ಮೈಸೂರು: ಇಲ್ಲಿನ ರಂಗಾಯಣದ ‘ಭೂಮಿಗೀತ’ ರಂಗಮಂದಿರದಲ್ಲಿ ನ.11ರಿಂದ 15ರವರೆಗೆ ‘ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ–2024’ ಹಮ್ಮಿಕೊಳ್ಳಲಾಗಿದೆ. ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ.
‘ನ.11ರ ಸಂಜೆ 5.30ಕ್ಕೆ ಚಿತ್ರ ಕಲಾವಿದ ಬಾದಲ್ ನಂಜುಂಡಸ್ವಾಮಿ ಉದ್ಘಾಟಿಸುವರು. ಕಲಾವಿದೆ ಸುಷ್ಮಾ ನಾಣಯ್ಯ ಮುಖ್ಯಅತಿಥಿಯಾಗಿ ಪಾಲ್ಗೊಳ್ಳವರು. ರಂಗ ಸಮಾಜದ ಸದಸ್ಯರಾದ ರಾಜಪ್ಪ ದಳವಾಯಿ ಹಾಗೂ ಎಚ್.ಎಸ್. ಸುರೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಭಾಗವಹಿಸುವರು. ಸಂಚಾಲಕಿ ಕೆ.ಅರ್. ನಂದಿನಿ ಹಾಗೂ ಉಪನಿರ್ದೇಶಕ ಎಂ.ಡಿ. ಸುದರ್ಶನ್ ಪಾಲ್ಗೊಳ್ಳುವರು. ನಾನು ಅಧ್ಯಕ್ಷತೆ ವಹಿಸುವೆ’ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಂಗಾಯಣದ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಕಾಲೇಜು ರಂಗ ತರಬೇತಿ ಶಿಬಿರ ಪ್ರಮುಖವಾದುದು. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಮೊದಲಾದ ಜಿಲ್ಲೆಗಳ ಕಾಲೇಜುಗಳಲ್ಲಿ ಯಶಸ್ವಿಯಾಗಿ ನಡೆಯುತ್ತಾ ಯುವಜನರನ್ನು ರಂಗಭೂಮಿಯತ್ತ ಸೆಳೆದಿದೆ’ ಎಂದು ಹೇಳಿದರು.
‘ಈ ಬಾರಿ ಮೈಸೂರಿನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು, ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಕಾಲೇಜು, ಅಮೃತಾ ವಿಶ್ವವಿದ್ಯಾಪೀಠಂ, ಹುಣಸೂರಿನ ಮರದೂರಿನ ಲಾ ಸಲೆಟ್ ಪದವಿ ಪೂರ್ವ ಕಾಲೇಜು ಮತ್ತು ಮಹಿಳಾ ಪ್ರಥಮ ದರ್ಜೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಅವರು ರಂಗಪ್ರದರ್ಶನ ನೀಡಲಿದ್ದಾರೆ. ಇದಕ್ಕಾಗಿ ಸಜ್ಜಾಗುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
ಉಪ ನಿರ್ದೇಶಕ ಎಂ.ಡಿ. ಸುದರ್ಶನ್, ರಂಗೋತ್ಸವ ಸಂಚಾಲಕಿ ಕೆ.ಆರ್.ನಂದಿನಿ, ಕಲಾವಿದರಾದ ಹುಲಗಪ್ಪ ಕಟ್ಟಿಮನಿ, ಪ್ರಶಾಂತ್ ಹಿರೇಮಠ, ಎಂ.ಎಸ್. ಗೀತಾ ಪಾಲ್ಗೊಂಡಿದ್ದರು.
‘ರಂಗೋತ್ಸವ’ದ ವಿವರ
ದಿನಾಂಕ; ನಾಟಕ; ರಚನೆ/ರಂಗರೂಪ; ನಿರ್ದೇಶನ; ತಂಡ
ನ.11; ವಸಂತಯಾಮಿನೀ ಸ್ವಪ್ನ ಚಮತ್ಕಾರ; ಕೆರೂರು ವಾಸುದೇವಾಚಾರ್ಯ; ವಿ.ರಂಗನಾಥ್; ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು
ನ.12; ಹೆಣ್ಮಕ್ಳು ಕಥೆ ಹೇಳ್ತಾರೆ; ಎಂ.ಅರ್ಜುನ; ಎಂ.ಅರ್ಜುನ; ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸೂರು
ನ.13; ಮಾರನಾಯಕ; ಎಚ್.ಎಸ್.ಶಿವಪ್ರಕಾಶ್; ಪಿ.ಚಾಂದಿನಿ; ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಕಾಲೇಜು, ಮೈಸೂರು
ನ.14; ನಾಗಿ–ಕರಿಸಿದ್ದ; ಎ.ಎನ್.ಸುಭಾಷ್; ಎ.ಎನ್.ಸುಭಾಷ್; ಲಾ ಸಲೆಟ್ ಪದವಿ ಪೂರ್ವ ಕಾಲೇಜು, ಮರದೂರು, ಹುಣಸೂರು
ನ.15; ಜತೆಗಿರುವನು ಚಂದಿರ; ಜಯಂತ್ ಕಾಯ್ಕಿಣಿ; ಎಸ್.ಕಾರ್ತಿಕ್; ಅಮೃತಾ ವಿಶ್ವವಿದ್ಯಾಪೀಠಂ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.