ಮೈಸೂರು: ವಿವಿಧ ಸಂಘ ಸಂಸ್ಥೆಗಳು ಬುಧವಾರ ಆಯೋಜಿಸಿದ್ದ ‘ಕುಕ್ಕರಹಳ್ಳಿ ಕೆರೆ ಸ್ವಚ್ಛತಾ ಅಭಿಯಾನ’ದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿದರು. ಸಾರ್ವಜನಿಕರ ಜೊತೆ ಸೇರಿ ಕೆರೆ ಸುತ್ತಲೂ ಬಿದ್ದಿದ್ದ ಪ್ಲಾಸ್ಟಿಕ್ ಚೀಲ, ಬಾಟಲಿ ಸಂಗ್ರಹಿಸಿದರು.
ರೈಲ್ವೆ ಗೇಟ್ ಬಳಿಯ ದ್ವಾರದಿಂದ ಆರಂಭಿಸಿ ಕೆರೆಯ ಸುತ್ತ ತಿರುಗಾಡಿ ಕಸ, ಕಡ್ಡಿ ಸಂಗ್ರಹಿಸಿದರು. ವಾಯುವಿಹಾರಕ್ಕಾಗಿ ಬಂದಿದ್ದವರೂ ಸಂಸದರ ಕಾರ್ಯಕ್ಕೆ ಕೈ ಜೋಡಿಸಿದರು. ಕೆರೆಯ ಬದಿಯಲ್ಲಿರುವ ಕಸದ ಬುಟ್ಟಿ ತುಂಬಿ ಕಸ ಹೊರಗೆ ಚೆಲ್ಲುತ್ತಿರುವುದು ಗಮನಿಸಿದರು ಹಾಗೂ ಅಭಿವೃದ್ಧಿ ಯೋಜನೆ ಬಗ್ಗೆ ಮಾಹಿತಿ ಪಡೆದರು.
ಮಾಧ್ಯಮದೊಂದಿಗೆ ಮಾತನಾಡಿ, ‘ಸಮಾಜ ಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಕುಕ್ಕರಹಳ್ಳಿ ಸ್ವಚ್ಛತೆ ಕಾರ್ಯ ಮಾಡಿದ್ದೇವೆ. ನಗರದ ಕೆರೆ, ಸ್ಮಾರಕ, ಪ್ರಸಿದ್ಧ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಗುರಿ ಹೊಂದಿದ್ದು, ಪ್ರತೀ ವಾರ ಅಥವಾ ನಾನು ಮೈಸೂರಿನಲ್ಲಿ ಲಭ್ಯ ಇರುವ ದಿನಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಿದ್ದೇನೆ. ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಬರಲು ಬೇಕಾದ ಕಾರ್ಯಗಳಿಗೆ ಆದ್ಯತೆ ನೀಡುತ್ತೇವೆ’ ಎಂದರು.
ಸರ್ಕಾರಿ ಕಚೇರಿ ಆರಂಭವಾಗದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಸರ್ಕಾರಿ ಕಚೇರಿಯು ಕೆಲವೇ ದಿನಗಳಲ್ಲಿ ಆರಂಭವಾಗುತ್ತದೆ. ಅದುವರೆಗೂ ಕುವೆಂಪುನಗರದಲ್ಲಿರುವ ಕಚೇರಿಯಲ್ಲಿ ಲಭ್ಯವಿರುತ್ತೇನೆ. ಯಾವ ಸಾರ್ವಜನಿಕರಿಗೆ ತೊಂದರೆಯಾಗಿದೆ’ ಎಂದು ಮರುಪ್ರಶ್ನಿಸಿದ ಅವರು, ‘ನಮ್ಮ ಕಚೇರಿಗೆ ಸಾರ್ವಜನಿಕರು ಬರುತ್ತಿದ್ದಾರೆ. 150ಕ್ಕಿಂತ ಹೆಚ್ಚಿನ ಮನವಿ ಸಲ್ಲಿಕೆಯಾಗಿದೆ. ತಿಂಗಳಾಂತ್ಯದಲ್ಲಿ ಸರ್ಕಾರಿ ಕಚೇರಿ ತೆರೆಯುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.