ADVERTISEMENT

₹443.64 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 13:10 IST
Last Updated 12 ನವೆಂಬರ್ 2024, 13:10 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): 'ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬಳಿ ಹಣವಿಲ್ಲವೆಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಳ್ಳೇ ಅವರ ಮನೆ ದೇವರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಮಂಗಳವಾರ ಆಯೋಜಿಸಿದ್ದ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ₹ 443.64 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿ ಮಾತನಾಡಿದರು.

ADVERTISEMENT

'ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲವೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಎಲ್ಲರಿಗೂ‌ ಸಂಬಳ ಆಗುತ್ತಿಲ್ಲವೆ? ಎಚ್.ಡಿ.ಕೋಟೆಯಲ್ಲಿ ₹ 443.64 ಕೋಟಿ, ತಿ.ನರಸೀಪುರದಲ್ಲಿ ₹ 500 ಕೋಟಿ ವೆಚ್ಚದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಈಗ ಹೇಳಿ ಸರ್ಕಾರದ ಬಳಿ ಹಣವಿಲ್ಲವೇ' ಎಂದು ಜನರನ್ನು ಪ್ರಶ್ನಿಸಿದರು.

'ಬಡವರು, ಮಹಿಳೆಯರು, ಹಿಂದುಳಿದವರು, ಶೋಷಿತರ ಪರವಾಗಿ ಕೆಲಸಮಾಡುತ್ತಾನೆಂಬ ಕಾರಣಕ್ಕೆ ನನ್ನ ಮೇಲೂ ಸುಳ್ಳು ಪ್ರಕರಣ ಹಾಕಿದ್ದಾರೆ. ಸಿದ್ದರಾಮಯ್ಯ ಇದ್ದರೆ, ಕಾಂಗ್ರೆಸ್ ಸರ್ಕಾರ ತೆಗೆಯಲು ಸಾಧ್ಯವಿಲ್ಲವೆಂದು ವಿರೋಧ ಪಕ್ಷದವರಿಗೆ ಗೊತ್ತು' ಎಂದರು.

'ಶಕ್ತಿ ಯೋಜನೆಯಲ್ಲಿ 324 ಕೋಟಿ ಬಾರಿ ಮಹಿಳೆಯರು‌ ಬಸ್ ಪ್ರಯಾಣ ಮಾಡಿದ್ದಾರೆ. 1.65 ಕೋಟಿ ಮನೆ‌ಗಳಿಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. 1.22 ಕೋಟಿ ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ ₹ 2 ಸಾವಿರ ನೀಡಲಾಗುತ್ತಿದೆ. ‌ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಯೋಜನೆಯಡಿ ಮಾಸಿಕ ₹ 3 ಸಾವಿರ ನೀಡಲಾಗುತ್ತಿದೆ. ಬಿಜೆಪಿಯವರೂ ಇವುಗಳ ಪ್ರಯೋಜನ ಪಡೆಯುತ್ತಿಲ್ಲವೇ' ಎಂದರು.

'ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ಕೊಡಲು ಮುಂದಾದಾಗ ಹಣ ಕೊಡುತ್ತೇವೆಂದರೂ ಬಡವರಿಗೆ ಅಕ್ಕಿ ಕೊಡದ ಬಿಜೆಪಿಯವರು ಮನೆಹಾಳರು. ಹೀಗಾಗಿ 5 ಕೆ.ಜಿ ಅಕ್ಕಿ ಬದಲು ₹ 170 ಕೊಡಲು ಆರಂಭಿಸಲಾಯಿತು' ಎಂದು ತಿಳಿಸಿದರು‌.

'ಪರಿಶಿಷ್ಟ ಜಾತಿ, ಪಂಗಡ ಸಮುದಾಯಗಳಿಗೆ‌ ಎಸ್ ಸಿಪಿ, ಟಿಎಸ್ ಪಿ ಯೋಜನೆಯಡಿ ಜನಸಂಖ್ಯೆ ಆಧಾರದಲ್ಲಿ ಕ್ರಮವಾಗಿ ₹28 ಸಾವಿರ ಕೋಟಿ,

₹ 11,447 ಕೋಟಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ನೀಡಲಾಗಿದೆ' ಎಂದು ಮಾಹಿತಿ ನೀಡಿದರು.

'ಶೂದ್ರ ಸಮುದಾಯಕ್ಕೆ ಸೇರಿದ ವಾಲ್ಮೀಕಿ, ವ್ಯಾಸ, ಕಾಳಿದಾಸ ಸಂಸ್ಕೃತದಲ್ಲಿ ಕಾವ್ಯಗಳನ್ನು ರಚಿಸಿದ್ದರು. ವಿದ್ಯಾವಂತರಾಗಲು ಜಾತಿ ಅಡ್ಡ ಬರಬಾರದು. ವಿದ್ಯೆ ಯಾರಪ್ಪನ ಸ್ವತ್ತೂ ಅಲ್ಲ. ನಾನು ಕಾನೂನು ಪದವಿ ಪಡೆಯದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ' ಎಂದರು.

'ರಾಮರಾಜ್ಯ ಕಲ್ಪನೆ ವಾಲ್ಮೀಕಿ ಅವರದ್ದಾಗಿದೆ. ರಾಮರಾಜ್ಯದಲ್ಲಿ ಮೇಲಿಲ್ಲ- ಕೀಳಿಲ್ಲ. ಸಮುದಾಯದವರು ವಿದ್ಯಾವಂತರಾಗಬೇಕು. ಸಮ ಸಮಾಜದ ನಿರ್ಮಾಣ ಆಗಬೇಕು' ಎಂದರು.

'ಎಚ್.ಡಿ.ಕೋಟೆಯಲ್ಲಿಮ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ₹ 2 ಕೋಟಿ ಅನುದಾನ ನೀಡಲಾಗುವುದು' ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, 'ಎಚ್.ಡಿ.ಕೋಟೆ ಕ್ಷೇತ್ರದಿಂದ ಯಾರೂ ಕೂಡ ಎರಡನೇ ಬಾರಿ ಗೆಲ್ಲಲು ಸಾಧ್ಯವಾಗಿಲ್ಲ. ಜನರ ಕೆಲಸವನ್ನು ಬದ್ಧತೆಯಿಂದ ಮಾಡಿದ್ದರಿಂದಲೇ ಅನಿಲ್ ಸತತವಾಗಿ‌ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ' ಎಂದರು.

'ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ. ನಾವು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ತನಿಖೆಯ ಭಯವಿಲ್ಲ. ಸುಳ್ಳು ಆರೋಪಗಳನ್ನು ಮಾಡಿ ಮುಖ್ಯಮಂತ್ರಿ ಅವರನ್ನು ಸಿಲುಕಿಸುವ ಹುನ್ನಾರ ನಡೆದಿದೆ.

ಕೇಂದ್ರ ಸರ್ಕಾರದ ಧೋರಣೆಗೆ ಜನರು ಮನ್ನಣೆ ನೀಡಬಾರದು. ಬಡವರ ಪರವಿರುವ ಸರ್ಕಾರಕ್ಕೆ ಬೆಂಬಲ ಕೊಡಬೇಕು' ಎಂದು ಕೋರಿದರು.

ಹನುಮನಂತೆ ಕೆಲಸ ಮಾಡುವೆ: ಅರಣ್ಯ ವಸತಿ ಹಾಗೂ ವಿಹಾರಧಾಮಗಳ ನಿಗಮದ ಅಧ್ಯಕ್ಷ ಸಿ.ಅನಿಲ್ ಕುಮಾರ್, 'ಮುಂದಿನ ವಿಧಾನಸಭಾ ಚುನಾವಣೆಯೂ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ನಡೆಯಬೇಕು. ಮುಂದಿನ ಮುಖ್ಯಮಂತ್ರಿಯೂ ಅವರೇ ಆಗಲಿದ್ದು, ಹನುಮನ ರೀತಿ ಕೆಲಸ ಮಾಡುವೆ' ಎಂದರು.

'ಮುಂದಿನ ಚುನಾವಣೆ ವೇಳೆ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾದರೂ ಬೇರೆಲ್ಲಿಯೂ ಹೋಗದೇ ಇಲ್ಲೇ ಸ್ಪರ್ಧಿಸುವೆ. ಸೇವೆ ಮಾಡುವೆ. ಶಾಸಕರಾಗಿದ್ದ ತಂದೆ ಚಿಕ್ಕಮಾದು, ಸಂಸದರಾಗಿದ್ದ ಧ್ರುವನಾರಾಯಣ ಹಾಗೂ‌ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದುಕೊಟ್ಟಿದ್ದಾರೆ. ಈ ಬಾರಿ ₹ 450 ಕೋಟಿ ವೆಚ್ಚದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ' ಎಂದು ಹೇಳಿದರು.

'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲು ವಾಲ್ಮೀಕಿ ಮಹರ್ಷಿ ಕಾರಣ. ಬಿಜೆಪಿ ರಾಮನನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ' ಎಂದರು.

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಎದುರು ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಪರಿವಾರ, ತಳವಾರ ಎಸ್.ಟಿ ಮೀಸಲಿಗೆ ಸೇರಿಸಲು ಅವರೇ ಕಾರಣ. ಅಂತೆಯೇ ವಾಲ್ಮೀಕಿ ಭವನಕ್ಕೆ ₹ 2 ಕೋಟಿ ಹಾಗೂ ಮೈಸೂರು- ಮಾನಂದವಾಡಿ ಚತುಷ್ಪಥ ಕಾಮಗಾರಿಗೆ ಅನುದಾನ ನೀಡಬೇಕು' ಎಂದು ಕೋರಿದರು.

ಸಂಸದ ಸುನಿಲ್ ಬೋಸ್, ಶಾಸಕರಾದ ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ರಾಜನಹಳ್ಳಿ ಮಠದ ಪ್ರಸನ್ನಾನಂದಪುರಿ‌ ಸ್ವಾಮೀಜಿ, ಪ್ರಾದೇಶಿಕ ಆಯುಕ್ತ ಡಿ.ಎಸ್.ರಮೇಶ್, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮುಖಂಡರಾದ ಕಳಲೆ ಕೇಶವಮೂರ್ತಿ, ಸೀತಾರಾಮ್, ಎಸ್.ಸಿ.ಬಸವರಾಜು, ಕೋಟೆ ಎಂ.ಶಿವಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.