ADVERTISEMENT

ಕೋಮು ಗಲಭೆಗೆ ಬಿಜೆಪಿಯವರೇ ಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 8:36 IST
Last Updated 20 ಸೆಪ್ಟೆಂಬರ್ 2024, 8:36 IST
   

ಮೈಸೂರು: ‘ಕೋಮು ಗಲಭೆಗಳಿಗೆ ಬಿಜೆಪಿಯವರೇ ಕಾರಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಬಿಜೆಪಿಯವರ ಪ್ರಚೋದನೆ ಕಾರಣದಿಂದಲೇ ಗಲಾಟೆಗಳು ನಡೆಯುತ್ತಿವೆ’ ಎಂದು ದೂರಿದರು.

‘ರಾಜ್ಯದಲ್ಲಿ 60ಸಾವಿರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಇದುವರೆಗೆ ಎರಡು ಕಡೆಯಷ್ಟೆ ಗಲಾಟೆ ನಡೆದಿದೆ. ದಾವಣಗೆರೆಯಲ್ಲಿ ಕಲ್ಲು ತೂರಾಟವಷ್ಟೆ ಆಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಆ ಘಟನೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಮುಂಜಾಗ್ರತೆ ವಹಿಸುವಂತೆಯೂ ಸೂಚಿಸಿದ್ದೇನೆ. ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಅಲ್ಲಿನ ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ ಅಮಾನತು ಮಾಡಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಒಕ್ಕಲಿಗ ಸಮುದಾಯದ ಸಚಿವರು, ಕಾಂಗ್ರೆಸ್‌ ಶಾಸಕರ ನಿಯೋಗ ಬೆಂಗಳೂರಿನಲ್ಲಿ ಶುಕ್ರವಾರ ನನ್ನನ್ನು ಭೇಟಿಯಾಗಿ, ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಮನವಿ ಸಲ್ಲಿಸಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರಿಗೆ ತಿಳಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಕಾನ್‌ಸ್ಟೆಬಲ್‌ ನೇಮಕಾತಿ ವೇಳೆ ವಯೋಮಿತಿ ಹೆಚ್ಚಿಸುವಂತೆ (27 ವರ್ಷದಿಂದ 33 ವರ್ಷಕ್ಕೆ) ಬೇಡಿಕೆ ಬಂದಿರುವ ಬಗ್ಗೆ ‘ಒಂದು ಬಾರಿ ಅವಕಾಶ ಕೊಡುವ ನಿರ್ಧಾರ’ ಮಾಡುವಂತೆ ಗೃಹ ಸಚಿವರಿಗೆ ಸೂಚಿಸಿದ್ದೇನೆ. ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಎರಡು ತಿಂಗಳ ಒಳಗೆ ಮರು ಪರೀಕ್ಷೆ ನಡೆಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ತಿಳಿಸಿದ್ದೇನೆ. ಈ ಹುದ್ದೆಗಳ ನೇಮಕಾತಿಗೆ ನಡೆದ ಪೂರ್ವಭಾವಿ ಪರೀಕ್ಷೆ ವೇಳೆ, ಪ್ರಶ್ನೆಪತ್ರಿಕೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಹಲವು ತಪ್ಪುಗಳು ಆಗಿದ್ದವು. ಆದ್ದರಿಂದ ಮರು ಪರೀಕ್ಷೆ ನಡೆಸುವಂತೆ ಹೇಳಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗಂಗೇನಹಳ್ಳಿಯಲ್ಲಿ ಬಹುಕೋಟಿ ಮೌಲ್ಯದ ಒಂದು ಎಕರೆ 11 ಗುಂಟೆ ಜಮೀನು ಡಿನೋಟಿಫಿಕೇಷನ್‌ ನಡೆದಿದೆ ಎಂದು ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್, ಸಂತೋಷ್ ಲಾಡ್ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಬೆಲೆ ಬಾಳುವಂತಹ ಜಮೀನದು. ಅಂಥದ್ದನ್ನು ಡಿನೋಟಿಫೈ ಮಾಡಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಭಾಮೈದನಿಗೆ ನೋಂದಣಿ ಆಗಿದೆ. ಅವರ ಅತ್ತೆ ಜಿಪಿಎ ಪಡೆದುಕೊಂಡಿದ್ದಾರೆ. ಆದ್ದರಿಂದ ಇದೊಂದು ಬಹಳ ಗಂಭೀರವಾದ ಪ್ರಕರಣ. ಅದನ್ನು ಈಗಾಗಲೇ ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದೆ, ಡಿನೋಟಿಫೈಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರೂ ಮಾಡಿಸಿದ್ದಾರೆ. ಸತ್ತು ಹೋದವರ ಹೆಸರಿನಲ್ಲಿ ಮಾಡಿಸಿದ್ದಾರೆ. ದಾಖಲೆಗಳನ್ನು ನೋಡಿ, ಮಾಹಿತಿ ಪಡೆದುಕೊಂಡು ಆ ಬಗ್ಗೆ ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.

ವಿರೋಧ ಪಕ್ಷದವರು ಗಾಜಿನ ಮನೆಯಲ್ಲಿ ಕುಳಿತು ಸರ್ಕಾರದ ಮೇಲೆ ಆರೋಪ ಹೊರಿಸುತ್ತಿವೆಯೇ ಎಂಬ ಪ್ರಶ್ನೆಗೆ, ‘ನಾವು ಯಾರ ಮೇಲೆಯೂ ಆರೋಪ ಹೊರಿಸುವ ಕೆಲಸವನ್ನು ಮಾಡಿಲ್ಲ. ಕುಮಾರಸ್ವಾಮಿಯದ್ದು ಯಾವಾಗಲೂ ಹಿಟ್ ಅಂಡ್ ರನ್ ಕೇಸ್. ಅವರು ಯಾವತ್ತೂ ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಕೇಂದ್ರ ಸಚಿವರಾಗಿ ಸತ್ಯವೋ, ಇಲ್ಲವೋ ಎಂಬುದನ್ನು ತಿಳಿದುಕೊಂಡು ಮಾತನಾಡಬೇಕಲ್ಲವೇ?’ ಎಂದು ಕೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಶಾಸಕ ಸಿ.ಪುಟ್ಟರಂಗಶೆಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ‍ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಮಡಾ ಅಧ್ಯಕ್ಷ ಕೆ.ಮರೀಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಕಾಂಗ್ರೆಸ್‌ ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.