ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಮಾಧ್ಯಮದವರ ವಿರುದ್ಧ ಕಿಡಿಕಾರಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಆಹಾರ ಭದ್ರತಾ ಕಾಯ್ದೆ ಮಾಡಿದವರು, ₹ 3ಕ್ಕೆ ಅಕ್ಕಿ ಕೊಟ್ಟವರು ನಮ್ಮ ಮನಮೋಹನ್ ಸಿಂಗ್. ಅದನ್ನು ಬಿಜೆಪಿಯ ನಾಯಕ ಮುರುಳಿ ಮನೋಹರ ಜೋಶಿ ಏನೆಂದು ಟೀಕಿಸಿದ್ದರು ಗೊತ್ತಾ? ಅದನ್ನು ‘ವೋಟ್ ಸೆಕ್ಯುರಿಟಿ ಆಕ್ಟ್’ ಎಂದು ಟೀಕಿಸಿದ್ದರು. ಹೀಗಿರುವಾಗ, ಸಿದ್ದರಾಮಯ್ಯ ಸರ್ಕಾರ ಕಟ್ ಮಾಡಿಬಿಟ್ಟಿದೆ, ಬಡವರ ಅಕ್ಕಿ ಕಿತ್ತುಕೊಳ್ಳುತ್ತಾರೆ ಎಂದೆಲ್ಲಾ ತೋರಿಸುತ್ತಿದ್ದಿರಲ್ಲಾ?' ಎಂದು ಕೇಳಿದರು.
'ನಾನು 7 ಕೆ.ಜಿ. ಅಕ್ಕಿ ಕೊಡುತ್ತಿದ್ದೆ. 5 ಕೆ.ಜಿ.ಗೆ ಇಳಿಸಿದವರು ಯಾರು? ಅದನ್ನ್ಯಾಕೆ ನೀವು ಬರೆಯುವುದಿಲ್ಲ, ಟಿವಿಯಲ್ಲೇಕೆ ತೋರಿಸುವುದಿಲ್ಲ? ಸುಮ್ನೆ ಕೂತ್ಕೊಳ್ರಿ' ಎಂದು ಕೋಪದಿಂದ ಹೇಳಿದರು.
‘ಬಿಪಿಎಲ್ ಕಾರ್ಡ್‌ಗೆ 7ರಿಂದ 5 ಕೆ.ಜಿ.ಗೆ ಇಳಿಸಿದವರಾರು? ಯಡಿಯೂರಪ್ಪ ಸರ್ಕಾರದಲ್ಲಿ ಇಳಿಸಲಾಯಿತು. ಈಗ ವಿಜಯೇಂದ್ರ ಮಾತನಾಡುತ್ತಾನಲ್ಲಾ ಅವನಿಗೆ ಉಗಿಯಬೇಕಾ, ಬೇಡವಾ?. ಯಡಿಯೂರಪ್ಪ ಮಗನನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮುಖ್ಯಮಂತ್ರಿ ಮಾಡುವುದಕ್ಕೆ ಹೊರಟಿದ್ದಾರೆ’ ಎಂದರು.
‘ಬಿಪಿಎಲ್ ಕಾರ್ಡ್ ಬಗ್ಗೆ ಮಾತನಾಡಲು ವಿಜಯೇಂದ್ರಗೆ ಯಾವ ನೈತಿಕ ಹಕ್ಕಿದೆ. ನೀವು ಅವರ ಹೇಳಿಕೆಗಳನ್ನು ಹಾಕಲೂಬಾರದು; ಅವರನ್ನು ತೋರಿಸಲೂಬಾರದು’ ಎಂದು ಹೇಳಿದರು.
‘10 ಕೆ.ಜಿ. ಅಕ್ಕಿ ಕೊಡಲು ಆರಂಭಿಸಿದವರು ನಾವು. ಸರ್ಕಾರಿ ನೌಕರರಿಗೆ, ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್ ಕೊಡಬೇಕಾ? ಮತ್ತೇಕೆ ಟಿವಿಯಲ್ಲಿ ತೋರಿಸುತ್ತೀರಿ’ ಎಂದು ಪ್ರಶ್ನಿಸಿದರು.
‘ಅಕ್ಕಿ ಕೊಡುವುದು ಬಡವರಿಗೆ ರೂಪಿಸಿದ ಕಾರ್ಯಕ್ರಮವಿದು. ಬಿಜೆಪಿಯವರೇ ಮಾನದಂಡ ರೂಪಿಸಿ ಈಗ ಅವರೇ ವಿರುದ್ಧ ಹೊರಡುತ್ತಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಫೋಟೊ ತೆಗೆಸಿಕೊಂಡಿದ್ದೇ ತೆಗೆಸಿಕೊಂಡಿದ್ದು’ ಎಂದು ವ್ಯಂಗ್ಯವಾಡಿದರು. ‘ಕಾಂಗ್ರೆಸ್‌ನವರು ಪಾಪಿಗಳು ಎಂದು ಬಿಜೆಪಿಯವರು ಹೇಳುತ್ತಾರೆ. ಅದನ್ನೆ ನೀವು ದೊಡ್ಡದಾಗಿ ತೋರಿಸುತ್ತೀರಿ. ಪಾಪಿಗಳು ಅವರಾ, ನಾವಾ?’ ಎಂದು ವಾಗ್ದಾಳಿ ನಡೆಸಿದರು.
‘ಬಿಜೆಪಿಯವರು ಪ್ರತಿಭಟಿಸುವುದನ್ನು, ಅಭಿಯಾನ ನಡೆಸುವುದನ್ನು ತೋರಿಸಲೇಬಾರದು. ಅವರೇನು ಸತ್ಯ ಹೇಳುತ್ತಿದ್ದಾರೆಯೇ? ಮಾಧ್ಯಮದ ಪಾತ್ರವೇನು, ಜನರಿಗೆ ಸತ್ಯ ತಿಳಿಸಬೇಕಲ್ಲವೇ? ಜನರೇ ತೀರ್ಮಾನಿಸಿಕೊಳ್ಳಲಿ ಎಂದರೆ ಹೇಗೆ? ನಿಮ್ಮ ಕೆಲಸವೇನು? ಮಾಧ್ಯಮ ಜನರಿಗೆ ಸತ್ಯವನ್ನು ಹೇಳಬೇಕು’ ಎಂದರು.
‘ನಾವು ಮಾಡುವ ತಪ್ಪನ್ನೂ ಹೇಳಿ. ಆದರೆ, ಸತ್ಯ ಹೇಳಿ’ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಕೋಪಿಸಿಕೊಂಡಿದ್ದನ್ನು ಕ್ವೆಸ್ಟ್ ಅಕಾಡೆಮಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ, ‘ಸಿದ್ದರಾಮಯ್ಯ ಅವರಿಗೆ ಕೋಪ ಜಾಸ್ತಿ. ದಬ್ಬಾಳಿಕೆ, ಪಾಳೇಗಾರಿಕೆ ಕಂಡಾಗ ಹಾಗೂ ತುಳಿತಕ್ಕೆ ಒಳಗಾದವರ ಮೇಲೆ ಸವಾರಿ ಮಾಡುವವರ ಮೇಲೆ ಸಾತ್ವಿಕ ಸಿಟ್ಟು ವ್ಯಕ್ತಪಡಿಸುತ್ತಾರಷ್ಟೆ’ ಎಂದು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.