ADVERTISEMENT

ಈ ವರ್ಷವೇ ಕಬಿನಿ ಡ್ಯಾಂ ಉದ್ಯಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 11:12 IST
Last Updated 20 ಜುಲೈ 2022, 11:12 IST
ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಎಸ್‌.ಟಿ. ಸೋಮಶೇಖರ್‌ ಬುಧವಾರ ಬಾಗಿನ ಅರ್ಪಿಸಿದರು
ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಎಸ್‌.ಟಿ. ಸೋಮಶೇಖರ್‌ ಬುಧವಾರ ಬಾಗಿನ ಅರ್ಪಿಸಿದರು   

ಮೈಸೂರು: ‘ಕಬಿನಿ ಜಲಾಶಯದ ಉದ್ಯಾನ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಈ ವರ್ಷವೇ ಆರಂಭಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಕಪಿಲ ನದಿಗೆ ನಿರ್ಮಿಸಿರುವ ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ, ಬುಧವಾರ ಬಾಗಿನ ಅರ್ಪಿಸಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಉದ್ಯಾನವನ್ನು ಸರ್ಕಾರದಿಂದ ಅಭಿವೃದ್ಧಿಪಡಿಸಬೇಕೋ ಅಥವಾ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದ ಮೂಲಕವೋ ಎನ್ನುವ ಗೊಂದಲವಿದೆ. ಇದನ್ನು ಶೀಘ್ರವೇ ಬಗೆಹರಿಸಲಾಗುವುದು’ ಎಂದರು.

‘ಎಚ್‌.ಡಿ. ಕೋಟೆ ತಾಲ್ಲೂಕು, ನಂಜುಂಡಪ್ಪ ವರದಿ ಪ್ರಕಾರವೂ ಹಿಂದುಳಿದ ತಾಲ್ಲೂಕಾಗಿದೆ. ಇದರ ಸಮಗ್ರ ಅಭಿವೃದ್ಧಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಿದ್ದೇವೆ. ಶೈಕ್ಷಣಿಕವಾಗಿಯೂ ಅಭಿವೃದ್ಧಿಪಡಿಸುವುದಕ್ಕೆ, ಅತಿ ಹೆಚ್ಚು ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಈ ವರ್ಷವೇ ಕೈಗೊಳ್ಳುತ್ತೇವೆ. ಅತಿ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ರಸ್ತೆಗಳ ನಿರ್ಮಾಣಕ್ಕೂ ಅನುದಾನ ಒದಗಿಸಿದ್ದೇನೆ’ ಎಂದು ತಿಳಿಸಿದರು.

‘ಮಳೆಯಿಂದಾಗಿ ಬಿದ್ದಿರುವ ಮನೆಗಳಿಗೆ ಪರಿಹಾರ ನೀಡುವ ವಿಷಯದಲ್ಲಿ ಗೊಂದಲ ನಿರ್ಮಾಣ ಮಾಡಬಾರದು. ಬಿದ್ದಿರುವ ಎಲ್ಲ ಮನೆಗಳಿಗೂ ಪರಿಹಾರ ಒದಗಿಸಬೇಕು; ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ’ ಎಂದರು.

‘ರಾಜ್ಯದ ಬಹುತೇಕ ಜಲಾಶಯಗಳು ತುಂಬಿವೆ. ಕಬಿನಿ ಹಾಗೂ ಕೆಆರ್‌ಎಸ್‌ ಆಷಾಢ ಮಾಸದಲ್ಲೇ ತುಂಬಿರುವುದು ವಿಶೇಷ. ರೈತರೆಲ್ಲರೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ನಾಲೆಗಳ ಕೊನೆಯ ಭಾಗದವರೆಗೂ ನೀರು ದೊರೆಯುವಂತೆ ಮಾಡಲಾಗುವುದು. ಕಬಿನಿ ಎಡದಂಡೆ ನಾಲುವೆಯ ಸುಧಾರಣೆಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ, ಪತ್ನಿ ಚನ್ನಮ್ಮ ಅವರೊಂದಿಗೆ ಪೂಜೆ ಸಲ್ಲಿಸಿ ಬಾಗಿನಿ ಅರ್ಪಿಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ಅನಿಲ್ ಚಿಕ್ಕಮಾದು, ಹರ್ಷವರ್ಧನ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ, ಮುಖಂಡ ಅಪ್ಪಣ್ಣ, ಜಿಲ್ಲಾ ಪಂಚಾಯಿತಿ ‌ಸಿಇಒ‌ ಬಿ.ಆರ್. ಪೂರ್ಣಿಮಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.