ಮೈಸೂರು: ಮೈಸೂರು ದಸರಾ ಜಂಬೂಸವಾರಿಗೂ ಮುನ್ನ ಅರಮನೆ ಆವರಣದಲ್ಲಿ ಪೊಲೀಸರು ಹಾಗೂ ಮಾವುತರ ನಡುವೆ ಮಾತಿನ ಚಕಮಕಿ ನಡೆಯಿತು. ಇದು, ಆನೆಗಳನ್ನು ಮೆರವಣಿಗೆಗೆ ಸಿದ್ಧಪಡಿಸುವಲ್ಲಿ ವಿಳಂಬಕ್ಕೆ ಕಾರಣವಾಯಿತು.
ಬೆಳಿಗ್ಗೆ ಆನೆಗಳಿಗೆ ಪೂಜೆ ಸಲ್ಲಿಸುವಾಗ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪೊಲೀಸರು ಎಳೆದಾಡಿದ್ದರು. ಆಗ ಪೊಲೀಸರೊಂದಿಗೆ ಇಲಾಖೆ ಅಧಿಕಾರಿಗಳು ಮಾತಿನ ಚಕಮಕಿ ನಡೆಸಿದ್ದರು. ಮಧ್ಯಾಹ್ನ ಅರಣ್ಯ ಇಲಾಖೆಯ ಜೀಪ್‌ಗಳನ್ನು ಪೊಲೀಸರು ತಡೆದಿದ್ದರು. ಅಲ್ಲದೇ, ಮಾವುತರನ್ನು ಬಿಡುವುದಕ್ಕೂ ತೊಂದರೆ ನೀಡಿದ್ದರು. ಇದರಿಂದಲೂ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಮಾವುತರು, ‘ನಾವು ಹೋಗುತ್ತೇವೆ ನೀವೇ ದಸರಾ ಮಾಡಿಕೊಳ್ಳಿ’ ಎಂದು ಪೊಲೀಸರಿಗೆ ಬಿಸಿ ಮುಟ್ಟಿಸಿದರು.
‘ಪ್ರತಿ ದಸರಾದಲ್ಲೂ ಹೀಗೆಯೇ ಮಾಡುತ್ತೀರಿ. ನೀವು ಎಷ್ಟು ಮಂದಿ ಬೇಕಾದರೂ ಬರಬಹುದು. ಆದರೆ, ನಮ್ಮನ್ನು ತಡೆಯುತ್ತೀರಿ. ಇಲಾಖೆಯ ಸಿಬ್ಬಂದಿಯ ಜೀಪ್ ಬರುವುದಕ್ಕೂ ಅಡ್ಡಿಪಡಿಸುತ್ತೀರಿ. ಪಾಸ್ ಇದ್ದರೂ ಬಿಡುವುದಿಲ್ಲ ಎಂದರೆ ಹೇಗೆ? ನೀವೇ ಅಂಬಾರಿ ಕಟ್ಟಿಕೊಳ್ಳಿ, ನಾವು ಹೋಗುತ್ತೇವೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಆನೆಯಿಂದಲೇ ಹೊಡೆಸುತ್ತೀವಿ ನಿಮಗೆ’ ಎಂದು ಎಚ್ಚರಿಕೆ ನೀಡಿದ್ದಾರೆ. ನಂತರ, ಅಧಿಕಾರಿಗಳು ಮಧ್ಯಪ್ರವೇಶಿಸಿ ಮಾವುತರನ್ನು ಸಮಾಧಾನಪಡಿಸಿದರು.
ಈ ಘಟನೆಯಿಂದಾಗಿ ನಿಶಾನೆ ಆನೆ ‘ಅರ್ಜುನ’ನನ್ನು ಸಿದ್ಧಪಡಿಸಿ ಕರೆತರುವುದು ತಡವಾಯಿತು. ಮೆರವಣಿಗೆಗೆ ದಿಕ್ಕು ತೋರುವುದಕ್ಕೆ ನಿಶಾನೆ ಆನೆ ಬಳಸಲಾಗುತ್ತದೆ. ಆದರೆ, ಕೊಂಬು ಕಳಹೆ, ಬಾಗಲಕೋಟೆ ಜಿಲ್ಲೆಯ ಸ್ತಬ್ಧಚಿತ್ರ ಹಾಗೂ ಕೆಲವು ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದ ನಂತರ ನಿಶಾನೆ ಆನೆಯನ್ನು ಕರೆತರಲಾಯಿತು. ಆ ಆನೆಯಿಂದ ಮುಖ್ಯ ಅತಿಥಿಗಳಿಗೆ ಸೊಂಡಿಲೆತ್ತಿಸಿ ಸಲಾಂ ಮಾಡಿ ನಂತರ ಮೆರವಣಿಗೆಲ್ಲಿ ಸಾಗುವುದು ಸಂಪ್ರದಾಯ. ಆದರೆ, ಈ ಬಾರಿ ಅದನ್ನು ಮುಖ್ಯ ಅತಿಥಿಗಳ ಎದುರಿಗೆ ಕರೆತರಲೇ ಇಲ್ಲ! ನಡುವೆಯೇ ಮೆರವಣಿಗೆಗೆ ಸೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.