ಮೈಸೂರು: ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತ ಬಳಿಕ ಸ್ಥಾಪಿಸಲಾಗಿರುವ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ವನ್ನು ‘ಬಲ’ಪಡಿಸುವ ಕಾರ್ಯ ಈವರೆಗೂ ನಡೆದಿಲ್ಲ. ಕೇಂದ್ರ ಸ್ವಾಯತ್ತವೂ ಆಗದೆ, ಸ್ವಂತ ‘ನೆಲೆ’ಯೂ ಇಲ್ಲದೆ, ಇಲ್ಲಿನ ಮಾನಸಗಂಗೋತ್ರಿಯ ಎನ್‌ಸಿಎಚ್‌ಎಸ್ (ನ್ಯಾಷನಲ್ ಸೆಂಟರ್ ಫಾರ್ ಹಿಸ್ಟರಿ ಆಫ್ ಸೈನ್ಸ್) ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
‘ಹಲವು ಹೋರಾಟಗಳಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದ್ದರೂ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಕೇಂದ್ರ ಸರ್ಕಾರದ ತಾರತಮ್ಯ ಧೋರಣೆಯಿಂದ ಕೇಂದ್ರವು ಅನಾಥವಾಗಿಯೇ ಇರುವಂತಾಗಿದೆ’ ಎಂಬ ಅಸಮಾಧಾನ ಕನ್ನಡಪ್ರೇಮಿಗಳಲ್ಲಿ ನಿರಂತರವಾಗಿದೆ.
ಅಲೆದಾಟ ತಪ್ಪಿಲ್ಲ:
2008ರಲ್ಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಘೋಷಣೆಯಾದರೂ, 7 ವರ್ಷದ ಬಳಿಕ, ಕೇಂದ್ರವು ಮೈಸೂರಿನಲ್ಲಿ 2015ರಲ್ಲಿ ಕಾರ್ಯಾರಂಭ ಮಾಡಿತು. ಮೊದಲಿಗೆ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್), ಬಳಿಕ ಸರಸ್ವತಿಪುರಂನ ಅಗ್ನಿಶಾಮಕ ದಳದ ಎದುರಿನ ಕ್ವಾರ್ಟಸ್‌ನಲ್ಲಿ ಜಾಗ ನೀಡಲಾಗಿತ್ತು.
ಐದು ಯೋಜನಾ ನಿರ್ದೇಶಕರನ್ನು ಕಂಡಿರುವ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲವೆಂಬ ಕಾರಣಕ್ಕೆ ಕೇಂದ್ರ ಸರ್ಕಾರದ ಅನುದಾನ ದೊರೆಯುತ್ತಿಲ್ಲ ಎನ್ನಲಾಗಿದೆ. ‘ಇತರ ಭಾಷೆಗಳ ವಿಷಯದಲ್ಲಿ ಆಗಿರುವಷ್ಟು ಅಭಿವೃದ್ಧಿ ಆಗಿಲ್ಲ’ ಎಂಬ ಬೇಸರವೂ ಕನ್ನಡಪರ ಹೋರಾಟಗಾರರಲ್ಲಿದೆ.
‘ಭಾಷೆಯ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಪಡೆಯಲು, ಅಲೆದಾಟ ತಪ್ಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕು’ ಎಂಬುದು ಅವರ ಒತ್ತಾಯ.
‘ಕೇಂದ್ರವು ಬೆಕ್ಕಿನ ಸಂಸಾರದಂತೆ ಅತಂತ್ರವಾಗಿದೆ. ಸ್ವಂತ ಜಾಗ ದೊರೆಯದಿರುವುದೇ ಈ ಪರಿಸ್ಥಿತಿಗೆ ಕಾರಣ. ಜಾಗ ತೋರಿಸಿದ ಕಡೆಗೆಲ್ಲಾ ಹೋಗುತ್ತಿದ್ದೇವೆ. ಈಗ, ಮೈಸೂರು ವಿವಿಯ ತಾತ್ಕಾಲಿಕ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಎಂಒಯು ಆಗಿಲ್ಲ:
‘ಪ್ರೊ.ಜಿ.ಹೇಮಂತ್‌ಕುಮಾರ್ ಅವರು ಮೈಸೂರು ವಿವಿ ಕುಲಪತಿಯಾಗಿದ್ದಾಗ, ಮಾನಸಗಂಗೋತ್ರಿಯಲ್ಲೇ 4.12 ಎಕರೆ ಜಾಗ ಪಡೆಯುವ ಪ್ರಕ್ರಿಯೆ ನಡೆದಿತ್ತು. ಸಿಐಐಎಲ್ ಹಾಗೂ ವಿಶ್ವವಿದ್ಯಾಲಯದ ಜೊತೆ ಒಪ್ಪಂದವಾಗಲಿಲ್ಲ. ಜಯಲಕ್ಷ್ಮಿವಿಲಾಸ ಅರಮನೆಯಲ್ಲಿ ಜಾಗ ಕೊಡುವುದಾಗಿ ಹೇಳಿದ್ದರೂ ದುರಸ್ತಿ ನಡೆಯುತ್ತಿದುದರಿಂದ ದೊರೆಯಲಿಲ್ಲ. ಜಾಗದ ಸಂಬಂಧ ಸಿಂಡಿಕೇಟ್ ಸಭೆಯಲ್ಲೂ ಅನುಮೋದನೆ ದೊರೆತಿದ್ದು, ಪ್ರಕ್ರಿಯೆಗೆ ಜೀವ ತುಂಬಲು ಪ್ರಯತ್ನಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ಕೇಂದ್ರಕ್ಕೆ ಪ್ರತಿ ವರ್ಷ ದೊರಕುವ ₹ 2 ಕೋಟಿ ಅನುದಾನದಲ್ಲಿ ಸಂಶೋಧನೆ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. 8 ಕೃತಿಗಳನ್ನು ಪ್ರಕಟಿಸಲಾಗಿದೆ. ನವೆಂಬರ್‌ನಲ್ಲಿ ಒಟ್ಟು 21 ಕೃತಿಗಳನ್ನು ಬಿಡುಗಡೆ ಮಾಡಲಾಗುವುದು (7 ಪ್ರಚಾರೋಪನ್ಯಾಸ ಮಾಲೆ, ಪಂಪನ ಕುರಿತು ಪ್ರೊ.ಕೇಶವಶರ್ಮ ಅವರ ಕೃತಿ, ಹಾಗೂ ಕೇಂದ್ರದ 12 ಸಂಶೋಧಕರ ಕೃತಿಗಳು). ನ.11ರಿಂದ 52 ವಾರಗಳವರೆಗೆ ಶಾಸ್ತ್ರೀಯ ಕನ್ನಡದ ವಿವಿಧ ಆಯಾಮಗಳ ಬಗ್ಗೆ ವೆಬಿನಾರ್ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ಪ್ರೌಢಶಾಲೆಯವರಿಗೆ ‘ಶಾಸ್ತ್ರೀಯ ಪಠ್ಯಗಳ ಓದು ಮತ್ತು ಅರ್ಥೈಸುವಿಕೆ’ ಕಾರ್ಯಕ್ರಮವನ್ನು ಡಿಸೆಂಬರ್‌ನಲ್ಲಿ ಧರ್ಮಸ್ಥಳ, ಜನವರಿಯಲ್ಲಿ ರಾಯಚೂರು, ನಂತರ ಬೆಳಗಾವಿಯಲ್ಲಿ ನಡೆಸಲಾಗುವುದು. ಕೇಂದ್ರದಲ್ಲಿ ಸಂಶೋಧಕರೊಂದಿಗೆ ಇಬ್ಬರು ಕ್ಲರ್ಕ್‌ಗಳು ಹಾಗೂ ನಾಲ್ವರು ಸಹಾಯಕ ಸಿಬ್ಬಂದಿ ಇದ್ದಾರೆ’ ಎಂದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಈ ಮೂಲಕ ಭಾಷೆಯ ಬೆಳವಣಿಗೆಯಾಗಬೇಕುಪ್ರಧಾನ ಗುರುದತ್ತ ಸಾಹಿತಿ ಮೈಸೂರು
ಶಾಸ್ತ್ರೀಯ ಭಾಷೆ ವಿಷಯದಲ್ಲಿ ತಮಿಳುನಾಡಿನಲ್ಲಿ ಉತ್ತಮ ಕೆಲಸವಾಗಿದೆ. ಅಲ್ಲಿನ ಸರ್ಕಾರ ಒಳ್ಳೆಯ ಕಟ್ಟಡ ನಿರ್ಮಿಸಿದೆ. ನಮ್ಮಲ್ಲೂ ಕ್ರಮಕ್ಕೆ ಕೇಂದ್ರ ರಾಜ್ಯ ಸರ್ಕಾರಗಳು ಮುಂದಾಗಬೇಕುಸ.ರ. ಸುದರ್ಶನ ಪ್ರಧಾನ ಕಾರ್ಯದರ್ಶಿ ಕನ್ನಡ ಕ್ರಿಯಾ ಸಮಿತಿ ಮೈಸೂರು
ನಿವೇಶನ ನಿಗದಿಯಾದರೆ ಸ್ವಂತ ಕಟ್ಟಡವನ್ನು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರವು ₹ 50 ಕೋಟಿವರೆಗೆ ಅನುದಾನ ನೀಡುತ್ತದೆಪ್ರೊ.ನೀಲಗಿರಿ ಎಂ.ತಳವಾರ ಯೋಜನಾ ನಿರ್ದೇಶಕ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.