ADVERTISEMENT

ಸಿಎಂ ಭರವಸೆ; ಪ್ರತಿಭಟನೆ ವಾಪಸ್, 10ರಿಂದಲೇ ನಡೆಯಲಿದೆ ಸ್ವಚ್ಛತಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 15:27 IST
Last Updated 9 ಅಕ್ಟೋಬರ್ 2018, 15:27 IST

ಮೈಸೂರು: ನಗರದಲ್ಲಿ ಕಳೆದ 7 ದಿನಗಳಿಂದ ನಡೆಯುತ್ತಿದ್ದ ಪೌರಕಾರ್ಮಿಕರ ಮುಷ್ಕರಕ್ಕೆ ದಸರಾ ಉದ್ಘಾಟನೆಯ ಮುನ್ನಾದಿನವಾದ ಮಂಗಳವಾರ ತೆರೆ ಬಿದ್ದಿತು. ಬುಧವಾರದಿಂದಲೇ ಎಲ್ಲ ಪೌರ ಕಾರ್ಮಿಕರೂ ಕೆಲಸಕ್ಕೆ ಹಾಜರಾಗಲಿದ್ದಾರೆ.

ರಾಜ್ಯ ಪೌರಕಾರ್ಮಿಕರ ಮಹಾಸಂಘದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿ ನಡೆಸಿದ ಮಾತುಕತೆ ಯಶಸ್ವಿಯಾಯಿತು. ಕೇವಲ 700 ಮಂದಿ ಗುತ್ತಿಗೆ ನೌಕರರನ್ನು ಮಾತ್ರ ಕಾಯಂಗೊಳಿಸುವುದು ಹಿಂದಿನ ಸಂಪುಟ ಸಭೆಯ ತೀರ್ಮಾನವಾಗಿತ್ತು. ಈಗ ಒಳಚರಂಡಿ ಸೇರಿದಂತೆ ಇತರೆ ಕಾರ್ಮಿಕರನ್ನೂ ಈ ಪಟ್ಟಿಗೆ ಸೇರಿಸಲಾಗುವುದು. ಮುಂದಿನ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಇವರ ಭರವಸೆಗೆ ಓಗೊಟ್ಟ ನಾರಾಯಣ ಮುಷ್ಕರ ವಾಪಸ್ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದರು.

ADVERTISEMENT

ಈ ಕುರಿತು ‘ಪ‍್ರಜಾವಾಣಿ’ ಜತೆ ಮಾತನಾಡಿದ ನಾರಾಯಣ, ‘ಸ್ವತಃ ಮುಖ್ಯಮಂತ್ರಿಗಳೆ ಭರವಸೆ ನೀಡಿದ್ದಾರೆ. ಇವರ ಮಾತನ್ನು ನಂಬಿ ಹಾಗೂ ದಸರೆ ಇರುವಾಗ ಪ್ರವಾಸಿಗರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನವಾಗಿ, ಜಾರಿಗೆ ಬಾರದಿದ್ದರೆ ಮತ್ತೆ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.