ADVERTISEMENT

MUDA Scam | 1984ರಲ್ಲೇ ಬದಲಿ ನಿವೇಶನ ಪಡೆದಿದ್ದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 1:27 IST
Last Updated 5 ಆಗಸ್ಟ್ 2024, 1:27 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ಸಿದ್ದರಾಮಯ್ಯ ಅವರು 1984ರಲ್ಲಿ ಶಾಸಕರಾಗಿದ್ದ ಸಂದರ್ಭ ಇಲ್ಲಿನ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯಿಂದ (ಸಿಐಟಿಬಿ, ಈಗಿನ ಮುಡಾ) ಬದಲಿ ನಿವೇಶನ ಪಡೆದಿದ್ದ ಸಂಗತಿ ದಾಖಲೆಗಳಿಂದ ಬಹಿರಂಗಗೊಂಡಿದೆ.

1984ರ ಏಪ್ರಿಲ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಮೈಸೂರಿನ ಜಯನಗರ– ತೊಣಚಿಕೊಪ್ಪಲು 2ನೇ ಹಂತದ ‘ಎಂ’ ಬ್ಲಾಕ್‌ನ ನಿವೇಶನ ಸಂಖ್ಯೆ 9ರಲ್ಲಿ 50X80 ಚ.ಅಡಿ ಅಳತೆಯ ನಿವೇಶನ ಮಂಜೂರಾಗಿತ್ತು. ಇದಕ್ಕಾಗಿ ಪ್ರತಿ ಚದರ ಗಜಕ್ಕೆ ₹30ರಂತೆ ಒಟ್ಟು ₹15,110 ದರವನ್ನು ನಿಗದಿಪಡಿಸಲಾಗಿತ್ತು. ಆದರೆ, ಈ ನಿವೇಶನಕ್ಕೆ ಬದಲಾಗಿ ಅದೇ ಬಡಾವಣೆಯ ‘ಜಿ’ ಮತ್ತು ‘ಎಚ್‌’ ಬ್ಲಾಕ್‌ನಲ್ಲಿ ಖಾಲಿ ಇರುವ ‘ನಿವೇಶನ ಸಂಖ್ಯೆ– 1245’ ಮಂಜೂರು ಮಾಡುವಂತೆ ಸಿದ್ದರಾಮಯ್ಯ ಕೋರಿದ್ದರು.

ಈ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಹಳೇ ನಿವೇಶನ ಹಂಚಿಕೆಯನ್ನು ರದ್ದುಪಡಿಸಿ, ಶಾಸಕರ ಕೋರಿಕೆಯಂತೆ ಹೊಸ ನಿವೇಶನವನ್ನು ಮಂಜೂರು ಮಾಡಿದ್ದರು. ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ಮಾಹಿತಿ ಹಕ್ಕಿನ ಅಡಿ ಮುಡಾ ಅಧಿಕಾರಿಗಳು ನೀಡಿರುವ ದಾಖಲೆಗಳಲ್ಲಿ ಈ ಸಂಗತಿ ಬಹಿರಂಗಗೊಂಡಿದೆ.

ADVERTISEMENT

‘ಬದಲಿ ನಿವೇಶನದ ಕುರಿತು ಈಗ ಚರ್ಚೆ ಜೋರಾಗಿದೆ. ಆದರೆ, ಆಗಿನ ಕಾಲದಲ್ಲೇ ಸಿದ್ದರಾಮಯ್ಯ ಅವರಂಥವರು ಬಯಸಿದ ಜಾಗದಲ್ಲಿ ಬದಲಿ ನಿವೇಶನ ಪಡೆದಿದ್ದಾರೆ. ಸಿಐಟಿಬಿ ಹಾಗೂ ಈಗಿನ ಮುಡಾದಲ್ಲಿ ಆಗಿನಿಂದಲೂ ಶಾಸಕರ ಪ್ರಭಾವ ಕೆಲಸ ಮಾಡಿರುವುದನ್ನು ಈ ದಾಖಲೆಗಳು ಹೇಳುತ್ತವೆ’ ಎಂದು ಗಂಗರಾಜು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.