ಮೈಸೂರು: ‘ಕೇಂದ್ರ ಸರ್ಕಾರವೇ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ. ಹೀಗಿದ್ದರೂ ಬಿಜೆಪಿಯವರು ರಾಜ್ಯದಲ್ಲಿ ಪ್ರತಿಭಟಿಸುತ್ತಾ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.
ಇಲ್ಲಿನ ವಿಮಾನನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಆಹಾರ ಭದ್ರತಾ ಕಾಯ್ದೆ ಮಾಡಿದವರು, ₹ 3ಕ್ಕೆ ಅಕ್ಕಿ ಕೊಟ್ಟವರು ನಮ್ಮ ಮನಮೋಹನ್ ಸಿಂಗ್. ಅದನ್ನು ಬಿಜೆಪಿಯ ನಾಯಕ ಮುರುಳಿ ಮನೋಹರ ಜೋಶಿ, ‘ವೋಟ್ ಸೆಕ್ಯುರಿಟಿ ಆಕ್ಟ್’ ಎಂದು ಟೀಕಿಸಿದ್ದರು. ಹೀಗಿರುವಾಗ, ಸಿದ್ದರಾಮಯ್ಯ ಸರ್ಕಾರ ಕಟ್ ಮಾಡಿಬಿಟ್ಟಿದೆ, ಬಡವರ ಅಕ್ಕಿ ಕಿತ್ತುಕೊಳ್ಳುತ್ತಾರೆ ಎಂದೆಲ್ಲಾ ತೋರಿಸುತ್ತಿದ್ದಿರಲ್ಲಾ?’ ಎಂದು ಮಾಧ್ಯಮದವರನ್ನು ಟೀಕಿಸಿದರು.
‘ನಾನು ಬಿಪಿಎಲ್ ಕಾರ್ಡ್‌ಗೆ 7 ಕೆ.ಜಿ. ಅಕ್ಕಿ ಕೊಡುತ್ತಿದ್ದೆ. 5 ಕೆ.ಜಿ.ಗೆ ಇಳಿಸಿದವರು ಯಾರು? ಅದನ್ನ್ಯಾಕೆ ನೀವು ಬರೆಯುವುದಿಲ್ಲ, ಟಿವಿಯಲ್ಲೇಕೆ ತೋರಿಸುವುದಿಲ್ಲ? ಸುಮ್ನೆ ಕೂತ್ಕೊಳ್ರಿ’ ಎಂದರು.
‘ಯಡಿಯೂರಪ್ಪ ಸರ್ಕಾರದಲ್ಲಿ ಅಕ್ಕಿಯನ್ನು 5 ಕೆಜಿಗೆ ಇಳಿಸಲಾಯಿತು. ಈಗ ವಿಜಯೇಂದ್ರ ಮಾತನಾಡುತ್ತಾನಲ್ಲಾ ಅವನಿಗೆ ಉಗಿಯಬೇಕಾ, ಬೇಡವಾ? ಯಡಿಯೂರಪ್ಪ, ಮಗನನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮುಖ್ಯಮಂತ್ರಿ ಮಾಡುವುದಕ್ಕೆ ಹೊರಟಿದ್ದಾರೆ’ ಎಂದರು.
‘ಬಿಪಿಎಲ್ ಕಾರ್ಡ್ ಬಗ್ಗೆ ಮಾತನಾಡಲು ವಿಜಯೇಂದ್ರಗೆ ಯಾವ ನೈತಿಕ ಹಕ್ಕಿದೆ. ನೀವು ಅವರ ಹೇಳಿಕೆಗಳನ್ನು ಹಾಕಲೂಬಾರದು; ಅವರನ್ನು ತೋರಿಸಲೂ ಬಾರದು’ ಎಂದು ಆಗ್ರಹಿಸಿದರು.
‘10 ಕೆ.ಜಿ. ಅಕ್ಕಿ ಕೊಡಲು ಆರಂಭಿಸಿದವರು ನಾವು. ಸರ್ಕಾರಿ ನೌಕರರಿಗೆ, ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್ ಕೊಡಬೇಕಾ? ಮತ್ತೇಕೆ ಟಿವಿಯಲ್ಲಿ ತೋರಿಸುತ್ತೀರಿ’ ಎಂದು ಆಕ್ಷೇಪಿಸಿದರು.
‘ಅಕ್ಕಿ ಕೊಡುವುದು ಬಡವರಿಗೆ ರೂಪಿಸಿದ ಕಾರ್ಯಕ್ರಮ. ಬಿಜೆಪಿಯವರೇ ಮಾನದಂಡ ರೂಪಿಸಿ ಈಗ ಅವರೇ ಅದರ ವಿರುದ್ಧ ಹೋರಾಡುತ್ತಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಫೋಟೊ ತೆಗೆಸಿಕೊಂಡಿದ್ದೇ ತೆಗೆಸಿಕೊಂಡಿದ್ದು. ಕಾಂಗ್ರೆಸ್‌ನವರು ಪಾಪಿಗಳೆಂದು ಬಿಜೆಪಿಯವರು ಹೇಳುತ್ತಾರೆ. ಅದನ್ನೆ ನೀವು ದೊಡ್ಡದಾಗಿ ತೋರಿಸುತ್ತೀರಿ. ಪಾಪಿಗಳು ಅವರಾ, ನಾವಾ’ ಎಂದು ಕೇಳಿದರು.
‘ಬಿಜೆಪಿಯವರು ಪ್ರತಿಭಟಿಸುವುದನ್ನು, ಅಭಿಯಾನ ನಡೆಸುವುದನ್ನು ತೋರಿಸಲೇಬಾರದು. ಅವರೇನು ಸತ್ಯ ಹೇಳುತ್ತಿದ್ದಾರೆಯೇ? ಮಾಧ್ಯಮದ ಪಾತ್ರವೇನು, ಜನರಿಗೆ ಸತ್ಯ ತಿಳಿಸಬೇಕಲ್ಲವೇ? ಜನರೇ ತೀರ್ಮಾನಿಸಿಕೊಳ್ಳಲಿ ಎಂದರೆ ಹೇಗೆ? ನಿಮ್ಮ ಕೆಲಸವೇನು? ಮಾಧ್ಯಮ ಜನರಿಗೆ ಸತ್ಯವನ್ನು ಹೇಳಬೇಕು’ ಎಂದರು.
‘ಅದಾನಿಯಿಂದ ದೇಶದ ಗೌರವ ಹಾಳಾಗಿವೆ. ಅವರಿಗೆ ರಕ್ಷಣೆ ಕೊಡುತ್ತಿರುವವರು ಯಾರೆಂದು ದೇಶಕ್ಕೇ ಗೊತ್ತಿದೆ. ನಿಮಗೆ ಗೊತ್ತಿಲ್ವಾ? ಈ ಸತ್ಯವನ್ನು ಮಾಧ್ಯಮಗಳು ದೇಶದ ಜನರಿಗೆ ಏಕೆ ತೋರಿಸುತ್ತಿಲ್ಲ’ ಎಂದು ಕೇಳಿದರು. ‘ಅದಾನಿಯನ್ನು ತಕ್ಷಣ ಬಂಧಿಸಬೇಕು, ತಪ್ಪಿಸಿಕೊಳ್ಳಲು ಬಿಡಬೇಡಿ’ ಎಂದು ಹೇಳಿದರು.
‘ನಾವು ಮಾಡುವ ತಪ್ಪನ್ನೂ ಹೇಳಿ. ಆದರೆ, ಸತ್ಯ ಹೇಳಿ’ ಎಂದರು.
ಸಾತ್ವಿಕ ಸಿಟ್ಟು:
ಸಿದ್ದರಾಮಯ್ಯ ಅವರು ಕೋಪಿಸಿಕೊಂಡಿದ್ದನ್ನು ನಗರದ ಕ್ವೆಸ್ಟ್ ಅಕಾಡೆಮಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ, ‘ಸಿದ್ದರಾಮಯ್ಯ ಅವರಿಗೆ ಕೋಪ ಜಾಸ್ತಿ. ದಬ್ಬಾಳಿಕೆ, ಪಾಳೇಗಾರಿಕೆ ಕಂಡಾಗ ಹಾಗೂ ತುಳಿತಕ್ಕೆ ಒಳಗಾದವರ ಮೇಲೆ ಸವಾರಿ ಮಾಡುವವರ ಮೇಲೆ ಸಾತ್ವಿಕ ಸಿಟ್ಟು ವ್ಯಕ್ತಪಡಿಸುತ್ತಾರಷ್ಟೆ’ ಎಂದು ಸಮರ್ಥಿಸಿಕೊಂಡರು.
Quote -
Cರೈತರಿಗೆ ಸಾಲ ಕಡಿತ: ಪರಮ ಅನ್ಯಾಯ: ಸಿಎಂ ಮೈಸೂರು: ‘ರಾಜ್ಯದ ರೈತರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಕೊಡುವ ಸಾಲದ ಮೊತ್ತವನ್ನು ನಬಾರ್ಡ್ (ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ಈ ಬಾರಿ ಶೇ 58ರಷ್ಟು ಕಡಿತಗೊಳಿಸಿರುವುದು ಪರಮ ಅನ್ಯಾಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗಬೇಕು. ಆದರೆ ಕಡಿತವಾಗಿದೆ. ನಬಾರ್ಡ್‌ಗೆ ಶೇ 4.5ರಷ್ಟು ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಈಗ ಸಾಲ ಕಡಿತಗೊಳಿಸಿರುವುದರಿಂದ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಪಡೆದು ಶೇ 10ರಷ್ಟು ಬಡ್ಡಿ ಕಟ್ಟಬೇಕು. ಇದು ರಾಜ್ಯಕ್ಕಾಗುವ ನಷ್ಟ’ ಎಂದರು. ‘ಅನ್ಯಾಯ ಸರಿಪಡಿಸುವಂತೆ ಕೋರಿ ರಾಜ್ಯದಿಂದಲೇ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಕೊಟ್ಟಿದ್ದೇನೆ. ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು. ‘ನಬಾರ್ಡ್ ನಿರ್ಧಾರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದರೆ ಮಣ್ಣಿನ ಮಗ ರೈತರ ಮಗ ಅಂದುಕೊಂಡಿರುವ ಎಚ್.ಡಿ.ಕುಮಾರಸ್ವಾಮಿಯವರು ಉಸಿರೇ ಬಿಡುತ್ತಿಲ್ಲವಲ್ಲ ಏಕೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.