ADVERTISEMENT

ಪೋಕ್ಸೊ ಕೇಸಲ್ಲಿ ಸಿಕ್ಕಿಬಿದ್ದಿರುವ ಯಡಿಯೂರಪ್ಪ ಬಗ್ಗೆ ಶೋಭಾ ಮಾತನಾಡಲಿ: ಸಿಎಂ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2024, 8:52 IST
Last Updated 11 ಅಕ್ಟೋಬರ್ 2024, 8:52 IST
   

ಮೈಸೂರು: ಕೇಂದ್ರ ಸಚಿವೆ‌ ಶೋಭಾ ಕರಂದ್ಲಾಜೆ ಪೋಕ್ಸೊ ಪ್ರಕರಣದಲ್ಲಿ ‌ಸಿಕ್ಕಿಬಿದ್ದಿರುವ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ‌ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ‌ಶುಕ್ರವಾರ ಅವರು ಮಾತನಾಡಿದರು. ಸರ್ಕಾರದ ಜಾಹೀರಾತನ್ನು ಟೀಕಿಸಿದ ಶೋಭಾ ಕರಂದ್ಲಾಜೆ ಅವರಿಗೆ ತಿರುಗೇಟು ನೀಡಿದರು.

'ಅವರು ಪೋಕ್ಸೊ ಕೇಸಲ್ಲಿ ಸಿಲುಕಿರುವ ಯಡಿಯೂರಪ್ಪ ಅವರಿಗೆ ಹೇಳಲು ಹೇಳಿ. ಬಿಜೆಪಿ ಸಂಸದೀಯ ಮಂಡಳಿಯಿಂದ ಯಡಿಯೂರಪ್ಪ ಅವರನ್ನು ತೆಗೆದುಹಾಕಿಸುವಂತೆ ಹೇಳಲಿ. ಅದನ್ನು ಬಿಟ್ಟು ಇಲ್ಲಿಗೆ ಬಂದು ಏನೇನೋ ಹೇಳಿದರೆ? ಎಂದು ಕೋಪದಿಂದ ಹೇಳಿದರು.

ADVERTISEMENT

ಯಡಿಯೂರಪ್ಪ ಅವರ ಮೇಲೆ ಪೋಕ್ಸೊ ಕೇಸಲ್ಲಿ ದೋಷಾರೋಪಣಾ ಪಟ್ಟಿ ಇದೆ. ನ್ಯಾಯಾಲಯದ ಕೃಪೆಯಿಂದ ಅವರು ಉಳಿದುಕೊಂಡಿದ್ದಾರಷ್ಟೆ. ಇಲ್ಲವಾಗಿದ್ದರೆ ಒಳಗಡೆ ಇರಬೇಕಾಗಿತ್ತು ಎಂದರು.

ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ, ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಬಾರಿ ಪುಷ್ಪಾರ್ಚನೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ರಾಜ್ಯದ ಜನರು ಆ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಹೆಚ್ಚು ಬಾರಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ಆಶೀರ್ವಾದ ನನಗೆ ಸದಾ ಇರುತ್ತದೆ. ದೇವರ ಆಶೀರ್ವಾದ ಇರುವುದರಿಂದಲೇ ಇಷ್ಟು ವರ್ಷ ರಾಜಕಾರಣದಲ್ಲಿ ಉಳಿದಿದ್ದೇನೆ. ರಾಜಕೀಯದಲ್ಲಿ ವೈರಿಗಳೂ ಇರುತ್ತಾರೆ; ಅಭಿಮಾನಿಗಳೂ ಇರುತ್ತಾರೆ. ತೆಗಳುವವರೂ ಇರುತ್ತಾರೆ; ಹೊಗಳುವವರೂ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಹೊಗಳಬೇಕೆಂದು ನಾನು ನಿರೀಕ್ಷೆಯನ್ನೂ ಮಾಡುವುದಿಲ್ಲ‌‌. ಪ್ರಜಾಪ್ರಭುತ್ವದಲ್ಲಿ ಯಾವಾಗಲೂ ಆರೋಗ್ಯಕರ ಚರ್ಚೆ ಆಗಬೇಕು, ಆರೋಗ್ಯಕರ ಟೀಕೆಗಳು ಬರಬೇಕು.‌ ಆಗ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.

ದಿನಪತ್ರಿಕೆಗಳಲ್ಲಿ ಸರ್ಕಾರದಿಂದ ನೀಡಿರುವ ಜಾಹೀರಾತಿನ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ದಸರಾ ಎಂದರೇನು? ದುಷ್ಟಶಕ್ತಿಗಳ ಸಂಹಾರ ಹಾಗೂ ಶಿಷ್ಟಜನರ ರಕ್ಷಣೆಯೇ ದಸರಾ. ಅದಕ್ಕಾಗಿಯೇ ವಿಜಯನಗರದ ಅರಸರು ಅವರ ಜಯದ ಸಂಕೇತವಾಗಿ ಮಾಡುತ್ತಿದ್ದರು.‌ ಆಯುಧ ಪೂಜೆ ಮಾಡುತ್ತಿದ್ದರು. ಅದನ್ನು ಮೈಸೂರು ಅರಸರು ಮುಂದುವರಿಸಿದರು. ಇಂದಿಗೂ ಅದೇ ಸಂಪ್ರದಾಯವನ್ನು ಪ್ರಜಾರಾಜ್ಯದಲ್ಲೂ ಉಳಿಸಿಕೊಂಡು ಬರುತ್ತಿದ್ದೇವೆ ಎಂದರು.

ನಾವು ನೀಡಿರುವ ಜಾಹೀರಾತನ್ನು ನೀವು ಹೇಗೆ ಬೇಕಾದರೂ ವ್ಯಾಖ್ಯಾನ ಮಾಡಿಕೊಳ್ಳಬಹುದು. ಮಾಧ್ಯಮದವರು, ಪರವಾಗಿಯೂ ವ್ಯಾಖ್ಯಾನ ಮಾಡುತ್ತೀರಿ, ವಿರುದ್ಧವಾಗಿಯೂ ವ್ಯಾಖ್ಯಾನ ಮಾಡುತ್ತೀರಿ. ಹೀಗೇ ಮಾಡಿ ಎಂದು ನಾವು ಹೇಳುವುದಕ್ಕೆ ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯವರು ಸುಳ್ಳು ವಿಚಾರಗಳಿಗೇ ಯಾವಾಗಲೂ ಹೋರಾಟ ಮಾಡುತ್ತಾರೆಯೇ ಹೊರತು ಸತ್ಯದ ವಿಚಾರಗಳಿಗೆ ಯಾವತ್ತೂ ಹೋರಾಟ ಮಾಡುವುದಿಲ್ಲ ಎಂದು ಟೀಕಿಸಿದರು.

ಸಚಿವರಾದ ಕೆ.ಜೆ. ಜಾರ್ಜ್, ಕೆ.ವೆಂಕಟೇಶ್, ಶಾಸಕ ಡಿ.ರವಿಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕಾಂಗ್ರೆಸ್ ಗ್ರಾಮಾಂತರ‌ ಜಿಲ್ಲಾ ಸಮಿತಿಯ ಅಧ್ಯಕ್ಷ ‌ಬಿ.ಜೆ. ವಿಜಯ್‌ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.