ADVERTISEMENT

ಲೋಕಾಯುಕ್ತ ವಿರುದ್ಧ ರಾಜ್ಯಪಾಲರಿಗೆ ದೂರು

ಸರ್ಚ್‌ ವಾರಂಟ್‌ ನೀಡಲು ಉದ್ದೇಶಪೂರ್ವಕ ವಿಳಂಬ ಆರೋಪ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 22:37 IST
Last Updated 14 ಅಕ್ಟೋಬರ್ 2024, 22:37 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

ಮೈಸೂರು: ‘ಮುಡಾ ಹಗರಣಕ್ಕೆ ಸಂಬಂಧಿಸಿ 1 ಸಾವಿರ ಪುಟಗಳ ಸಾಕ್ಷ್ಯ ಸಂಗ್ರಹಿಸಿದ್ದಾಗ್ಯೂ ದಾಳಿ ನಡೆಸದೇ, ಸರ್ಕಾರದ ಜೊತೆ ಶಾಮೀಲಾಗಿ ಕಿಕ್‌ಬ್ಯಾಕ್‌ ಪಡೆದು ನಿರ್ಲಕ್ಷ್ಯ ತೋರಿದ ಲೋಕಾಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಇಲ್ಲಿನ ಆರ್‌ಟಿಐ ಕಾರ್ಯಕರ್ತ ಗಂಗರಾಜು ರಾಜ್ಯಪಾಲರಿಗೆ ಸೋಮವಾರ ಇ–ಮೇಲ್‌ ಹಾಗೂ ಅಂಚೆ ಮೂಲಕ ದೂರು ಸಲ್ಲಿಸಿದ್ದಾರೆ.

‘ಲೋಕಾಯುಕ್ತದ ಮೈಸೂರು ಕಚೇರಿಯ ಇನ್‌ಸ್ಪೆಕ್ಟರ್‌ ರವಿಕುಮಾರ್‌ ನೇತೃತ್ವದ ತಂಡವು ಮುಡಾದಲ್ಲಿನ ಅಕ್ರಮಗಳ ಕುರಿತು ಸಾಕ್ಷ್ಯ ಕಲೆಹಾಕಿ ಸರ್ಚ್ ವಾರಂಟ್‌ ಕೋರಿ ಅಂದಿನ ಲೋಕಾಯುಕ್ತ ಎಸ್‌.ಪಿ. ವಿ.ಜೆ. ಸುಜಿತ್ ಮೂಲಕ ಲೋಕಾಯುಕ್ತ ಬೆಂಗಳೂರು ಕಚೇರಿಗೆ ಮನವಿ ಸಲ್ಲಿಸಿತ್ತು. ಆದರೆ, ಉದ್ದೇಶಪೂರ್ವಕವಾಗಿ 28 ದಿನ ವಿಳಂಬ ಮಾಡಿ ಲೋಕಾಯುಕ್ತವು ಸರ್ಚ್ ವಾರಂಟ್‌ ನೀಡಿತು. ಅಷ್ಟರೊಳಗೆ, ಲೋಕಾಯುಕ್ತದ ಕೆಲವು ಅಧಿಕಾರಿಗಳಿಂದಲೇ ಈ ಮಾಹಿತಿ ಸರ್ಕಾರಕ್ಕೆ ಸೋರಿಕೆ ಆಗಿದ್ದು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಐಎಎಸ್‌ ಅಧಿಕಾರಿಗಳ ತಂಡವೊಂದನ್ನು ಕಳುಹಿಸಿ 140ಕ್ಕೂ ಹೆಚ್ಚು ಕಡತಗಳನ್ನು ಮುಡಾ ಕಚೇರಿಯಿಂದ ಬೆಂಗಳೂರಿಗೆ ತರಿಸಿಕೊಂಡಿದ್ದರು. ಜುಲೈ 4ರಂದು ಎಸ್.ಪಿ. ಸುಜಿತ್‌ ಇಲ್ಲಿಂದ ವರ್ಗವಾಗಿದ್ದು, 5ರಂದು ಲೋಕಾಯುಕ್ತ ತನ್ನ ಸರ್ಚ್‌ ವಾರಂಟ್‌ ಹಿಂಪಡೆದಿದೆ’ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ADVERTISEMENT

‘ಲೋಕಾಯುಕ್ತದ ಮೈಸೂರು ಅಧಿಕಾರಿಯೊಬ್ಬರು ದಾಳಿ ಕುರಿತು ಮೊದಲೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರಿಗೆ ಮಾಹಿತಿ ನೀಡಿದ್ದರು. ನಂತರ ಎಲ್ಲರೂ ಜೊತೆಗೂಡಿ ಹಣ ಪಡೆದು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ಈ ಕಾರಣಕ್ಕಾಗಿಯೇ ಲೋಕಾಯುಕ್ತ ದಾಳಿ ನಡೆಯಲಿಲ್ಲ. ಸರ್ಚ್‌ ವಾರಂಟ್ ನೀಡಲು ವಿಳಂಬ ಮಾಡಿದ್ದರಿಂದ ಮುಡಾದಲ್ಲಿ ಸಾಕಷ್ಟು ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

‘ಲೋಕಾಯುಕ್ತಕ್ಕೆ ಸಾಕಷ್ಟು ಮುಂಚೆಯೇ ಮಾಹಿತಿ ಇದ್ದರೂ ಸರ್ಚ್‌ ವಾರಂಟ್‌ ನೀಡಲು ವಿಳಂಬ ಮಾಡಿದ್ದೇಕೆ ಎಂಬುದರ ಬಗ್ಗೆ ಸಿಬಿಐನಂತಹ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಶಾಮೀಲಾಗಿರುವ ಕರ್ನಾಟಕ ಲೋಕಾಯುಕ್ತದ ಹಿರಿಯ ಅಧಿಕಾರಿಗಳು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಮಾರುತಿ ಬಗಲಿ, ಮುಡಾದ ಹಿಂದಿನ ಆಯುಕ್ತರಾದ ಡಿ.ಬಿ. ನಟೇಶ್‌, ಜಿ.ಟಿ. ದಿನೇಶ್‌ಕುಮಾರ್‌ ವಿರುದ್ಧ ತನಿಖೆ ನಡೆಸಬೇಕು’ ಎಂದು ಕೋರಿದ್ದಾರೆ.

ಸಿದ್ದರಾಮಯ್ಯ ವಿಚಾರಣೆಗೆ ಒತ್ತಾಯಿಸಿ ಮನವಿ

ಮೈಸೂರು: ಮುಡಾ ಪ್ರಕರಣದಲ್ಲಿ ಮೊದಲ ಆರೋಪಿ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸೋಮವಾರ ಇಲ್ಲಿನ ಲೋಕಾಯುಕ್ತ ಪೊಲೀಸರಿಗೆ ಮನವಿ ಸಲ್ಲಿಸಿದರು.

25 ಪುಟಗಳ ವಿವರವಾದ ಪತ್ರವನ್ನು ಲೋಕಾಯುಕ್ತ ಎಸ್.ಪಿ. ಟಿ.ಜೆ. ಉದೇಶ್‌ ಅವರಿಗೆ ಸಲ್ಲಿಸಿರುವ ಕೃಷ್ಣ, ಪ್ರಕರಣಕ್ಕೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳ ಮಾಹಿತಿಯನ್ನೂ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್‌ ಅರ್ಜಿಯೊಂದಿಗೆ ನೀಡಿರುವ ದಾಖಲೆಗಳಲ್ಲಿನ ಲೋಪಗಳ ಕುರಿತು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡುತ್ತಿದ್ದು, ಅದನ್ನೇ ಆಧರಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿದ್ದಾರೆ.

ರಾಜ್ಯ ಸರ್ಕಾರವು ಆಯುಧಪೂಜೆಯಂದು ಮಾಧ್ಯಮಗಳಿಗೆ ನೀಡಿರುವ ಜಾಹೀರಾತಿನ ಬಗ್ಗೆಯೂ ದೂರುದಾರರು ಆಕ್ಷೇಪಿಸಿದ್ದು, ವೈಯಕ್ತಿಕ ಆರೋಪಗಳಿಗೆ ಉತ್ತರವಾಗಿ ಸರ್ಕಾರಿ ವೆಚ್ಚದಲ್ಲಿ ಜಾಹೀರಾತು ನೀಡಲಾಗಿದೆ. ಇದು ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೆಯೇ, ಮುಖ್ಯಮಂತ್ರಿ ತಮ್ಮ ಮೇಲಿನ ವೈಯಕ್ತಿಕ ಆರೋಪಗಳಿಗೆ ಸ್ಪಷ್ಟನೆ ನೀಡಲು ವಾರ್ತಾ ಇಲಾಖೆಯನ್ನು ಬಳಸಿಕೊಂಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಜನರಿಗೆ ತಮ್ಮ ಭಾಷಣ ಹಾಗೂ ಜಾಹೀರಾತುಗಳ ಮೂಲಕ ಪ್ರಚೋದನೆ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಬದಲಿ ನಿವೇಶನ ಕೋರಿ ಬಿ.ಎಂ. ಪಾರ್ವತಿ ಮುಡಾಕ್ಕೆ ಸಲ್ಲಿಸಿದ್ದ ಅರ್ಜಿಯ ಮೊದಲ ಪುಟವನ್ನು ಮಾತ್ರ ಸಿದ್ದರಾಮಯ್ಯ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಆದರೆ, ಅದೇ ಪತ್ರದ 2ನೇ ಪುಟವನ್ನು ಉದ್ದೇಶಪೂರ್ವಕವಾಗಿ ಸಲ್ಲಿಸಿಲ್ಲ. 2ನೇ ಪುಟದ ಕೆಲವು ಕಡೆ ವೈಟ್ನರ್ ಹಚ್ಚಿ, ವಿಜಯನಗರದಲ್ಲಿ ನಿವೇಶನ ಕೋರಿದ್ದ ವಿಚಾರವನ್ನು ಮುಚ್ಚಿಡಲಾಗಿದೆ. ಈ ಕಾರಣದಿಂದಲೇ ನ್ಯಾಯಾಲಯಕ್ಕೆ ಎರಡನೇ ಪುಟ ಸಲ್ಲಿಸಿಲ್ಲ. ಇದೇ ಪತ್ರಕ್ಕೆ ಸಂಬಂಧಿಸಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ಎಂಬುವರು ಮಾಡಿರುವ ವಿಡಿಯೊವೊಂದನ್ನು ಸಿದ್ದರಾಮಯ್ಯ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದು, ಅದನ್ನೂ ತನಿಖೆಗೆ ಒಳಪಡಿಸಬೇಕು’ ಎಂದು ಕೋರಿದ್ದಾರೆ.

‘ಸಿದ್ದರಾಮಯ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ಕ್ಕೆ 1968ರಿಂದ ಮೈಲಾರಯ್ಯ ಅವರೇ ಮಾಲೀಕರು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆದರೆ, ಮೈಲಾರಯ್ಯ ಅವರಿಂದ ಪ್ರಕರಣದ 4ನೇ ಆರೋಪಿ ದೇವರಾಜು ಅವರಿಗೆ ಯಾವ ದಾಖಲೆಗಳ ಮೂಲಕ ಜಮೀನು ವರ್ಗಾವಣೆ ಆಯಿತು ಎಂಬ ದಾಖಲೆಗಳನ್ನು ಸಲ್ಲಿಸಿಲ್ಲ. ಹೈಕೋರ್ಟ್‌ಗೆ ನೀಡಿರುವ ಆರ್‌ಟಿಸಿಯಲ್ಲೇ 2004ರವರೆಗೆ ಈ ಜಮೀನು ಮುಡಾಕ್ಕೆ ಸೇರಿದ್ದು ಎಂಬುದು ಉಲ್ಲೇಖವಾಗಿದೆ. ಮಲ್ಲಿಕಾರ್ಜುನ ಸ್ವಾಮಿ ಹಾಗೂ ಬಿ.ಎಂ. ಪಾರ್ವತಿ ಅವರಿಗೆ ಜಮೀನು ನೋಂದಣಿ ಆಗುವ ಮುನ್ನವೇ ಅಲ್ಲಿ ಮುಡಾ ಬಡಾವಣೆ ನಿರ್ಮಿಸಿ ಫಲಾನುಭವಿಗಳಿಗೆ ನೋಂದಣಿ ಮಾಡಿಕೊಟ್ಟಿದ್ದನ್ನು ಮುಚ್ಚಿಟ್ಟು ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಲಾಗಿದೆ. ನಿವೇಶನಗಳು ಇದ್ದರೂ 2005ರಲ್ಲಿ ಜಿಲ್ಲಾಧಿಕಾರಿಯಿಂದ ಕೃಷಿ ಭೂಮಿ ಎಂದು ಅನ್ಯಕ್ರಾಂತ ಆದೇಶ ಮಾಡಿಸಿಕೊಂಡು ಅಕ್ರಮ ಎಸಗಿರುವುದು ಅವರು ನೀಡಿರುವ ದಾಖಲೆಗಳಿಂದಲೇ ಸಾಬೀತಾಗಿದೆ’ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.