ADVERTISEMENT

ನಗರದ ‘ಬೆಸ್ಟ್‌ ಪಾರ್ಕ್‌’ ಕಳೆಗುಂದದಿರಲಿ..

ಎಚ್‌.ಎಸ್.ಪವನ
Published 11 ಮಾರ್ಚ್ 2019, 19:47 IST
Last Updated 11 ಮಾರ್ಚ್ 2019, 19:47 IST
ನಿವೇದಿತಾನಗರದ ಸುಬ್ಬರಾವ್‌ ಉದ್ಯಾನದಲ್ಲಿ ಆಟಿಕೆ, ಹಾಗು ಕಲ್ಲುಬೆಂಚು ಮುರಿದಿವೆ
ನಿವೇದಿತಾನಗರದ ಸುಬ್ಬರಾವ್‌ ಉದ್ಯಾನದಲ್ಲಿ ಆಟಿಕೆ, ಹಾಗು ಕಲ್ಲುಬೆಂಚು ಮುರಿದಿವೆ   

ಮೈಸೂರು ಉದ್ಯಾನಗಳ ನಗರಿ. ಇಲ್ಲಿ ಗಲ್ಲಿ ಗಲ್ಲಿಗೂ ಉದ್ಯಾನಗಳು ಎಡತಾಕುತ್ತವೆ. ಅದರೆ ಅವುಗಳಲ್ಲಿ ಉತ್ತಮವಾಗಿ ನಿರ್ವಹಣೆಯಾಗುತ್ತಿರುವ ಪಾರ್ಕ್‌ಗಳು ಕೆಲವಷ್ಟೆ. ಅದರಲ್ಲಿ ನಿವೇದಿತಾ ನಗರದಲ್ಲಿರುವ ಎಸ್‌.ಆರ್‌.ಸುಬ್ಬರಾವ್‌ ಉದ್ಯಾನವೂ ಒಂದು.

ಸ್ವಚ್ಛತೆ ಹಾಗೂ ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿರುವ ಈ ಉದ್ಯಾನ 2017ರಲ್ಲಿ ದಸರಾ ಸಂದರ್ಭದಲ್ಲಿ ಪಾಲಿಕೆ ನಡೆಸಿದ ಉದ್ಯಾನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದುಕೊಂಡಿದೆ. ಅಲ್ಲದೆ, 2016ರಲ್ಲಿ ರೆಡ್‌ ಎಫ್‌.ಎಂ 93.5 ನಡೆಸಿದ ಸ್ಪರ್ಧೆಯಲ್ಲಿ ನಗರದ ‘ಬೆಸ್ಟ್‌ ಪಾರ್ಕ್‌’ ಪ್ರಶಸ್ತಿ ಪಡೆದುಕೊಂಡಿರುವ ಹೆಗ್ಗಳಿಕೆ ಇದಾಗಿದೆ.

ಆದರೆ, ಈ ಉದ್ಯಾನ ಇತ್ತೀಚಿನ ದಿನಗಳಲ್ಲಿ ಸೂಕ್ತ ನಿರ್ವಹಣೆಯಿಲ್ಲದೇ ಸೊರಗುತ್ತಿದೆ. ಇಲ್ಲಿ ಮಕ್ಕಳನ್ನು ಆಕರ್ಷಿಸುತ್ತಿದ್ದ ಆಟಿಕೆಗಳಲ್ಲಿ ಕೆಲವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಬೆಂಚುಗಳು ಕೆಲವು ಮುರಿದು ಬಿದ್ದಿವೆ. ಕೆಲವೆಡೆ ಅಲಂಕಾರಿಕ ಗಿಡಗಳನ್ನು ಸರಿಯಾಗಿ ಕತ್ತರಿಸದೇ ಇರುವುದರಿಂದ ತನ್ನ ಚೆಲುವನ್ನು ಕಳೆದುಕೊಂಡಿವೆ.

ADVERTISEMENT

ಕಾಂತರಾಜ ಅರಸು ರಸ್ತೆಯ ಬದಿಯಲ್ಲಿ ಏಳೂವರೆ ಎಕರೆ ವಿಸ್ತೀರ್ಣದಲ್ಲಿ ಮೈಚಾಚಿಕೊಂಡಿರುವ ಸುಬ್ಬರಾವ್‌ ಉದ್ಯಾನ ನಾಲ್ಕು ವರ್ಷಗಳಿಂದೀಚೆಗೆ ರೂಪುಗೊಂಡಿದೆ. ನಿವೇದಿತಾ ನಗರದ ದೊಡ್ಡ ಉದ್ಯಾನ ಎಂತಲೇ ಹೆಸರುವಾಸಿಯಾಗಿರುವ ಇಲ್ಲಿ ವಾಯುವಿಹಾರಿಗಳಿಗಾಗಿ ‘ಮಡ್‌ಪಾತ್‌’ ಹಾಗೂ ಅದರ ಪಕ್ಕದಲ್ಲೇ ‘ಸಿಮೆಂಟ್‌ ಪಾತ್‌’ ಅನ್ನು ನಿರ್ಮಿಸಲಾಗಿದೆ.

ವಾಕಿಂಗ್‌ ಮಾಡುವಾಗ ಜತೆಯಲ್ಲಿ ಸಂಗೀತ ಇದ್ದರೆ ಹೇಗೆ. ಅದಕ್ಕಾಗಿಯೇ ಇಲ್ಲಿ ಎಫ್‌.ಎಂ ಕೂಡ ಅಳವಡಿಸಲಾಗಿದೆ. ಅನತಿ ದೂರಕ್ಕೊಂದು ಸೌಂಡ್‌ ಬಾಕ್ಸ್‌ ಫಿಕ್ಸ್‌ ಮಾಡಿ ಸಂಗೀತ ಹೊರಹೊಮ್ಮುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಕಳೆದ ಎರಡು ತಿಂಗಳಿನಿಂದ ಇಲ್ಲಿ ಎಫ್‌.ಎಂ ಹಾಡುಗಳು ಕೇಳುತ್ತಿಲ್ಲ.

‘ಪಾರ್ಕ್‌ನ ಮುಂಭಾಗ ವಾಹನಗಳನ್ನು ನಿಲ್ಲಿಸಲು ಸುಸಜ್ಜಿತ ಸ್ಥಳವನ್ನು ಮೀಸಲಿಡಲಾಗಿದೆ. ಪಾರ್ಕ್‌ ಮುಂಭಾಗವೇ ಕಾರು ಹಾಗೂ ಬೈಕ್‌ಗಳನ್ನು ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಆದರೆ, ಇತ್ತೀಚೆಗೆ ಬೆಳಿಗ್ಗೆ 10–11 ಗಂಟೆ ಬಳಿಕ ಬರುವ ಕೆಲವರು ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿಕೊಂಡು ನಿಂತಿರುತ್ತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಶಾರದಾದೇವಿ ನಗರದ ರಮೇಶ್‌ಗೌಡ.

‘ಉದ್ಯಾನ ಇತ್ತೀಚೆಗೆ ಸೂಕ್ತವಾಗಿ ನಿರ್ವಹಣೆ ಆಗದಿರುವುದು ಗಮನಕ್ಕೆ ಬಂದಿದೆ. ನಿರ್ವಹಣೆಯ ಗುತ್ತಿಗೆಯನ್ನು ಹೊಸಬರು ಪಡೆದಿರುವುದರಿಂದ, ಇತ್ತೀಚೆಗೆ ಕಾರ್ಮಿಕರ ಸಮಸ್ಯೆ ಸಹ ಹೆಚ್ಚಿರುವುದರಿಂದ ಕೆಲವು ಸಮಸ್ಯೆಗಳಾಗಿವೆ. ಎಫ್‌.ಎಂಗೆ ಅಳವಡಿಸಿದ್ದ ವೈರ್‌ಗಳು ಶಾರ್ಟ್‌ಸರ್ಕಿಟ್‌ ಆಗಿ ಸುಟ್ಟುಹೋಗಿವೆ. ಪಾಲಿಕೆಯಿಂದ ಅನುದಾನ ಮಂಜೂರಾಗುವುದು ತಡವಾಗುವುದರಿಂದ ನಮ್ಮ ಹಣದಲ್ಲೇ ಸಂಪೂರ್ಣವಾಗಿ ವೈರ್‌ಗಳನ್ನು ಬದಲಾಯಿಸಲು ಮುಂದಾಗಿದ್ದೇವೆ’ ಎನ್ನುತಾರೆ ಪಾಲಿಕೆ ಸದಸ್ಯೆ ನಿರ್ಮಲಾ.

‘ಕೆಲವರ ಸಲಹೆಯಂತೆ ಉದ್ಯಾನದಲ್ಲಿ ಪರಿಸರ ಕುರಿತು ಜಾಗೃತಿ ಫಲಕಗಳನ್ನು ಹಾಕಲಾಗಿದೆ. ಇಲ್ಲಿಗೆ ಹೆಚ್ಚಾಗಿ ಹೊರಗಿನವರು ಬರುವುದರಿಂದ ಇಂಗ್ಲಿಷ್‌ನಲ್ಲಿ ಅವುಗಳನ್ನು ಹಾಕಲಾಗಿದೆ. ಮುಂದೆ ಕನ್ನಡದಲ್ಲಿ ಫಲಕಗಳನ್ನು ಹಾಕಲಾಗುವುದು. ಪಕ್ಷಿಗಳಿಗೆ ಅನುಕೂಲವಾಗುವಂತೆ ಹಣ್ಣಿನ ಗಿಡಗಳನ್ನು ಬೆಳೆಸಲು ಚಿಂತಿಸಲಾಗಿದೆ. ಉದ್ಯಾನ ಹಿಂದಿಗಿಂತಲೂ ಹೆಚ್ಚು ಸುಂದರವಾಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.