ADVERTISEMENT

ರಸ್ತೆಗೆ ಅಂಬೇಡ್ಕರ್‌ ಹೆಸರಿಡಲು ವಿರೋಧ: ಪರಸ್ಪರ ಕಲ್ಲು ತೂರಾಟ, ಪೊಲೀಸರಿಗೂ ಗಾಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 18:14 IST
Last Updated 29 ಜನವರಿ 2024, 18:14 IST
<div class="paragraphs"><p>ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.</p></div>

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.

   

ನಂಜನಗೂಡು (ಮೈಸೂರು ಜಿಲ್ಲೆ): ತಾಲ್ಲೂಕಿನ ಹಲ್ಲರೆ ಗ್ರಾಮದ ರಸ್ತೆಯೊಂದಕ್ಕೆ ಅಂಬೇಡ್ಕರ್‌ ಹೆಸರಿನ ನಾಮಫಲಕ ಅಳವಡಿಸುವ ವಿಚಾರವಾಗಿ ಸೋಮವಾರ ರಾತ್ರಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಾಯಕ ಸಮುದಾಯದವರ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಪೊಲೀಸರೂ ಸೇರಿದಂತೆ 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಹಲ್ಲರೆ ಗ್ರಾಮದಿಂದ ಹುರ ಗ್ರಾಮದ ಕಡೆಗೆ ತೆರಳುವ ರಸ್ತೆಗೆ ಡಾ. ಬಿ.ಆರ್. ಅಂಬೇಡ್ಕರ್ ಹೆಸರಿಡಲು ಪರಿಶಿಷ್ಟ ಸಮುದಾಯದ ಯುವಕರು ಸ್ಥಳೀಯ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಪಿಡಿಒ ಅವರಿಂದ ಅನುಮತಿ ಪಡೆದಿದ್ದರು. ಆದರೆ ‘ಬೀದಿಯ ಕೊನೆಯಲ್ಲಿ ನಮ್ಮ ಮನೆಗಳಿದ್ದು, ಇಲ್ಲಿ ಫಲಕ ಅಳವಡಿಸಬೇಡಿ’ ಎಂದು ನಾಯಕ ಸಮುದಾಯದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಐದು ದಿನಗಳ ಹಿಂದೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ಮುಂದೂಡಲಾಗಿತ್ತು.

ADVERTISEMENT

ಸೋಮವಾರ ಸಂಜೆ ಪರಿಶಿಷ್ಟ ಜಾತಿಯ ಯುವಕರು ರಸ್ತೆಯಲ್ಲಿ ನಾಮಫಲಕ ಅಳವಡಿಸಲು ಮುಂದಾದಾಗ ಆರಂಭಗೊಂಡ ಜಗಳವು ಹೊಡೆದಾಟಕ್ಕೆ ತಿರುಗಿದ್ದು, ಪರಸ್ಪರ ಕಲ್ಲು ಹಾಗೂ ಒನಕೆಯಿಂದ ಹಲ್ಲೆ ನಡೆಸಿದರು. ಮಹಿಳೆಯರು, ಮಕ್ಕಳು ಸಹ ಘಟನೆಯಲ್ಲಿ ಗಾಯಗೊಂಡರು.

ಕೆಲವರು ಮನೆಗಳಿಗೂ ಕಲ್ಲು ತೂರಿದ್ದು, ಹೆಂಚುಗಳು ಪುಡಿಪುಡಿಯಾಗಿವೆ. 30ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿದ್ದು, ಶಾಲಾ ಬಸ್‌ ಸೇರಿದಂತೆ ಸ್ಥಳದಲ್ಲಿದ್ದ ಇತರ ವಾಹನಗಳಿಗೂ ಹಾನಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತೆರಳಿದ್ದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು, ಸಬ್‌ ಇನ್‌ಸ್ಪೆಕ್ಟರ್ ಸೇರಿದಂತೆ ಮೂವರು ಸಿಬ್ಬಂದಿಗೆ ಗಾಯಗಳಾಗಿವೆ.

ಆಸ್ಪತ್ರೆಗೆ ದಾಖಲು: ಗಲಾಟೆಯಲ್ಲಿ ಪರಿಶಿಷ್ಟ ಜಾತಿಯ 25 ಜನರು ಹಾಗೂ ನಾಯಕ ಸಮುದಾಯದ ಹಲವು ಮಂದಿಗೆ ಗಾಯಗಳಾಗಿದ್ದು, ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮೈಸೂರಿನ ಕೆ.ಆರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೀಮಾ ಲಾಟ್ಕರ್, ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಗೋವಿಂದರಾಜು ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್ ಸುನಿಲ್‌ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ಇದ್ದು, ಪೊಲೀಸ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಗ್ರಾಮಕ್ಕೆ ತೆರಳಿದ್ದು, ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದ್ದಾರೆ. ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದೇವೆ.
-ಸೀಮಾ ಲಾಟ್ಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.