ADVERTISEMENT

₹ 50ಸಾವಿರಕ್ಕಿಂತ ಹೆಚ್ಚು ನಗದು ಸಾಗಿಸಿದರೆ ಜಪ್ತಿ: ಚುನಾವಣಾಧಿಕಾರಿ ರಾಜೇಂದ್ರ

ಆನ್‌ಲೈನ್‌ ವಹಿವಾಟು, ಮದ್ಯ ಮಾರಾಟದ ಮೇಲೂ ನಿಗಾ: ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 6:43 IST
Last Updated 17 ಮಾರ್ಚ್ 2024, 6:43 IST

ಮೈಸೂರು: ‘ಮಾದರಿ ನೀತಿಸಂಹಿತೆ ಜಾರಿಗೆ ಬಂದಿರುವುದರಿಂದಾಗಿ, ಯಾವುದೇ ವ್ಯಕ್ತಿಯು ₹ 50ಸಾವಿರಕ್ಕಿಂತ ಹೆಚ್ಚಿನ ನಗದು ಸಾಗಿಸುವಂತಿಲ್ಲ. ಒಂದು ವೇಳೆ ಚೆಕ್‌‍ಪೋಸ್ಟ್‌ನಲ್ಲಿ ಅಥವಾ ತಪಾಸಣೆ ವೇಳೆ ಸಿಕ್ಕಿಬಿದ್ದಲ್ಲಿ ಆ ಹಣವನ್ನು ಜ‍ಪ್ತಿ ಮಾಡಲಾಗುವುದು’ ಎಂದು ಚುನಾವಣಾಧಿಕಾರಿ ರಾಜೇಂದ್ರ ತಿಳಿಸಿದರು.

‘ಯಾವ ಕಾರಣಕ್ಕಾಗಿ ಹಣ ಸಾಗಿಸಲಾಗುತ್ತಿತ್ತು ಎನ್ನುವುದನ್ನು ಸಂಬಂಧಿಸಿದವರು ದಾಖಲೆ ಸಹಿತ ತಿಳಿಸಬೇಕು. ‘ರಾಜಕೀಯ ಕಾರಣಕ್ಕೆ ಆ ಹಣ ಸಾಗಿಸಲಾಗುತ್ತಿರಲಿಲ್ಲ’ ಎಂಬುದು ದಾಖಲೆಗಳಿಂದ ಖಚಿತವಾದಲ್ಲಿ ಮಾತ್ರ ವಾಪಸ್ ನೀಡಲು ಸಂಬಂಧಿಸಿದ ಸಮಿತಿಯಲ್ಲಿ ಕ್ರಮ ವಹಿಸಲಾಗುತ್ತದೆ. ಇಲ್ಲದಿದ್ದರೆ ಹಿಂತಿರುಗಿಸಲಾಗುವುದಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಸ್ಪಷ್ಟಪಡಿಸಿದರು.

‘₹ 10ಸಾವಿರಕ್ಕಿಂತ ಜಾಸ್ತಿ ಮೌಲ್ಯದ ವಸ್ತುಗಳನ್ನು ಸಾಗಿಸುವಂತಿಲ್ಲ. ಆನ್‌ಲೈನ್‌ ವಹಿವಾಟಿನ ಮೇಲೂ ನಿಗಾ ವಹಿಸಲಾಗಿದೆ. ಇದಕ್ಕೆಂದೇ ಪ್ರತ್ಯೇಕ ತಂಡ ರಚಿಸಲಾಗಿದೆ. ಮದ್ಯ ಮಾರಾಟದ ಮೇಲೂ ನಿಗಾ ಇಡಲಾಗುತ್ತದೆ. ಅಸಹಜ ವಹಿವಾಟು ಕಂಡುಬಂದಲ್ಲಿ ಪರಿಶೀಲಿಸಲಾಗುತ್ತದೆ. ಹೋದ ವರ್ಷ ಈ ಅವಧಿಯಲ್ಲಿ ಎಷ್ಟು ಮಾರಾಟವಾಗಿತ್ತು ಎಂಬ ಅಂಕಿ–ಅಂಶದೊಂದಿಗೆ ವಿಶ್ಲೇಷಣೆ ಮಾಡಲಾಗುತ್ತದೆ. ಸಾಮಾಜಿಕ ಮಾಧ್ಯಮದ ಮೇಲೂ ನಿಗಾ ವಹಿಸಲಾಗುತ್ತದೆ. ಕೆಲವು ಹ್ಯಾಷ್‌ಟ್ಯಾಗ್‌ಗಳನ್ನು ಫಾಲೋ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಒಂದು ವೇಳೆ ಒಂದೇ ವಾಹನದಲ್ಲಿ ನಾಲ್ಕೈದು ಮಂದಿಯೂ ತಲಾ ₹ 50ಸಾವಿರ ಸಾಗಿಸುತ್ತಿದ್ದರೆ ಅದು ಅನುಮಾನಕ್ಕೆ ಕಾರಣವಾಗುತ್ತದೆ. ಅವರಿಂದಲೂ ಜಪ್ತಿ ಮಾಡಿ, ಆಯೋಗದ ಗಮನಕ್ಕೆ ತರಲಾಗುವುದು. ಚೆಕ್‌ಪೋಸ್ಟ್‌ಗಳಲ್ಲಿ ಪ್ರವಾಸಿಗರಿಗೆ ಹಾಗೂ ಹೆದ್ದಾರಿಗಳ ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ತಪಾಸಣೆಗೆ ಒಳಪಡಿಸಲಾಗುವುದು’ ಎಂದರು.

‘ಕುಡಿಯುವ ನೀರು ಟ್ಯಾಂಕರ್‌ ಪೂರೈಕೆ ವಿಷಯವೂ ಮತದಾರರಿಗೆ ಆಮಿಷ ವ್ಯಾಪ್ತಿಯಲ್ಲೇ ಬರುತ್ತದೆ. ಯಾರಾದರೂ ರಾಜಕೀಯ ವ್ಯಕ್ತಿಗಳು ಅಥವಾ ಮತದಾರರಿಗೆ ಆಮಿಷ ಒಡ್ಡಲು ಈ ಕಾರ್ಯದಲ್ಲಿ ತೊಡಗಿದರೆ ಅಂಥವರ ಮೇಲೆ ಕ್ರಮ ವಹಿಸಲಾಗುವುದು. ಅಲ್ಲದೇ, ನೀರು ಸರಬರಾಜಿನಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು. ತೀವ್ರ ಬರಗಾಲ ಇರುವುದರಿಂದ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ಈ ಕೆಲಸಕ್ಕೆ ಸಮಯ ಕೊಡಲೆಂದೇ ಪಿಡಿಒ ಮೊದಲಾದ ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ಕಡಿಮೆ ಪ್ರಮಾಣದಲ್ಲಿ ಬಳಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಈ ಬಾರಿ ನಿಮ್ಮ ಅಭ್ಯರ್ಥಿ ಬಗ್ಗೆ ತಿಳಿಯಿರಿ ಎಂದು ಮೊಬೈಲ್‌ ಆ್ಯಪ್‌ ಈ ಬಾರಿ ಹೊಸದಾಗಿ ಪರಿಚಯಿಸಲಾಗಿದೆ. ಅದರಲ್ಲಿ ಅಭ್ಯರ್ಥಿಗಳ ವಿವಿರವನ್ನು ದಾಖಲಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.