ADVERTISEMENT

MUDA Scam: ಲೋಕಾಯುಕ್ತ ಕಚೇರಿ ರಾತ್ರಿ ಭೇಟಿ ನೀಡಿದ ಮಲ್ಲಿಕಾರ್ಜುನ ಸ್ವಾಮಿ

ಬುಧವಾರವೂ ಲೋಕಾಯುಕ್ತ ಕಚೇರಿಗೆ ಬಂದು ಹೋದ ಆರೋಪಿ ಮಲ್ಲಿಕಾರ್ಜುನ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 13:52 IST
Last Updated 20 ನವೆಂಬರ್ 2024, 13:52 IST
ಮಲ್ಲಿಕಾರ್ಜುನ ಸ್ವಾಮಿ
ಮಲ್ಲಿಕಾರ್ಜುನ ಸ್ವಾಮಿ   

ಮೈಸೂರು: ಮುಡಾ ನಿವೇಶನಗಳ ಹಂಚಿಕೆ ಪ್ರಕರಣದ ಮೂರನೇ ಆರೋಪಿಯಾಗಿರುವ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಮಂಗಳವಾರ ರಾತ್ರಿ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ್ದು, ಬುಧವಾರ ಮತ್ತೆ ಹಾಜರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮಂಗಳವಾರ ಬೆಳಿಗ್ಗೆಯಿಂದ ಸಂಜೆ 7ರವರೆಗೆ ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್‌ ಅವರನ್ನು ಲೋಕಾಯುಕ್ತ ಅಧಿಕಾರಿಗಳ ತಂಡವು ವಿಚಾರಣೆಗೆ ಒಳಪಡಿಸಿತ್ತು. ಅದಾದ ಒಂದು ಗಂಟೆ ಬಳಿಕ, ರಾತ್ರಿ 8ರ ವೇಳೆಗೆ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ ಕಚೇರಿಗೆ ಕೆಲವು ಪತ್ರಗಳೊಂದಿಗೆ ಬಂದು ಅಧಿಕಾರಿಗಳನ್ನು ಭೇಟಿ ಮಾಡಿದರು. ಬುಧವಾರ ಬೆಳಿಗ್ಗೆ 11.30ರ ಸುಮಾರಿಗೆ ಮತ್ತೆ ಭೇಟಿ ನೀಡಿದರು.

ಯಾವ ಉದ್ದೇಶಕ್ಕೆ ರಾತ್ರಿ ಭೇಟಿ ನೀಡಿದರು? ವಿಚಾರಣೆಗೆ ಕರೆಯಲಾಗಿತ್ತೆ? ಎಂಬುದು ಸ್ಪಷ್ಟವಾಗಿಲ್ಲ. ‘ಬ್ಯಾಂಕ್‌ ಖಾತೆಗೆ ಸಂಬಂಧಿಸಿ ತನಿಖಾಧಿಕಾರಿಗಳು ಕೇಳಿದ ಮಾಹಿತಿಯನ್ನು ನೀಡಲು ಬಂದಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪಾಲಯ್ಯ ವಿಚಾರಣೆ:
ಮೈಸೂರಿನ ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಪಾಲಯ್ಯ ಬುಧವಾರ ಎರಡನೇ ಬಾರಿಗೆ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾದರು.

ಅವರು 2004-05ರಲ್ಲಿ ಮೈಸೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಕೆಲ ಕಾಲ ಮುಡಾ ಆಯುಕ್ತರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ದೇವರಾಜು ಅವರಿಂದ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿನ ಜಮೀನು ಖರೀದಿಸಿದ ವೇಳೆ ಜಮೀನು ಪರಭಾರೆ, ಖಾತೆ ಸೇರಿದಂತೆ ಕೆಲವು ಕಡತಗಳಿಗೆ ಸಹಿ ಮಾಡಿದ್ದರು. ಆ ಬಗ್ಗೆ ಅಧಿಕಾರಿಗಳ ತಂಡವು ಮಾಹಿತಿ ಪಡೆಯಿತು.

‘ಮೊದಲ ವಿಚಾರಣೆಯಲ್ಲಿ ಕೆಸರೆ ಜಮೀನಿಗೆ ಸಂಬಂಧಿಸಿ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದರು. ಇಂದು ಮುಡಾಕ್ಕೆ ಸಂಬಂಧಿಸಿದ ಮಾಹಿತಿ ಕೇಳಿದ್ದರು. ನಾನು ಆಯುಕ್ತನಾಗಿದ್ದಾಗ, ಸಿದ್ದರಾಮಯ್ಯ ಪತ್ನಿ ಪಾರ್ವತಿ ತಮ್ಮ ಜಮೀನಿಗೆ ಪರಿಹಾರ ಕೋರಿ ಟಪಾಲಿನ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಎಲ್ಲವನ್ನೂ ವಿವರಿಸಿದ್ದೇನೆ’ ಎಂದು ಪಾಲಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಪ್ರಕರಣದ ನಾಲ್ಕನೇ ಆರೋಪಿ ದೇವರಾಜು, ಮುಡಾದ ಮಾಜಿ ಆಯುಕ್ತ ಕಾಂತರಾಜು ಸೇರಿದಂತೆ ಹಲವರಿಗೆ ತನಿಖಾಧಿಕಾರಿಗಳು ನೋಟಿಸ್‌ ನೀಡಿದ್ದು, ಸದ್ಯದಲ್ಲೇ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಲೋಕಾಯುಕ್ತ ಎಡಿಜಿಪಿಗೆ ಸ್ನೇಹಮಯಿ ಕೃಷ್ಣ ಪತ್ರ

ಮೈಸೂರಿನ ಲೋಕಾಯುಕ್ತ ಎಸ್.ಪಿ. ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಇರುವುದು ಹಾಗೂ ಲೋಕಾಯುಕ್ತ ಕಚೇರಿಗೆ ರಾತ್ರಿ ವೇಳೆ ಆರೋಪಿ ಮಲ್ಲಿಕಾರ್ಜುನ ಸ್ವಾಮಿ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಬುಧವಾರ ಪತ್ರ ಬರೆದಿದ್ದಾರೆ. ‘ಎಲ್ಲ ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಆದಾರೂ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ನಾನು ಮನವಿ ಮಾಡಿದ್ದರೂ ಕ್ರಮ ಜರುಗಿಸಿಲ್ಲ. ಹೀಗಾಗಿ ಕಚೇರಿಯಲ್ಲಿನ ಚಟುವಟಿಕೆಗಳ ಬಗ್ಗೆ ಅನುಮಾನ ಮೂಡುತ್ತಿದೆ. ಕೂಡಲೇ ಕ್ಯಾಮೆರಾಗಳ ಅಳವಡಿಕೆಗೆ ಆದೇಶಿಸಬೇಕು’ ಎಂದು ಕೋರಿದ್ದಾರೆ. ‘ಪ್ರಕರಣದ ಆರೋಪಿ ಮಲ್ಲಿಕಾರ್ಜುನ ಸ್ವಾಮಿ ಮಂಗಳವಾರ ರಾತ್ರಿ ಮೈಸೂರಿನ ಲೋಕಾಯುಕ್ತ ಕಚೇರಿಗೆ ಹಾಜರಾಗಿ ತನಿಖಾಧಿಕಾರಿಯನ್ನು ಭೇಟಿ ಮಾಡಿರುವುದು ಅನುಮಾನ ಮೂಡಿಸುತ್ತದೆ. ಆ ವೇಳೆ ಆರೋಪಿ ಬಂದಿದ್ದು ಏಕೆ? ರಾತ್ರಿಯ ಸಮಯದಲ್ಲಿ ಬರುವಂತಹ ತುರ್ತು ಏನಿತ್ತು? ತನಿಖಾಧಿಕಾರಿಗಳು ದೂರವಾಣಿ ಕರೆ ಮಾಡಿದ್ದರೆ ಅಥವಾ ನೋಟಿಸ್ ನೀಡಿದ್ದರೆ? ಅಷ್ಟು ರಾತ್ರಿಯಲ್ಲಿ ತನಿಖಾಧಿಕಾರಿ ಕಚೇರಿಯಲ್ಲಿ ಇರುವುದು ಮಲ್ಲಿಕಾರ್ಜುನ ಸ್ವಾಮಿಗೆ ಹೇಗೆ ಗೊತ್ತಾಯಿತು ಎಂಬ ಅಂಶಗಳ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.