ್ಲದೇ ಕರಪತ್ರಗಳನ್ನು ಹಂಚುತ್ತಿದ್ದರು. ಇದೊಂದು ಪ್ರಚೋದನಾತ್ಮಕ ವಿಷಯ. ಹಾಗಾಗಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.