ADVERTISEMENT

ಮೈಸೂರು | ‘ಓದಿನೊಂದಿಗೆ ಬರವಣಿಗೆ ಅಭ್ಯಾಸ ಇರಲಿ’

ತರಬೇತಿ ಶಿಬಿರ ಸಮಾರೋಪದಲ್ಲಿ ಮನೋಜ್‌ ಜೈನ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 7:02 IST
Last Updated 24 ಅಕ್ಟೋಬರ್ 2024, 7:02 IST
ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ನಡೆದ ತರಬೇತಿ ಶಿಬಿರದ ಸಮಾರೋಪದಲ್ಲಿ ಅಧ್ಯಯನ ಪುಸ್ತಕವನ್ನು ಮನೋಜ್ ಕುಮಾರ್ ಜೈನ್ ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ
ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ನಡೆದ ತರಬೇತಿ ಶಿಬಿರದ ಸಮಾರೋಪದಲ್ಲಿ ಅಧ್ಯಯನ ಪುಸ್ತಕವನ್ನು ಮನೋಜ್ ಕುಮಾರ್ ಜೈನ್ ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಓದಿನ ಜೊತೆಗೆ ನಿಗದಿತ ಸಮಯದೊಳಗೆ ಬರೆಯುವುದನ್ನೂ ಅಭ್ಯಾಸ ಮಾಡಬೇಕು. ಪರೀಕ್ಷೆಯ ಮೂರು ಗಂಟೆಯು ನಿಮ್ಮ ಜೀವನವನ್ನು ಬದಲಿಸಬಲ್ಲದು’ ಎಂದು ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿ ಮನೋಜ್‌ ಜೈನ್‌ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ನಡೆಸಿದ ಕೆ– ಸೆಟ್‌ ಮತ್ತು ಯುಜಿಸಿ– ನೆಟ್‌ ಪರೀಕ್ಷೆಗಳ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಹದಗೆಟ್ಟಿರುವ ಶೈಕ್ಷಣಿಕ ವ್ಯವಸ್ಥೆಯನ್ನು ಮೇಲೆತ್ತಬಲ್ಲ ಯುವ ಉಪನ್ಯಾಸಕರ ಅಗತ್ಯವಿದೆ. ಮಕ್ಕಳ ಜ್ಞಾನದ ಮಟ್ಟದಲ್ಲಿ ಶಿಕ್ಷಕರಿಲ್ಲದಿದ್ದರೆ ಶಿಕ್ಷಣ ವಲಯ ಸಮತೋಲನದಲ್ಲಿರುವುದು ಅಸಾಧ್ಯ. ಹೀಗಾಗಿ ಉಪನ್ಯಾಸಕರು ಪಠ್ಯದಲ್ಲಿರುವುದನ್ನಷ್ಟೇ ಬೋಧಿಸದೆ ವಿಶ್ಲೇಷನಾತ್ಮಕವಾಗಿ ಮಕ್ಕಳ ಮನಸ್ಸಿಗೆ ಮುಟ್ಟವಂತೆ ಬೋಧಿಸಿದಾಗ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದರು.

ADVERTISEMENT

‘ವಿದ್ಯಾರ್ಥಿಗಳೂ ಜ್ಞಾನದ ಮೂಲಗಳನ್ನು ಅರಿತು ಹೆಚ್ಚಿನ ಜ್ಞಾನ ಸಂಪಾದನೆಯಲ್ಲಿ ತೊಡಗಬೇಕು. ವಿಶಾಲ ಮನಸ್ಥಿತಿಯಿಂದ ಎಲ್ಲವನ್ನೂ ಸ್ವೀಕರಿಸುವ ಮನಸ್ಥಿತಿ ಇರಬೇಕು’ ಎಂದು ತಿಳಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಎಸ್‌.ಅಹಲ್ಯಾ ಮಾತನಾಡಿ, ‘ಆಧುನಿಕ ಕಾಲಘಟ್ಟದಲ್ಲಿ ಉಪನ್ಯಾಸಕರಿಗೆ ಅನೇಕ ಸವಾಲುಗಳಿವೆ. ಮೊಬೈಲ್‌ ಫೋನ್‌ನಲ್ಲೇ ಮುಳುಗಿರುವ, ಗೂಗಲ್‌, ಕೃತಕ ಬುದ್ಧಿಮತ್ತೆ ಜೊತೆಗೆ ಬೆಳೆದಿರುವ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಾಗ ನಮ್ಮಲ್ಲಿ ವಿಶೇಷ ಕೌಶಲ ಅಗತ್ಯ’ ಎಂದು ಹೇಳಿದರು.

‘ಭಾವನಾತ್ಮಕವಾಗಿ ವಿದ್ಯಾರ್ಥಿಗಳ ಮನಮುಟ್ಟುವಂತೆ ಸಂಬಂಧಿಸಿದ ವಿಷಯದ ಬಗ್ಗೆ ತಿಳಿಸಿದಾಗ ಗುರುಗಳು ಎಂದಿಗೂ ಅವರ ಮನದಲ್ಲಿ ಉಳಿಯುತ್ತಾರೆ. ಹೀಗಾಗಿ ಪಠ್ಯವನ್ನಷ್ಟೇ ಬೋಧಿಸುವ ಶಿಕ್ಷಕರಾಗಿ ಉಳಿಯದೆ, ಜೀವನದ ಪಾಠ ಹೇಳುವ ಪ್ರಾಚಾರ್ಯರಾಗಿ ಬೆಳಬೇಕು’ ಎಂದು ಸಲಹೆ ನೀಡಿದರು.

ಕುಲಪತಿ ಶರಣಪ್ಪ ವಿ.ಹ‌ಲಸೆ, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಪರೀಕ್ಷಾಂಗ ಕುಲಸಚಿವ ಎಚ್‌.ವಿಶ್ವನಾಥ್‌, ಅಧ್ಯಯನ ವಿಭಾಗದ ಮುಖ್ಯಸ್ಥ ರಾಮನಾಥಂ ನಾಯ್ಡು, ಕೇಂದ್ರದ ಸಂಚಾಲಕ ಜೈನಹಳ್ಳಿ ಸತ್ಯನಾರಾಯಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.